ವಿಶಾದಾವಾದ...

Posted by ನಟರಾಜ್ ವಿ.ಎಸ್. on 24-Dec-2016
ಮನವೇಕೋ ಲದ್ದಿಯ ಮುದ್ದೆಯಾಗಿ ಅಮಲೇರಿರಲು
ಬರೀ ನಾನು ನೀನೆಂಬ ಮೂಢ ಪ್ರಾಬಲ್ಯದ ಧರ್ಮಾಧಿಕಾರ;
ಕೊಳಕು ಮನದ ಮೇಲಿನ ಸುಗಂಧ ದ್ರವ್ಯದ ದುರ್ನಾತವಿರಲು
ಎತ್ತಿಂದೆತ್ತ ಅಲೆದಾಟ, ಅಲೆಮಾರಿಯ ದಿಕ್ಕೆಟ್ಟ ದಾರಿಯಲಿ...

ಸುಪ್ತಭಾವಗಳ ಕರ್ಕಶ ಆಲಾಪನೆಯ ಬೆನ್ನಿಗೆ
ಕೆಕ್ಕರಿಸಿ ಕಿಸಿಯುವ ಬಾಸುಗಳ ಕರ್ಮಾಧಿಕಾರ;
ಭರವಸಯೆಂಬ ನೀರವ ನೂಲುಗಳು ಗಂಟಾಗಿರಲು
ಎತ್ತಿಂದೆತ್ತ ಅಲೆದಾಟ, ಅಲೆಮಾರಿಯ ದಿಕ್ಕೆಟ್ಟ ದಾರಿಯಲಿ...

ಹತ್ತಾರು ಜನರ ನೂರೊಂದು ನುಸುಡುಗಳ ನಡುವಿನ
ವಿಶಾಲ ಕಿಷ್ಕಿಂಧೆಯಲಿ ಕುರುಡು ಧೃತರಾಷ್ಟ್ರನ ಅಂಧಾಧಿಕಾರ;
ನಿರಾವಲಂಬಿ ಸುಗುಣ ಅವಿವೇಕಿ ಫಕೀರನಂತಿರಲು
ಎತ್ತಿಂದೆತ್ತ ಅಲೆದಾಟ, ಅಲೆಮಾರಿಯ ದಿಕ್ಕೆಟ್ಟ ದಾರಿಯಲಿ...

ನಿನ್ನೆ ನಾಳೆಗಳ ರೌದ್ರಕಾಳಗದ ಜೀವನದಿ
ವಿದೂಷಕ ದಳಪತಿಯ ಸುಭಿಕ್ಷ ಸರ್ವಾಧಿಕಾರ;
ಬಯಕೆಗೂ ಬವಣೆಗೂ ಸಮಾರಾಧನೆ ಶತಸಿದ್ಧವಿರಲು
ಎತ್ತಿಂದೆತ್ತ ಅಲೆದಾಟ, ಅಲೆಮಾರಿಯ ದಿಕ್ಕೆಟ್ಟ ದಾರಿಯಲಿ...

ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...