ಕಿರಿಕ್ ಪಾರ್ಟಿ - ಒಂದು ಹುಡುಗೀರ್ ಗ್ಯಾಂಗ್ ಕಥೆ

Posted by ಮಂದಾರ ಕೆ.ಆರ್ on 08-Jan-2017
ಅಂತು ಇಂತೂ ಎಲ್ಲರೂ "ಕಿರಿಕ್ ಪಾರ್ಟಿ" ನೋಡಿ ವರ್ಷವೇ ಕಳೆದ ಮೇಲೆ ನಾನು ಕೂಡ ಚಿತ್ರ ನೋಡಿ ಬರುವ ಪಣ ತೊಟ್ಟಿದ್ದೆ. ಸರತಿಯಲ್ಲಿ ನಿಂತೂ ಟಿಕೆಟ್ ಸಿಗದೇ ಒದ್ದಾಡುವುದು ಬೇಡ ಎಂದು ಮೊದಲೇ ನಿರ್ಧರಿಸಿದ್ದರಿಂದ ಒಂದಕ್ಕೆರಡು ಬೆಲೆ ತೆತ್ತು "Book My Show" ನಲ್ಲಿ ಟಿಕೆಟ್ ಕಾದಿರಿಸಿದ್ದೆ. ಬೆಳಿಗ್ಗೆಯಿಂದಲೇ ಏನೋ ಖುಷಿ...ರಕ್ಷಿತ್ ಶೆಟ್ಟಿ ಚಿತ್ರ ಅಂದ್ರೆ ಎನೋ ಹೊಸ ಕುತೂಹಲ ಇರತ್ತೆ. ನಾನೂ ನನ್ನ ಫ಼್ರೆಂಡ್ ಅರ್ಧ ತಾಸು ಮುಂಚೆಯೇ ಚಿತ್ರ ಮಂದಿರ ತಲುಪಿದ್ವಿ.ತಿನ್ನಲು ಪಾಪ್ ಕಾರ್ನ್, ಕುಡಿಯಲು ಅದೇನೋ ಕಪ್ಪು ನೀರು ಬೇಕು ಅಂತ ತಗೊಂಡ್ಳು ನನ್ನ ಗೆಳತಿ ಆದ್ರೆ ನಂಗತೂ ಅದನ್ನ ನೋಡುದ್ರೆ ಕೆಂಗೇರಿ ಮೋರಿ ನೀರನ್ನ ಅಂದದ ಬಾಟಲಿ ಗೆ ಹಾಕಿ ಕೊಟ್ಟಂಗೆ ಇರತ್ತೆ. ಚಿತ್ರ ನೋಡ್ತಾ ನೋಡ್ತಾ ಹಾಗೇ ನಮ್ಮ ಕಾಲೇಜ್ ಜೀವನ ತೆರೆಯ ಮೇಲೆ ಬರ್ತಾ ಇದೆಯೇನೋ ಅನ್ನುಸ್ತಿತ್ತು. ಚಿತ್ರದಲ್ಲಿ "ಕರ್ಣ" ನ ಗೆಳೆಯರು ಅವರು ಮಾಡುವ ತರಲೆಗಳು ತೋರ್ಸಿದಾರೆ ಆದ್ರೆ ನನ್ನ ತಲೇಲಿ ಮಾತ್ರ ಇದೇ ಮೂವಿ ಯ "Girls Version"
ಓಡ್ತಾ ಇತ್ತು.."ಆರ್ಯ" ಮತ್ತು "ಸಾನ್ವಿ"ಯ ಗೆಳೆಯರು, ಅವರು ಮಾಡಿರ ಬಹುದಾದ ತರ್ಲೆಗಳು ಓಡ್ತಾ ಇತ್ತು.ಯಾಕಂದ್ರೆ ಈ ಮೂವಿಯ " Girls Version" ನನ್ನ ಕಾಲೇಜ್ ಲೈಫ್ ಗೆ ತುಂಬಾ ಹತ್ತಿರ ಆಗಿದ್ದು.

ಎಣ್ಣೆ ಹೋಡೆಯೋದು, ಗರ್ಲ್ಸ್ ಹಾಸ್ಟೆಲ್ ಹೋಗೋದು, ಕಾರಲ್ಲಿ ಕಾಲೇಜ್ ಲ್ಲಿ ರೌಂಡ್ ಹೋಡೆಯೋದು ಹುಡುಗರ ನೆನಪುಗಳಾದ್ರೆ ಹುಡುಗಿಯರ ಕಾಲೇಜ್ ನೆನಪುಗಳು ಬೇರೆಯದೇ ರೀತಿಯಲ್ಲಿ ಸುಂದರವಾಗಿರುತ್ತದೆ.

ಹುಡುಗಿಯರ ಗ್ಯಾಂಗ್ ನಲ್ಲಿ ಏನಿಲ್ಲವೆಂದರೂ ಇಬ್ಬರು ಹುಡುಗರಿರುತ್ತಾರೆ ಅಥವಾ ಕೇವಲ "ಆರ್ಯ" ನ ತರದ ಹುಡುಗಿಯರ ದೊಡ್ಡ ದಂಡೇ ಇರುತ್ತದೆ. ನನ್ನದು ಎರಡನೇ ಗುಂಪು..ಇಂತಹ ಹುಡುಗಿಯರ ಗ್ಯಾಂಗ್ ನಲ್ಲಿ ಒಂದಿಬ್ಬರು ಅಂದದ ಹುಡುಗಿಯರು ಮೊದಲೆರಡು ವರ್ಷಗಳಲ್ಲೇ ಯಾವುದೋ ಹುಡುಗರು ಕೊಟ್ಟ ಗುಲಾಬಿ ತೆಗೆದುಕೊಂಡಾಗಿರುತ್ತದೆ. ನಮ್ಮದು ಕಾಲೇಜ್ ನಲ್ಲಿ ದೊಡ್ಡ ಗ್ಯಾಂಗು.. ನಾವು ಹುಡುಗಿಯರು ಏನೇ ಮಾಡಿದರೂ ಎಲ್ಲೇ ಹೋದರೂ ನಮ್ಮ ವ್ಯವಹಾರ ಏನಿದ್ದರೂ ಗುಂಪಿನಲ್ಲಿ ಮಾತ್ರ.ಒಬ್ಬೊಬ್ಬರೇ ತಿರುಗುವುದು ನಮಗೆ ತಿಳಿದೇ ಇರಲಿಲ್ಲ ಎನ್ನಬಹುದು. ನನ್ನದು ಎಂಟು-ಒಂಬತ್ತು ಹುಡುಗಿಯರಿದ್ದ ದೊಡ್ಡ ಗುಂಪಾದ್ದರಿಂದ ನಾವು ಕಾಲೇಜಿನ ರಸ್ತೆಗಳಲ್ಲಿ, ಇಡೀ ರಸ್ತೆಯ ತುಂಬಾ ನಡೆದು ಬರುತ್ತಿದ್ದರೆ ಜಪ್ಪಯ್ಯ ಎಂದರೂ ವಾಹನ ಗಳಿಗೆ ಜಾಗ ಕೊಡುತ್ತಿರಲಿಲ್ಲ. ಹುಡುಗಿಯರ ಗುಂಪೊಂದು ಕಾಲೇಜಿನ ರಸ್ತೆಗಳಲ್ಲಿ ಎಲ್ಲರ ಕಣ್ಣು ಕುಕ್ಕುವಂತೆ ನಡೆದು ಬರುವದು ನಮಗೆ ಎಲ್ಲಿಲ್ಲದ ಹೆಮ್ಮೆಯ ವಿಷಯವಾಗಿತ್ತು.
ನಮ್ಮದು ಅಷ್ಟು ದೊಡ್ಡ ಗುಂಪಾದ್ದರಿಂದ ನಮ್ಮ ಗುಂಪಿಗೆ ಎದುರುಗಡೆಯಿಂದ ಕಾಮೆಂಟ್ ಹೊಡೆಯುವ ಧೈರ್ಯ ಯಾರೂ ಮಾಡುತ್ತಿರಲಿಲ್ಲವಾದರೂ ಕಾಲೇಜಿನ ಕನ್ಫೆಶನ್ ಪೇಜ್(Confession Page) ನಲ್ಲಿ ನಮಗೇ ಕಾದಿರಿಸಿದ್ದ ಸಾಲುಗಳಿರುತ್ತಿದ್ದವು. ಪರೀಕ್ಷೆಯ ಸಮಯ ಬಂದರೆ ಕಂಬೈಂಡ್ ಸ್ಟಡಿ ಹೆಸರಿನಲ್ಲಿ ಕಾಲೇಜು ಲೈಬ್ರರಿಯಲ್ಲೋ, ಗೆಳತಿಯ ರೂಂ ನಲ್ಲೋ ಸೇರಿ ಹರಟುತ್ತಿದ್ವಿ. Internals ಗಂತೂ ನಾವು ಮುಂಚೆಯೇ ಓದಿ ಬರೆದ ಇತಿಹಾಸವೇ ಇಲ್ಲ. ಬೆಳಿಗ್ಗೆ ಇರುವ ಪರೀಕ್ಷೆಗೆ ಹಿಂದಿನ ದಿನ ಇನ್ನೇನು ಎಲ್ಲಾ ಜೆರಾಕ್ಸ್ ಅಂಗಡಿಗಳು ಮುಚ್ಚುತ್ತವೆ ಎಂಬ ಸಮಯದಲ್ಲಿ ಓಡಿ ಹೋಗಿ ನೋಟ್ಸ್ ತರೋದು ಆ ಒಂದೇ ನೋಟ್ಸ್ ಲ್ಲಿ ಎಲ್ಲರೂ ಒಂದೊಂದು ಭಾಗ ಓದಿ ಎಲ್ಲರೂ ಅವರವರು ಓದಿದ್ದನ್ನ ಮಿಕ್ಕಿದವರಿಗೆ ವಿವರಿಸೋದು ಹೀಗೇ ಹೇಗೋ ಮಾಡಿ ಮಿಸ್ಸ್ ಇಲ್ದೇ ಇಂಟರ್ನಲ್ ಆವರೇಜ್ ಅಂತೂ ಇಟ್ಕೋತಿದ್ವಿ.

ಕಾಲೇಜಿನ ಕ್ಯಾಂಟೀನು, ಕಾಲೇಜು ಬಸ್ಸು ಚಾಲಕರು ಎಲ್ಲರೂ ನಮ್ಮ ಗೆಳೆಯರೇ ಆದ್ದರಿಂದ ಇಡೀ ಕಾಲೇಜೇ ನಮ್ಮದು ಎಂಬ ಫೀಲಿಂಗ್ ಅವಾಗವಗ ಬರ್ತಿತ್ತು. ಕಾಲೇಜ್ ಲಿ ಕ್ಲಾಸ್ ಇರ್ಲಿ, ಬಿಡ್ಲಿ ನಾವಂತು ಕಾಲೇಜ್ ನಲ್ಲೇ ಇರ್ತಿದ್ವಿ. ಒಂದೇ ಊಟದ ಡಬ್ಬಿಯಲ್ಲಿ ಎಲ್ಲರೂ ಕಿತ್ತಾಡಿ ತಿನ್ನೋದು, ಫ್ರೆಂಡ್ ಗೆ ಹುಷಾರಿಲ್ಲದಾಗ ಕ್ಲಾಸ್ ಗೆ ಬಂಕ್ ಹಾಕಿ ಆಸ್ಪತ್ರೆಗೆ ಹೋಗಿದ್ದು, ಮೊದಲ ವರ್ಷದಲ್ಲೆ ಸೀನಿಯರ್ Couple ಜೊತೆ ಕಿರಿಕ್ ಮಾಡ್ಕೊಂಡು ಅವರಿಗೆ ಲೈಲಾ-ಮಜ್ನು ಅಂತ ಹೆಸರಿಟ್ಟಿದ್ದು,ಕಾಲೇಜ್ ನಲ್ಲಿ ಹೋಳಿ ಆಡಿ HOD ಹತ್ರ ಬೈಸಿಕೊಂಡಿದ್ದು,ಲ್ಯಾಬ್ ಪ್ರೋಗ್ರಾಮ್ಸ್ ಎಲ್ಲಾ ಬೇಗ ಮುಗಿಸಿ ಮೂವಿ ಗೆ ಹೋಗ್ತಿದ್ದದ್ದು,ಮಾಸ್ ಬಂಕ್ ಮಾಡಿ ಸ್ಕೂಟಿ, ಬೈಕಿನಲ್ಲಿ ಊರು ಸುತ್ತುತ್ತಿದ್ದದ್ದು, ಬಂಕ್ ಮಾಡಿದ ತಪ್ಪಿಗೆ ಪುಟಗಟ್ಟಲೇ Asignment ಬರಿತಿದ್ದದ್ದು,"ಅಣ್ಣಾ ಹಜಾರೆ" ಮತ್ತು "ನಿರ್ಭಯಾ" ಸಲುವಾಗಿ ಕಪ್ಪು ಬಟ್ಟೆ ತೊಟ್ಟು ಮೆರವಣಿಗೆ ಹೋಗಿದ್ದು, ಮೈಕ್ ಹಿಡಿದು ಇಡೀ ಜಗತ್ತನ್ನೇ ಗೆಲ್ಲುವಷ್ಟು ರೋಷದಲ್ಲಿ ಮಾತಾಡಿದ್ದು,ಕಾಲೇಜು Fest ಗಳಲ್ಲಿ ಒಂದೇ ತರಹದ ಬಟ್ಟೆ ತೊಟ್ಟು ವೇದಿಕೆಯ ಮೇಲೆ ಮಾಡುವ ನೃತ್ಯ ಬಿಟ್ಟು ಎಲ್ಲಾ ನಮ್ಮನ್ನೇ ನೋಡುವಂತೆ
Back Stage ನಲ್ಲಿ ಡಾನ್ಸ್ ಮಾಡಿದ್ದು,ಜೂನಿಯರ್ಸ್ ನ Welcome ಮಾಡೋಕೆ ಕ್ರಿಕೆಟ್ ಆಡ್ಸಿದ್ದು, ಕಾಲೇಜ್ ನಲ್ಲೇ "Spirit Come" ಆಟ ಆಡಿ ಭಯ ಬಿದ್ದಿದ್ದು, Teachers Day ಹೆಸರಿನಲ್ಲಿ ಅಂತ್ಯಾಕ್ಷರಿ ಆಡಿಸ್ತಿದ್ದದ್ದು, ಎಲ್ಲಾ ಒಟ್ಟಿಗೆ ಸೇರಿ ಕ್ಯಾಂಟೀನು ಮೂಲೆಲಿ ಫ್ರೆಂಡ್ "ಬರ್ತ್ ಡೇ" ಆಚರಿಸ್ತಿದದ್ದು,"Birthday Bumps" ಹೆಸರಿನಲ್ಲಿ ಸಿಕ್ಕಿದ್ದೇ chance ಎಂಬತೆ ಗುದ್ದಾಡುತಿದ್ದದ್ದು, Internals ನ ಒಂದು ಅಂಕಕ್ಕೋಸ್ಕರ ಟೀಚರ್ ಹಿಂದೆ ಅಲಿತಿದ್ದದ್ದು,ಲಾಸ್ಟ್ ಬೆಂಚ್ ಸೀಟ್ Reserve ಮಾಡಲೆಂದೇ ದಿನಕ್ಕೊಬ್ಬರಂತೆ ಗೆಳೆಯರೆಲ್ಲಾ ತರಗತಿಗೆ ಬೇಗ ಹೋಗ್ತಿದದ್ದು, ಸೀನಿಯರ್ Crush ನ ನೋಡೋಕೆಂದೇ ಕ್ಯಾಂಟೀನಿಗೆ ಹೋಗ್ತಿದದ್ದು, ಆದ್ರೆ ಆ ಸೀನಿಯರ್ ಇನ್ಯಾರೂ ಹುಡುಗಿಯ ಜೊತೆ ಇದ್ದದ್ದು ನೋಡಿ ಉರ್ಕೋತಿದದ್ದು, ಹೆಚ್ಚು ಮಾರ್ಕ್ ತೆಗೆದಾಗ ಸರ್ ಕೊಡುತಿದ್ದ "Pen" ಗೋಸ್ಕರನೇ Re-valuation ಹಾಕ್ತಿದ್ದದ್ದು,"Branch Fest" ಚನ್ನಾಗಿ ಮಾಡಿ ದೊಡ್ಡ ಸಾಹಸ ಮಾಡಿದ ಫೀಲಿಂಗ್ ಲಿ ಕುಣಿದಾಡ್ತಿದದ್ದು, sem ಗೊಂದು ಕ್ಲಾಸ್ ಟ್ರಿಪ್ ಮಧ್ಯದಲ್ಲೊಂದು "Girls Trip", ಮತ್ತೊಂದಿಷ್ಟು ಜಗಳ ಗಲಾಟೆ, ಜಗಳ ಎಲ್ಲಾ ಸರಿ ಹೋಗಿ ಒಂದಾದಾಗ ಅಯ್ಯೋ ಇಷ್ಟೇನಾ..ಇದಕ್ಕೇ ಇಷ್ಟೋಂದು ಕಿತ್ತಾಡಿದ್ವಾ ಅಂತ ಅಪ್ಪಿಕೊತಿದ್ದದ್ದು,ಬರೀ ಹುಡುಗರೇ ತುಂಬಿರುತಿದ್ದ "ಜಯಣ್ಣ ಕ್ಯಾಂಟೀನ್" ನಲ್ಲಿ ಬೋಂಡ ತಿಂದು ಬಂದು ಹಿಗ್ಗಿದ್ದು, ಫೈನಲ್ ಇಯರ್ ಲಿ Interview ಗೆಂದೇ ಹೊಸ ಚೂಡಿದಾರ್ ಗಳನ್ನ ಒಟ್ಟಿಗೆ ಕೊಂಡದ್ದು, Interview room ಒಳಗೆ ಹೋಗುವಾಗ ಬೆನ್ನು ತಟ್ಟಿ ಕಳಿಸಿದ್ದ ಗೆಳೆಯರು Interview clear ಆದಾಗ ಓಡಿ ಬಂದು ತಬ್ಬಿಕೊಂಡ ಹೆಮ್ಮೆಯ ಕ್ಷಣ, ಕೆಲಸ ಸಿಕ್ಕಾಗ ಎಲ್ಲರಿಗೂ ಪಾರ್ಟಿ ಕೊಡ್ಸಿ ಕುಣಿದದ್ದು, ಜೂನಿಯರ್ಸ್ Farewell ಪಾರ್ಟಿ ಕೊಟ್ಟಾಗ ನೆನಪುಗಳ ಬುತ್ತಿಯಲ್ಲಿ ಒಂದಾಗಿ ಕಣ್ಣೀರಿಟ್ಟ ಆ ಘಳಿಗೆ, ಇವೆಲ್ಲವೂ ಇಂದಿಗೂ ನನ್ನ ಮನಸಲ್ಲಿ ಹಚ್ಚ ಹಸಿರಾಗಿದೆ. "Product Launch" ನಲ್ಲಿ ಮೂರು ವರ್ಷಗಳಲ್ಲೂ Prize ಪಡೆದ ಹೆಮ್ಮೆ ನಮ್ಮ Girls ಗುಂಪಿಗೆ ಇದೆ. ಕಾಲೇಜು ಬಿಡುವ ಮೊದಲು ಏನಾದರೂ ನೆನಪಿನಲ್ಲುಳಿಯುವಂತೆ ಮಾಡಬೇಕೆಂದು "short movie " ಹೆಸರಲ್ಲಿ ದಿನವಿಡೀ ಕ್ಯಾಮೆರಾ ಹಿಡಿದು ಇಡೀ ಕಾಲೇಜು ಸುತ್ತುತ್ತಿದ್ದದ್ದು, ಹೀಗೆ ಕಾಲೇಜು ನಮ್ಮೆಲ್ಲರ ಪಾಲಿನ ಮನೆಯಾಗಿತ್ತು,ಕೂಡು ಕುಟುಂಬವಾಗಿತ್ತು.

ಏನೇ ಖುಷಿ ಆದ್ರೂ ಏನೇ ಬೇಜಾರ್ ಆದ್ರೂ ಗೋಲಗಪ್ಪ ಕೊಡೋ Northie ಹುಡುಗನ ಸುತ್ತ "ಭಯ್ಯಾ" ಅಂತ ನಿಂತು ಅವನ ಹತ್ರ ಅರ್ಧಂಬರ್ದ ಹಿಂದಿ ಲಿ ಮಾತಾಡಿ ಗೋಲಗಪ್ಪ ತಿಂದ್ರೇನೇ ಮನಸ್ಸಿಗೆ ನೆಮ್ಮದಿ. ಕಾಲೇಜಿಗೆ ನಮ್ಮಂತೆ ಸಾವಿರ ವಿದ್ಯಾರ್ಥಿಗಳು ಬರುತ್ತಾರೆ, ಗುರುಗಳು ನಮ್ಮಂತ ಅನೇಕ ವಿದ್ಯಾರ್ಥಿಗಳನ್ನು ನೋಡಿರುತ್ತಾರೆ ಅವರಿಗೆ ಇದೆಲ್ಲಾ ಹೊಸತಲ್ಲ.ಆದರೆ ನಮಗೂ ಕಾಲೇಜಿಗೂ ಅದೇನೋ ಒಂದು ಬಿಡಿಸಲಾರದ ನಂಟಿರುತ್ತದಲ್ಲ ಅದು ಒಂತರಾ ಅದ್ಭುತ ಕಲ್ಪನೆ.ಈಗಲೂ ಕಾಲೇಜಿಗೇ ಹೋದಾಗ ನಮ್ಮ ಕಣ್ಣೆದುರು ನಮ್ಮ ಕಾಲೇಜಿನ ದಿನದ ಚಿತ್ರಗಳು ಕನಸಿನಂತೆ ಸುಳಿದಾಗ ಒಳಗೊಳಗೇ ಅದೇನೋ ಸಾರ್ಥಕತೆ ಯ ಭಾವ. ನಾವು ನಗದೇ ಇದ್ದ ದಿನಗಳಿಲ್ಲ, ಮಾಡದೇ ಇದ್ದ ಕೀಟಲೆಗಳಿಲ್ಲ.ನಿನ್ನೆಯ ಚಿಂತೆಯಿರಲಿಲ್ಲ, ನಾಳೆಯ ಜವಾಬ್ದಾರಿಯಿರಲಿಲ್ಲ.ಬದುಕು ಇಂದಿಗೆ ಮಾತ್ರ ಸೀಮಿತವಾಗಿತ್ತು ಹಾಗಾಗಿಯೇ ಜೀವನದಲ್ಲಿ ಮುಗಿಯದ ಉತ್ಸಾಹವಿತ್ತು. ಅಂದು ಅತ್ತಾಗ ಒರಗಲು ಎಷ್ಟೊಂದು ಭುಜಗಳಿತ್ತು, ಖುಷಿಗೆ ಜೊತೆಯಾಗುವ ಹುಚ್ಚು ಮನಸ್ಸುಗಳಿದ್ದವು, ಏನನ್ನೇ ಆದರೂ ಒಟ್ಟಿಗೆ ಎದರಿಸುತ್ತೇವೆಂಬ ಬಲವಿತ್ತು. ಆದರೆ ಇಂದು ಅತ್ತರೆ ದಿಂಬಿನ ಜೊತೆ, ಖುಷಿಗೆ ಫೋನಿನ ಜೊತೆ ಬಿಟ್ಟರೆ ಅಂದಿದ್ದ ಜೀವಂತಿಕೆ ಇಂದು ಇಲ್ಲ ಎಂಬುದಂತೂ ಅಕ್ಷರಶಃ ಸತ್ಯ. "College life is golden life" ಅಂತಾರಲ್ಲ ಹಾಗೆ ಈ ಗೋಲ್ಡನ್ ಲೈಫ್ ಮುಗಿದು ಹೋಗಿದ್ದರೂ ಆ ನೆನಪುಗಳು ಎಂದಿಗೂ ಜೀವಂತ.

ಬರೆಯಲು ಹೋದರೆ ಪುಸ್ತಕವನ್ನೇ ಬರೆಯಬಹುದಾದಷ್ಟು ನೆನಪುಗಳನ್ನು ನನ್ನ ಕಾಲೇಜು ಜೀವನ ನನಗೆ ಕೊಟ್ಟಿದೆ. ಆದರೆ ಎಲ್ಲವನ್ನೂ ಬರೆಯಲು ಆಗಲ್ವಲ್ಲ.ಕೆಲವು "Girls secret" ,ಇನ್ನೂ ಕೆಲವು ಮನಸಲ್ಲೇ ಉಳಿದು ಮಾತಾಗಲು ಇಚ್ಚಿಸದ ವಿಷಯಗಳು.ಏನೇ ಇರಲಿ ಮತ್ತೊಮ್ಮೆ ನನ್ನ ಕಾಲೇಜು ದಿನಗಳನ್ನ ನೆನಪಿಸಿದ "ಕಿರಿಕ್ ಪಾರ್ಟಿ"ಗೊಂದು ಥಾಂಕ್ಸ್.


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...