ಮರೆಯದೆ ಮುಡಿಸು ಮಲ್ಲಿಗೆ

Posted by ಸೌಮ್ಯ ನಟರಾಜ್ on 15-Jan-2017
ಮುಸ್ಸಂಜೆ ಮುಂದಾಗಿರಲು, ಹಗಲನು ಹಿಂದಿಕ್ಕಿ
ಮನೆಯಂಗಳವ ಮಡಿ ಮಾಡಿರುವೆ
ರಂಗಿನ ರಂಗಾವಲಿಯನ್ನಿಟ್ಟು...
ಅಂದದಿ ಅಲಂಕಾರಗೊಂಡಿರುವೆ
ಸಂಜೆ ಸ್ನಾನ ಮುಗಿಸಿ ನಾ ಸೀರೆಯನ್ನುಟ್ಟು...

ಬಿರುಸಾದ ಗಾಳಿ ಜೊತೆಗೆ
ಭಾರಿ ಮಳೆಯಾಗಿರಲು ಹೊರಗೆ
ಬರಿ ದೀಪಗಳದೆ ಬೆಳಕು ನಮ್ಮೀಮನೆಯೊಳಗೆ...
ಅಂಜಿಕೆ ಅಂತೇನಿಲ್ಲವೊ ಒಂಟಿಯಾಗಿರಲು
ನಿನ್ನ ಬರುವಿಕೆಯಲ್ಲಿ ತಡವಾದರಷ್ಟೆ
ನನಗೇನೊ ದಿಗಿಲು...

ಬಾಗಿಲೊಂದನ್ನು ಹಾಕದೆ
ನಡುಮನೆಯ ಕಂಬಕ್ಕೆ ಒರಗಿ ಕುಂತಿರುವೆ
ನಿನಗಾಗಿ ನಾನು ಕಾಯುತ್ತ...
ಸಣ್ಣ ಕನಸಲ್ಲಿ ಜಾರಿದಾ
ಮನಕ್ಕೆ ಚೂರು ಅರಿವಿಲ್ಲ
ಸದಿಲ್ಲದೆ ಬಂದಿರಲು ನೀನು ನನ್ನತ್ತ...

ಎಚ್ಚರಗೊಂಡ ನನ್ನೀ ಕಣ್ಣುಗಳಲ್ಲಿ
ನಿನ್ನ ನೋಡಿ ತುಂಬಿರಲು ಪ್ರೀತಿ ಪ್ರೇಮ ಮತ್ತು ಸಲಿಗೆ...
ಮುನಿಸಿಕೊಂಡವಳಂತೆ ನಟಿಸಿ
ನಿನ್ನಿಂದ ದೂರ ನಿಂತಾಗ
ಮರೆಯದೆ ಮುಡಿಸು ನೀ ತಂದ ಮಲ್ಲಿಗೆ...


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...