ನನ್ನ ಪ್ರೀತಿಯ ಬ್ರಾಹ್ಮಣಿಗೆ...!

Posted by ಶ್ರೀನಿಧಿ ವಿ.ನಾ. on 23-Jan-2017
ಪ್ರೀತಿಯ ರಾಧೆ!

ಅಂದು ಶನಿವಾರ, ಅಗ್ರಹಾರದ ಶ್ಯಾಮಭಟ್ಟರ ಮನೆಯ ಚಾವಡಿಯಲ್ಲಿ ಕೂತು, ಅವರೊಂದಿಗೆ ಲೋಕಾಭಿರಾಮ ಹರಟುವಾಗ, ಎಲ್ಲಿಂದನೋ ಚಂಗನೆ ನೆಗೆಯುತ್ತಾ ಬಂದೆ ನೀನು! ಹೆಬ್ಬೆರಳ ತುದಿಯಲ್ಲೇ ಓಡುತ್ತಾ ಬಂದವಳು ಸೀದಾ ಮನೆಯೊಳಗೆ ಓಡಿದ್ದೆ. ಕಾಲ್ಗೆಜ್ಜೆಯ ಆ ಶಬ್ಧ ನನ್ನೆದೆಯೊಳಗೆ ಮುಚ್ಚಿಟ್ಟಿದ್ದ ಅದ್ಯಾವ್ದೋ ನೆನಪನ್ನು ಉದ್ರೇಕಿಸಿತ್ತು!


ಅದಾಗಿ ಎರಡು ಹುಣ್ಣಿಮೆಯೊಳಗೆ, ಅಮ್ಮನ ಒತ್ತಾಯಕ್ಕೆ ಹೆಣ್ಣು ನೋಡಲೆಂದು ಹೊರಟಿದ್ದೆ. ಶುಭ್ರ ಬಿಳಿಯ ಬಟ್ಟೆ ಧರಿಸಿದ್ದ ನನ್ನ ಭುಜದ ಮೇಲೊಂದು ಶಾಲು ಹಾಕಿ, ಹಣೆಗೊಂದಿಷ್ಟು ಕುಂಕುಮವಿಟ್ಟು "ಹೋಗು, ಸೊಸೇನಾ ಕರ್ಕೋಂಡೇ ಬಾ!" ಅಂದಿದ್ಲು ಅಮ್ಮ! ಅವಳ ಕಾಲಿಗೆ ತಲೆಯ ತುದಿ ತಾಗಿಸಿ, ಕಿವಿಗೊಮ್ಮೆ ತುಟಿಯೊತ್ತಿ ನಾ ಬೇಲಿ ದಾಟಿ ಹೊರಟಾಗ ಅವಳ ಕಣ್ಣಲ್ಲಿ ಮಿಂಚುವ ನೀರು!


ಅಲ್ಲೇ ಕಟ್ಟಿದ್ದ ದನ, ಲಕ್ಷ್ಮೀ ಮೇಯುತ್ತಿದ್ದ ಹುಲ್ಲಿಂದ ತಲೆಯೆತ್ತಿ, ನನ್ನತ್ತ ನೋಡಿ, ಒಮ್ಮೆಲೆ ಕೂಗಿದ್ದಳು! ಅವಳ ಕಂಗಳಲ್ಲೂ ಬಾಗಿಲ ಬಳಿ ನಿಂತ ಅಮ್ಮನ ಹರಕೆಯೇ ಕಂಡಿತ್ತು!


ಅಲ್ಲಿ ಇಲ್ಲಿ ದಾರಿ ಕೇಳಿಕೊಂಡು, ನನ್ನ ಬಾಲ್ಯದ ಗೆಳೆಯ ಸದಾಶಿವ ಭಟ್ರ ಮಗ ಚಂದ್ರುವಿನ ಜೊತೆ ನಿಮ್ಮ ಮನೆಗೆ ಬರುವಷ್ಟರಲ್ಲಿ ಮಧ್ಯಾಹ್ನ ಹನ್ನೆರೆಡು! ತಾಮ್ರದ ಚೊಂಬಿನ ನೀರು ಕಾಲಿಗೆ ತಾಕಿಸಿದೊಡನೆ ಜೀವ ಹಗುರವಾಗಿತ್ತು, ಕದ್ದುಕದ್ದು ನಿನ್ನ ನೋಡುವುದೊಂದೇ ಬಾಕಿಯಿತ್ತು! ನಿಮ್ಮ ತಂದೆ-ತಾಯಿ ನಮ್ಮನ್ನು ಉಪಚರಿಸುವಷ್ಟರಲ್ಲಿ ನೀ ಬಂದೆ, ಮಜ್ಜಿಗೆಯ ಲೋಟಗಳ ಹಿಡಿದು. ಚಂದ್ರು ಇವತ್ತಿಗೂ ನಗಾಡ್ತಾನೆ, "ಗಣಪತಿ ಹೋಮಕ್ಕೆ ಕೂತಾಗ ಆಗೋ ತರ, ನಿನ್ನ ಮುಖ ಕೆಂಪಾಗಿತ್ತು, ಅದೇನ್ ಆತರಾ ನಾಚ್ಕೊಂಡಿದ್ಯೋ" ಅಂತ! ಬರೀ ತೀರ್ಥ ಅನ್ಕೊಂಡು ಕುಡ್ಯುವಾಗ, ಮಧ್ಯ ದ್ರಾಕ್ಷಿ ಸಿಕ್ರೆ ಆಗೋವಂತ ಖುಷಿ ಆಗಿತ್ತು ನಂಗೆ ನಿನ್ನ ನೋಡಿ! ಖುಷಿಯಲ್ಲಿ ಮುಖ ಕೆಂಪೇರಿತ್ತು.


ನಡುಮನೆಯ ಬಾಗಿಲಿನಲ್ಲಿ ಚೂರೇ ಚೂರು ಮುಖವ ಹೊರಹಾಕಿ, ನನ್ನತ್ತ ಅದೇನೋ ಸಣ್ಣ ಭಯ ಹಾಗೂ ಸಂತಸದ ನೋಟ ಬೀರುತ್ತಿದ್ದೆ ನೀನು! ಮೂಗಿನ ತುದಿಯ ನತ್ತು, ಕಿವಿಯಲ್ಲಿ ಜುಮುಕಿ, ಸೆರಗಿನ ತುದಿಯನ್ನು ಸುಮ್ನೆ ಬೆರಳ ತುದಿಯಲ್ಲಿ ಸಿಕ್ಕಿಸಿಕೊಂಡು ನೋಡುತ್ತಿದ್ದ ನಿನ್ನ ಹೆಸರು ರಾಧೆ ಅಂತ ಗೊತ್ತಾದಾಗ ಅಲ್ಲೇ ನಮ್ಮ ಗಾಂಧರ್ವ ವಿವಾಹವಾಗಿ ಹೋಗಿತ್ತು!


ಬಹುಳ ನವಮಿಯಂದು ನೀನು ಗೋಧೂಳಿ ಘಳಿಗೆಯಲ್ಲಿ ತುಂಬಿಸಿಟ್ಟಿದ್ದ ಸೇರನ್ನು ಒದ್ದು, ಮನೆಯೊಳಗೆ ಹೆಜ್ಜೆಯಿಟ್ಟಾಗ ಜಗುಲಿಯ ತುಂಬೆಲ್ಲಾ ಅಕ್ಕಿ! ಮೂಲೆಯಲ್ಲಿ ಕೂತಿದ್ದ ನನ್ನ ಎತ್ತಾಡಿಸಿದ್ದ ಮುದುಕಮ್ಮ ".ಬಂಗಾರದಂತಾ ಹುಡುಗಿ, ಅಂಗಳದ ತುಂಬಾ ಅನ್ನ ಬೆಳೆಯೋ ಗುಣದೋಳು..." ಅಂತ ಉದ್ಘರಿಸಿದ್ದನ್ನ ಕೊಟ್ಟಿಗೆಯಲಿದ್ದ ಲಕ್ಷ್ಮಿ ಹೂಂಕರಿಸಿ ಅನುಮೋದಿಸಿದ್ದಳು!


ಮದುವೆಯ ಓಡಾಟದಲ್ಲಿ ಸುಸ್ತಾಗಿದ್ದ ಎಲ್ಲರೆದುರು ಪೆಠಾರಿಯ ಮೇಲೆ ಕೂತು, ಮೀರಾಳ ಭಜನೆಯನ್ನು ನೀನು ಮನಮರೆತು ಹಾಡುವಾಗ ನನ್ನಮ್ಮ ತಡೆಯಲಾಗದೇ ತಾನೂ ಜೊತೆಗೆ ದನಿಯಾಗಿದ್ದಳು!


ಅದಾದಮೇಲೆ ಸಾವಿರ ಮುಂಜಾವುಗಳಾಗಿದೆ, ಹಬ್ಬ ಹರಿದಿನ ಗಳಾಗಿದೆ, ಮಿಂದ ಕೂದಲನ್ನು ಹಾಗೇಯೇ ಎಂಬಂತೆ ಸಣ್ಣದೊಂದು ಗಂಟು ಹಾಕಿಕೊಂಡು ನೀನು ಕೆಲಸದಲ್ಲಿ ನಿರತಳಾಗಿದ್ದೂ ಆಗಿದೆ! ಆದರೆ, ಅದ್ಯಾಕೋ ಇಂದು ಬೆಳಿಗ್ಗೆ ಮುಂಜಾವಿನಲ್ಲಿ ಎದ್ದು, ಶೀಗೆಕಾಯಿಯೊಂದಿಗೆ ತಲೆಯುದ್ದಿಕೊಂಡು, ಅಂಗಳಕ್ಕೆ ನೀರು ಹಾಕಿ ನೀ ತುದಿಗಾಲಿನಲ್ಲಿ ನಿಂತು ಬರೆದ ರಂಗೋಲಿ ಬಹಳವಾಗಿ ಕಾಡಿತು! ಪ್ರತೀ ಎಳೆಯಲ್ಲೂ ನಿನ್ನ ನಾಜೂಕು ಬೆರಳಿನ ಕೆಲಸ ಎದ್ದು ಕಾಣುತಿತ್ತು!


ಪ್ರತೀ ರಾತ್ರಿ ನೀನು ಇರೋಬರೋ ಪಾತ್ರೆಯನ್ನೆಲ್ಲಾ ತೊಳೆದಿಟ್ಟು, ಮುಸುರೆ ಸಾರಿಸಿ, ಗೋಮಾಯದಿಂದ ಅಡುಗೆಮನೆ ಶುದ್ಧಗೊಳಿಸಿಕೊಂಡು, ಶಬ್ದಮಾಡೋ ಅಗುಳಿ ಹಾಕಿ , ಶಬ್ಧವಿಲ್ಲದೇ ತನ್ನಷ್ಟಕ್ಕೇ ಯಾವುದೋ ಹಾಡುಹೇಳುತ್ತಾ ಬಂದು ನನ್ನೊಳಗೆ ಒಂದಾಗುವ ನೀನು ಬರುವವರೆಗೆ ಮನದಲ್ಲಿ ತಳಮಳ!
ಅಂಗುಲದಗಲದ ಕುಂಕುಮ ಹಣೆಯಲ್ಲಿ ಬೆವರವುಷ್ಟು ಕಾಲ ನನ್ನೊಳಗೆ ಬೆರೆತು, ಇನ್ನೇನು ಕಣ್ಮುಚ್ಚುವಷ್ಟರಲ್ಲಿ ಮತ್ತೆ ಬೆಳಗು!


ನಿನ್ನ ಹೆಸರಿನಿಂದ ಹಿಡಿದು ನಿನ್ನ ಸೆರಗಿನ ತುದಿಯ ಗಂಟಿನ ಮೇಲೂ ಒಲವಾಗಿದೆ ಹೆಂಡ್ತೀ! 'ಇವಳೇ' 'ನಮ್ಮನೆಯವಳು' ಅಂತೆಲ್ಲಾ ನಿನ್ನ ಸಂಭೋದಿಸುವಾಗ ಮನದಲ್ಲಿ ವಿಚಿತ್ರ ಹೆಮ್ಮೆ! ನೀ ತನ್ನಷ್ಟಕ್ಕೇ ಹಾಡಾಗಿ, ಪಡುಸಾಲೆಯಲ್ಲಿ ಮಧ್ಯಾಹ್ನ ಕೂತಾಗ ಓದಲು ಈ ಪತ್ರ! ಮೊನ್ನೆ ತಂದ ಕನ್ನಡಕ ಹಾಕಿಕೊಂಡೇ ಓದು! ಎಂಬತ್ತು ವಸಂತ ಒಟ್ಟಿಗೇ ಕಳೆದರೂ, ನಿನ್ನ ಬಳೆಯ ಶಬ್ಧ, ಕಾಲ್ಗೆಜ್ಜೆಯ ದನಿಯ ನೆರಳು ಕಂಡರೂ ಸಾಕು, ನಿಂತಲ್ಲೆ ಹಂದಾಡ್ತೀನಿ! ಈಗಲೂ ನಿನ್ನ ಉಸಿರಿಂದ ಹಿಡಿದು, ನಿನ್ನ ಹಣೆಯ ಮೇಲಿನ ಕಾಸಗಲದ ಕುಂಕುಮದ ಮೇಲೂ ನನ್ನದೆಂಬ ವ್ಯಾಮೋಹವಿದೆ!
- ನಿನ್ನ ಪ್ರೀತಿಯ "ಹೋಯ್!"


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...