ಕಾಣೆಯಾದ ಕಾಲು-ದಾರಿ!

Posted by ರಕ್ಷಿತ್ ಆಚಾರ್ on 25-Jan-2017
ಬಾಲ್ಯದಲ್ಲಿ ಮನಸ್ಸಿನಂತೆ ಶರೀರವು ಹರಿಯುತ್ತಿದ್ದಾಗ, ಮೊಬೈಲ್ ನ ಗೀಳು, ಬೈಕ್-ಕಾರುಗಳ ಸಂಬಂಧವೇ ಇರದಿದ್ದಾಗ. ಕಂಡ ದಾರಿಯ ಬಿಟ್ಟು, ಕೇಳಿ ಅಷ್ಟೇ ಅರಿತಿದ್ದ, ಕಂಡು ಅರಿಯದ ದಾರಿಯ ಅನುಸರಿಸುವ ತವಕವೂ, ಮೀರಿಸುತಿತ್ತು ಹಿರಿಯರು ಕೆಲವೊಂದು ಜಾಗ, ದಾರಿಯಲಿ ಹೋಗಬಾರದೆಂದು ಕಟ್ಟಿದ, ಭಯದ ಬೇಲಿಯ. ನಮ್ಮ ಮನೆಯ ಮಲೆನಾಡ ಪರಿಸರದಲ್ಲಿ, ನಾನು ಮತ್ತು ನನ್ನ ಗೆಳೆಯರು ಅರಿಯದ ಹಾಗೂ ನಡೆದು ಸಾಗದ ದಾರಿಗಳೇ ಇಲ್ಲ. ಹಾಗೆಯೇ ಅಂತಹ ದಾರಿಯಲ್ಲಿ ಹುಮ್ಮಸ್ಸಿನಿಂದ ಸಾಗುವಾಗ  ಎದುರಾದ ಆಘಾತಕ್ಕಿಂತ, ಎದುರಾಗಿದ್ದು ಇರುಸು-ಮುರಿಸುಗೆ ಒಳಗಾಗುವಂತಹ ದೃಶ್ಯಗಳೇ ಹೆಚ್ಚು. ಎಷ್ಟಾದರೂ ನಾವು ಮೀರಿ ಹೋಗಿರುವುದು, ಹಿರಿಯರು ಹಾಕಿದ್ದ ಭಯದ ಬೇಲಿಯನ್ನಲ್ಲವೇ?


ಗದ್ದೆಯ ಬದುಗಳಲ್ಲಿ ಒಬ್ಬರ ಹಿಂದೆ ಒಬ್ಬರಾಗಿ, ಸಾಲಾಗಿ. ಸಾರಿಗೆ, ಬೀ. ಎಮ್. ಎಸ್ ಮತ್ತು ಅನ್ನಪೂರ್ಣೇಶ್ವರಿ ಬಸ್ಸುಗಳನ್ನು ನೆನೆದು, ಸ್ಟೇರಿಂಗ್ ತಿರುಗಿಸಿಕೊಂಡು, ಬಾಯಲ್ಲೇ ಹೊರೋನ್ ಹೊಡೆದುಕೊಂಡು ನಡೆದಾಡಿದ್ದು.

ಭಾನುವಾರ, ಶನಿವಾರ ಆಟದ ಮೈದಾನಕ್ಕೆ ಎಲ್ಲರಿಗೂ ಮುಂಚಿತವಾಗಿ ಹೊರಡಿ, ಗೆಳೆಯರ ಮನೆಯಂಗಳಕೆ ಹೋಗಿ ಬಾರೋ... ಬರ್ತೀಯಾ ಇಲ್ಲ್ವಾ... ?  ಓ ಹೊಗಾಯ್ತಾ...? ಅಂತೆಲ್ಲ ವಿಚಾರಿಸಿ ಊರ ಬಯಲಿಗೆ ಗುಂಪಾಗಿ ಧಾವಿಸಿ ಆಡಿದ ಕ್ರಿಕೆಟ್ ಆಟ.

ಬೆಟ್ಟದ ಕಾಡಿನ ದಾರಿಯಲಿ ತರಗೆಲೆಗಳ ನಡುವಲ್ಲಿ ಸದ್ದಾಗದಂತೆ ಹೆಜ್ಜೆಯನ್ನಿಟ್ಟು, ಬೆಟ್ಟದ ಶಿಖರದ ಕೆರೆಯಲ್ಲಿ ನೀರುಕಾಗೆ, ನವಿಲು, ಕಾಡ್ಕೋಳಿ, ಚಿಟ್ಟುಕೋಳಿ, ಮೊಲ ಮುಂತಾದ ಪ್ರಾಣಿ-ಪಕ್ಷಿಗಳ ಚೆಲ್ಲಾಟ ಹಾಡು ಕುಣಿತಗಳನ್ನು ಕಣ್ಣುತುಂಬಿಕೊಂಡದ್ದು.

ಆಲ, ಹೆಬ್ಬಲಸು, ಪೆನ್ನೇರ್‌ಳೆ, ಪೇರಳೆ, ನೇರಳೆ, ನೆಲ್ಲಿ, ಚಕ್ಕೊತ್ತ, ಅಂಜೂರ ಇನ್ನೂ ಹಲವಾರು ಹಣ್ಣುಗಳನ್ನು ಆಯಾ ಆಯಾ ಮರದಲ್ಲಿಯೋ ಮರದ ಬುಡದಲ್ಲಿಯೋ ಸವಿದಿದ್ದು.

ಶಾಲೆಗೆ ಗುಂಪು-ಗುಂಪಾಗಿ ನಡೆಯುತ್ತಿದ್ದಿದ್ದು, ಇನ್ನೊಂದು ದಾರಿಯ ಬಳಸಿ ನಡೆದೊ, ಓಡಿಯೋ ಮುಂದೆ ಸಾಗುತ್ತಿದ್ದ ಸ್ನೇಹಿತರಿಗಿಂತಲೂ ಮುಂಚಿತವಾಗಿ ಶಾಲೆಯನ್ನು ಸೇರಿ, ಸೂಪರ್ ಮ್ಯಾನ್ನಂತೆ  ಪೋಸ್ ಕೊಡುತ್ತಿದ್ದಿದ್ದು.

ಸಂಜೆ ಕೆಂಪಾಗಿ ಕಪ್ಪಾದ ನಂತರವೂ ಬರದ ನಮ್ಮ ಮನೆಯ ದನಕರುಗಳನ್ನು, ಅವುಗಳಿಗಿಂತಲೂ ವೇಗವಾಗಿ ಓಡಿ, ಕವಲು ದಾರಿಗಳಲ್ಲಿ ನಿಘಾ ವಹಿಸಿ, ನಮ್ಮ ದಾರಿಗೆ ತಿರುಗಿಸಿ, ಮನೆಗೆ ಹೊಡೆದುಕೊಂಡು ಬರುತ್ತಿದಿದ್ದು. ಒಂದೇ ದಿನದಲ್ಲಿ ನಾವು ಈ ಎಲ್ಲ ಚಟುವಟಿಕೆಗಳಲ್ಲಿ ಭಾಗಿಯಾಗಿರುತ್ತಿದ್ದೆವು, ಈ ಎಲ್ಲ ಚಟುವಟಿಕೆಗಳಲ್ಲೂ ನಾವು ನಡೆದಾಡಿಕೊಂಡೆ ಮಾಡುತಿದ್ದೆವು ಎಂದೆನ್ನಲು ಆಶ್ಚರ್ಯ, ಸಂತೋಷ ಒಂದಾಗುವುದು. ಇಲ್ಲಿ ಸಂತೋಷಕ್ಕಿಂತ ಆಶ್ಚರ್ಯವೇ ಒಂದು ಪಟ್ಟು ಜಾಸ್ತಿ. ಕಾರಣವಿಷ್ಟೆ, ನಮಗೆ ಇಷ್ಟೆಲ್ಲ ಸಮಯವಿತ್ತೆ? ಎಂದು. ಇತ್ತು ಖಂಡಿತ ಇತ್ತು.


ಕಾರಣವಿಷ್ಟೇ,

ನಾವು ಮೊಬೈಲ್ ಕಂಪ್ಯೂಟರ್ಗಳ ಮುಂದೆ ಘಂಟೆಗಟ್ಟಲೆ ಕೂತು, Candy-crush, Temple-run ಆಟ ಆಡಿ ಆಸನ ಬಿಸಿ ಏರಿಸಿಕೊಂಡವರಲ್ಲ. ಬದಲಾಗಿ ಗದ್ದೆಯ ಬದುವಿನಲ್ಲಿ ಬಹಳ ನಾಜೂಕಿನಿಂದ ಕಾಣದ ಬಸ್ಸು ಬಿಟ್ಟವರು, ಬಂಡಿಯನ್ನು ಕಿಲೋ-ಮೀಟರ್ ಗಟ್ಟಲೆ, ಚಾರ್ಜ್ ನೆಟ್‌ವೋರ್ಕ್‌ನ ತಲೆಬಿಸಿ ಇಲ್ಲದೆ ಓಡಿಸಿದವರು.

ಆಟದ ಮೈದಾನಕ್ಕೆ ಬಸ್ಸು ಬೈಕಲ್ಲಿ ಹೋದವರಲ್ಲ, ಆಡಲು ಗೆಳೆಯರನ್ನು facebook, whatsapp ಮುಖಾಂತರ ಇನ್ವೈಟ್ ಮಾಡಿ ಲೈಕ್, ಶೇರ್ ಮಾಡಿ  ಒಂದುಗೂಡಿಸಿದವರಲ್ಲ, ಬದಲಾಗಿ ಪ್ರತಿ ಗೆಳೆಯನ ಮನೆಯಂಗಳಕೆ ಖುದ್ದಾಗಿ ಭೇಟಿ ನೀಡಿ, ನನ್ನ ತಂದೆ-ತಾಯಿ ಇಂದ ಪಡೆದ ಆಶೀರ್ವಾದ ಸಾಲದೆಂಬಂತೆ, ಸ್ನೇಹಿತರ ಪೋಷಕರಿಂದಲೂ ಆಶೀರ್ವಾದ (ಬೈಗುಳ) ವನ್ನು ಪಡೆದು ನಡೆದೊ, ನೆಗೆದೋ, ಓಡಿಯೋ. ಮೈದಾನದಲ್ಲಿ ಒಂದಾಗಿ ಕಾಲ ಕಳೆಯುತ್ತಿದ್ದೆವು.


ಪ್ರಾಣಿ-ಪಕ್ಷಿಗಳನ್ನು ಪ್ರಾಣಿಸಂಗ್ರಾಲಯದಲ್ಲಿ ನೋಡಲು ಹಾತೊರೆದವರಲ್ಲ ನಾವು, ಅದರ ಕಲ್ಪನೆಯೂ ಇರಲಿಲ್ಲ ಬಿಡಿ. ನಮ್ಮ ಸ್ವರ ಸದ್ದುಗಳನ್ನು ಸ್ಟಭ್ಧವಾಗಿರಿಸಿ, ಸ್ವಾತಂತ್ರ್ಯದೀ ಹಾರಾಡೋ, ಹಾಡು ಹಾಡೋ, ಓಡಾಡೋ ಪ್ರಾಣಿಗಳನ್ನು ಗದರಿಸದೆ ಅವು ಸಂತಸದಲ್ಲಿ ಜಗ ಮರೆಯುದನ್ನು ನೋಡಲು ಇಚ್ಚಿಸಿದ ಸ್ವಚ್ಛ ಮನಸ್ವಿಗಳು. ಅಲ್ಲಿ ಎಲ್ಲೂ ಮೊಬೈಲ್ ರಿಂಗ್ ಆಗೋ ಅಥವಾ ವಾಹಾನದ ಸದ್ಧಿಗೆ ಪ್ರಾಣಿ ತಲ್ಲಣವಾಗುವ ಭಯವೂ ಇರಲಿಲ್ಲ. ಕಾರಣ ಸರಿಯಾದ ದಾರಿ (ರಸ್ತೆ) ಇರದೆ ಕಾಲು ದಾರಿಯೇ ಗತಿ, ಆಗಿದ್ದರಿಂದ.


ಶಾಲೆಗೆ ಹೋಗಲು ಬಸ್ಸು, ಆಟೋ ಕಾದವರೂ ಅಲ್ಲ ನಾವು, ಕಾದಿದ್ದು ನಡೆದು ನೂರು ಮಾತಲ್ಲಿ ಒಂದಾಗಿ, ಸಾಗಬೇಕಿದ್ದ ದಾರಿಯ   ಮಾತಲ್ಲೇ ಮರೆಸುತ್ತಿದ್ದ ಗೆಳೆಯರ ಬಳಗವನ್ನು ಮಾತ್ರ. ಸಂಜೆಯಾದೊಡನೆ ಸೊಳ್ಳೆಬತ್ತಿ ಹಚ್ಚಿ ಬಾಗಿಲು ಹಾಕಿಕೊಂಡು ಟೀವೀ ಮುಂದೆ ಕೂತವರಲ್ಲ ನಾವು, ಬಾರದ ದನ-ಕರುಗಳಿಗಾಗಿ ಮೂರು ಗದ್ದೆ-ಬಯಲು, ಒಂದೆರಡು ಹಳ್ಳ-ಹೊಳೆ ಬದಿ ಸುತ್ತಿ, ದನ ಓಡಿಸಿಕೊಂಡು ಬಂದು ದೇವರಿಗೆ ಭಕ್ತಿಯಿಂದ ದೀಪ ಹಚ್ಚಿದವರು. ಈಗ ನನಗನಿಸುತ್ತಿರುವುದು ನಮ್ಮ, ಬೇಡ ನನ್ನ ಜೀವನದಲ್ಲೇ, ಇಂತಹ ಯಾವುದಾದರೂ ಒಂದು, ಒಂದೇ ಒಂದು ಚಟುವಟಿಕೆ ಇದೆಯಾ... ? ಎಂದು.


ಹೀಗೆಲ್ಲ ಅನ್ನಿಸಿದ್ದು, ಕಳೆದ ರಜೆಯಲ್ಲಿ ಮನೆಗೆ ಹೋಗಿದ್ದಾಗ, ನನ್ನ ಮನೆಯಿಂದ ಬಾಳಗಡಿ ಅನ್ನೋ ಊರಿಗೆ ಇದ್ದ 5 ನಿಮಿಷದ ಕಾಲು ದಾರಿ ಕಾಣೆಯಾಗಿದ್ದನ್ನು ಕಂಡು.

ಕಿವಿ ಹಕ್ಕಿಯು ಹಾರಡದೆ ಹಾರಡದೆ, ಹಾರುವುದನ್ನೇ ಮರೆತಂತೆ. ಭವಿಷ್ಯದಲ್ಲಿ ಮನುಷ್ಯನು ನಡೆದಾಡದಂತೆ ಆಗಲಾರ ಎನ್ನಲು, ಸಾಧ್ಯವಿಲ್ಲ. ಅಲ್ಲವೇ?....


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...