ಕಣ್ಣಲ್ಲೇ ಸ್ಪರ್ಶಿಸುವ ನಿಮ್ಮ ಕಂಗಳಿಗಾಗಿ...!

Posted by ಶ್ರೀನಿಧಿ ವಿ.ನಾ. on 06-Feb-2017
ನನ್ನ ಮನೆಯವರಿಗೆ!
ಮೊನ್ನೆ ಜಾತ್ರೆಮೈದಾನದ ಮೂಲೆಯ ಅಂಗಡಿಯಲ್ಲಿ ತಿಳಿಕೆಂಪು ಕಚ್ಚಿನ ಬಳೆಯನ್ನ, ಅಂಗಡಿಯವಳು "..ಬೇಡಾಮ್ಮಾ ನಿಮ್ಗೆ ಈ ಸೈಜ್ ಆಗೋದಿಲ್ಲಾ.." ಅಂತ ಹೇಳ್ತಿದ್ರುವಾ ಒಂದೊಂದು ಕೈಗೂ ಒಂದೊಂದು ಡಜನ್ ಇಟ್ಕೊಂಡು ಬಂದಿದ್ದೆ! ಸದಾ ಗೊಣಗುಟ್ಟುವ ಅತ್ತೆ ಕೂಡ ಸಣ್ಣಗೆ ನಕ್ಕಿದ್ದನ್ನ ಓರೆಗಣ್ಣಿಂದ ನೋಡಿದ್ದೆ. ನೀವು ಅದೊಂದು ವಿಚಿತ್ರ ತೃಪ್ತಿಯಿಂದ, ನನ್ನ ಕೈಯಲ್ಲಿನ ಬಳೆಯನ್ನ ಒಂದೊಂದಕ್ಕೆ ಕುಟ್ಟುತ್ತಾ ಮುಗುಳ್ನಗುವ ಕ್ಷಣಕ್ಕಾಗಿ ಇಂತ ನೂರು ನೋವು ಮಾಫ಼ಿ!
ಬೆಳಿಗ್ಗೆ ಎದ್ದು ಗೋಡೆಯಲ್ಲಿ ನೇತುಹಾಕಿರೋ ಪ಼ೋಟೊಗೊಮ್ಮೆ ಕೈ ಮುಗಿದು, ಪಕ್ಕದಲ್ಲಿ ಅದ್ಯಾವ್ದೋ ದಿವ್ಯ ಆನಂದದಲ್ಲಿ, ಜಗತ್ತನ್ನೇ ಮರೆತು ಸಣ್ಣ ನಗುವಿನೊಂದಿಗೆ ಮಲಗಿರೋ ನಿಮ್ಮನ್ನು ಒಂದು ಕ್ಷಣನೋಡಿ, ನಿದ್ರೆಯಲ್ಲೂ ನನ್ನ ಬಳಸಿದ ನಿಮ್ಮ ಕೈಗಳಿಂದ ತಪ್ಪಿಸಿಕೊಂಡು ಕೊಣೆಯ ಹೊರಹೋಗುವಷ್ಟರಲ್ಲಿ ಒಂದು ಯುಗ ಕಳೆದಿರುತ್ತೆ!
ಸ್ನಾನ ಮಾಡಿ, ಮನೆಯೆದರು ಸ್ವಚ್ಚಮಾಡಿ, ಸಣ್ಣಕೊಂದು ಒಂದೇ ಎಳೆಯ ರಂಗೋಲಿ ಗೀಚಿ, ಕಾಫ಼ಿಯ ಪಾತ್ರೆಗೆ ಹಾಲುತುಂಬಿ ಒಲೆಯಮೇಲಿಟ್ಟು, ಎಲ್ಲೋ ಕೇಳಿದ ಹಾಡನ್ನು ಗುನುಗುನಿಸುತ್ತಾ, ಬೇಡವೆಂದರೂ ಬರುವ ನಿಮ್ಮ ನೆನಪನ್ನು ತುಟಿಯ ಕಚ್ಚಿ ತಡೆಹಿಡಿಯುತ್ತಾ ಕುದಿಯುವ ಕಾಪ಼ೀಯನ್ನು ಅತ್ತೆ ಮಾವರಿಗೆ ಕೊಟ್ಟು, ನಮ್ಮ ಕೋಣೆಯ ಕದ ದಾಟುವಷ್ಟರಲ್ಲಿ ನಿಮಗಿನ್ನೂ ಬೆಳಗಿನ ಮೊದಲ ಕ್ಷಣಗಳು!
ಹಾಗೇ ನಿಮ್ಮನ್ನೇ ನೋಡುತ್ತಾ ನಿಲ್ಲುವ ಮನವಾದೀತಾದರೂ, ನನಗೆ ನಾನೇ ಗದರಿಕೊಂಡು, ಕಾಪ಼ೀ ಲೋಟವನ್ನು ಮಂಚದ ಬಳಿಯಿಟ್ಟು, ಮೆಲ್ಲಗೆ ತಟ್ಟಿ ಎಬ್ಬಿಸುವಷ್ಟರಲ್ಲಿ, ನಿಮ್ಮ ಬಾಹುಗಳು ನನ್ನ ದೇಹದ ಸುತ್ತ!
ಹೀಗೇ ಶುರುವಾಗುವ ದಿನ, ನಿತ್ಯದ ಬದುಕಿನ ಒಂದು ಸಣ್ಣ ಪುಟವಷ್ಟೇ. ಸಣ್ಣಗೆ ಯಾವ್ದೋ ಮೂಲೆಯಲ್ಲಿ ಬೀಳುವ ಬೀಜವೊಂದು, ಸೂರ್ಯನ ಪ್ರೀತಿಗೆ ಹಾತೊರೆದು, ಸೂರ್ಯನ ಬೆಳಕಿನಿಂದಲೇ ತನ್ನ ಸಣ್ಣ ಎಲೆ ಚಾಚಿ ಬೆಳೆಯುವಂತೆ, ನಾನು ನಿಮಗಾಗಿಯೇ ದಿನನಿತ್ಯ ಅರಳುತ್ತೇನೆ! ಹಣೆಯ ತುದಿಯಲ್ಲಿ ಇಡುವ ಕುಂಕುಮ ಬೆರಳ ತುದಿ ತಾಕಿದಾಗ, ಪ್ರತೀ ಬಾರಿ ವಿಚಿತ್ರ ತೃಪ್ತಿಯಿಂದ ನಗುತ್ತೇನೆ!
ಅಕ್ಕಪಕ್ಕದವರು ನಿಮ್ಮ ಬಗ್ಗೆ ಎರಡು ಒಳ್ಳೆ ಮಾತಾಡಿದರೆ, ಮುಖ ಕೆಂಪಾಗಿ ಹೆಮ್ಮೆ ಯೊಂದುಕಡೆ ನಾಚಿಕೆಯೊಂದು ಕಡೆ!
ಕದ್ದು ಕೆನ್ನೆಯ ಮೇಲೊಂದು, ಮುಂಗೈಗೊಂದು ಮುತ್ತು ಕೊಟ್ಟು ಓಡಿ, ಜಗುಲಿಯ ಮೇಲೆ ಏನೂ ಆಗಿಲ್ಲದವರ ತರ ನೀವು ಕೂರುವ ಪರಿ, ಕೆಂಪಾದ ನನ್ನ ಕೆನ್ನೆಯ ಬಣ್ಣದ ಹಿಂದಿನ ಕಾರಣ ತಿಳಿಯದೇ ಎಲ್ಲರೂ ಕುತೂಹಲದಿಂದ ನನ್ನತ್ತಲೇ ನೋಡುವಾಗ, ಏನೂ ತಿಳಿಯದವರಂತೆ ನಗುವ ನೀವು!
ಸಣ್ಣಲ್ಲಿರುವಾಗ ಅಮ್ಮ ಗೌರಿ ನವಮಿ ಮಾಡುವಾಗ, ನಂಗೂ ಒಬ್ಬ ಗಂಡ ಬೇಕಮ್ಮ ಅಂದಿದ್ದೆ, ಕೈಗೆ ಸುತ್ತುವ ಗೊಂಡ್ಯಕ್ಕಾಗಿ! ಆಗ ಅಮ್ಮ "ಇಷ್ಟು ಬೇಗ ಬರಲ್ಲ ಪುಟ್ಟಿ ನಿಂಗೆ ಗಂಡ, ನೀನೂ ನನ್ಜೊತೆ ಕೂತು, ಎಂತಾ ಗಂಡ ಬೇಕು ಅಂತ ದೇವರ ಬಳಿ ಕೇಳ್ಕೊ, ದೊಡ್ಡವಳಾದಮೇಲೆ ಬರ್ತಾನೆ" ಅಂದಿದ್ಳು! ನೀವು ಸಂಜೆಗಳಲ್ಲಿ ನಾ ಕೋಣೆಗೆ ಬರುವುದರೊಳಗೆ, ಸೀಮೆ ಎಣ್ಣೆ ಚಿಮ್ಮಣಿಯನ್ನು ಹಚ್ಚಿ, ತೆರೆದ ಕಿಟಕಿಗೆ ಮುಖ ಮಾಡಿ ನಿಂತಾಗ, ಕೆಲವೊಮ್ಮೆ ತೀರಾ ಸುಸ್ತಾಗಿ ಮಲಗಿದವಳು ಮರುದಿನ ಬೆಳಿಗ್ಗೆ ತಡವಾಗಿ ಗಾಬರಿಯಿಂದ ಎದ್ದಾಗ, ಬಾಗಿಲ ಬಳಿ ಕಾಫ಼ೀ ಲೋಟವ ಹಿಡಿದು "ಹೋಗಿ ಅತ್ತೆ ಮಾವಂಗೆ ಕೊಡು" ಎಂದು ಹೇಳುವವರಂತೆ ನೋಡುತ್ತಾ ನಿಂತಾಗ, ಜೋರಾಗಿ ಸುರಿವ ಮಳೆಗೆ ಮುಖವೊಡ್ಡಿ ನಾ ನಿಂತಾಗ, ಹಿಂದಿನಿಂದ ತಬ್ಬಿಕೊಂಡು ಕಿವಿಯಲ್ಲಿ ನನ್ಹೆಸರು ಉಸುರಿದಾಗ, ನೀವು ಆ ಗೌರಿ ವೃತಗಳಿಂದ ದೊರೆತ್ತಿದ್ದೆನಿಸುತ್ತೆ!
ನನ್ನ ಕೂದಲೊಳಗೆ ನೀವು ಕೈಯ್ಯಾಡಿಸುವಾಗ ನಿಮ್ಮ ಕೈಗೆ ಈ ಪತ್ರ!
ನಿಮ್ಮವಳುಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...