ಕೆಳಗೆ ಬಿದ್ದ ನಕ್ಷತ್ರ ನೀನು!

Posted by ಶ್ರೀನಿಧಿ ವಿ.ನಾ. on 10-Feb-2017
ಬೆರಳುಗಳಲ್ಲಿ ನಿನ್ನ ಬೆರಳುಗಳ ಬಳಸಿ
ಬಿಗಿದುಬಿಡಬೇಕಿತ್ತು ಬಂಧವ!
ಹೋಗಲು ಬಿಡದೇ, ನಾನೇ ಅಡ್ಡನಾಗಿ
ನಿಂತುಬಿಡಬೇಕಿತ್ತು ಒಡ್ಡಿ ಜೀವವ!

ನೀಯೆಲ್ಲೋ ನೋಡುವಾಗ ಸುಮ್ಮನೆ ಕೈತಾಕಿಸಿ,
ತನ್ಮಯಳಾದಾಗ ಸದ್ದಿಲ್ಲದೇ ಹತ್ತಿರ ಜಾರಿ
ಕಳೆದುಬಿಟ್ಟೆ ನಿನ್ನೊಂದಿಗೆ ಬದುಕ!
ಪ್ರೀತಿಯ ಹೇಳಿಬಿಡಬೇಕಿತ್ತು ಬರಸೆಳೆದು,
ಕಣ್ಣಲ್ಲಿ ಹೃದಯವಿಟ್ಟು, ನಿನ್ನ ಬೊಗಸೆಯಲ್ಲಿ ಜೀವವಿಟ್ಟು!

ಯಾರದೋ ತಂಪು ಹೊತ್ತಿನ ಹರಕೆಗೆ
ಕೆಳಗೆಬಿದ್ದ ನಕ್ಷತ್ರ ನೀನು! ನೋಡುತ್ತಾ
ರೋಮಾಂಚಿತನಾದೆ ನಾನು,
ಮರೆತು ಬಿಟ್ಟೆ ಹೇಳಲು ನೀ ತಾರೆ,
ನಾ ಸುತ್ತ ಸುತ್ತುವ ಕ್ಷುದ್ರಗ್ರಹವೆಂದು!

ಎಂದಾದರೂ ಬಂದರೆ ವಾಪಸ್ಸು
ಎದೆಯಲಿನ್ನೂ ನೀನೇ ಇರುವೆ!
ಒಮ್ಮೆ ಉಸಿರಾಡಿ ನೋಡು ನನ್ನೆದೆಯೊಳಗೆ
ಅಲ್ಲಿರುವುದು ನಿನದೇ ನೆನಪಿನ ಘಮ!


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...