ಆರಿ ಹೋಗುತ್ತಿದೆ, ಹಚ್ಚಿಟ್ಟ ಪ್ರೀತಿಯ ದೀಪ...!

Posted by ಮಂದಾರ ಕೆ.ಆರ್ on 13-Feb-2017
ನನ್ನ ಪ್ರೀತಿಯ ನನ್ನವನೇ,

ನಂಗಿನ್ನೂ ನೆನಪಿದೆ ನೀ ನನಗೆ ಸಿಕ್ಕ ಬದುಕಿನ ಸುವರ್ಣ ದಿನ..ರಾಮಯ್ಯ ನವರ ಮೊಮ್ಮಗಳು,ನನ್ನ ಜೀವದ ಗೆಳತಿಯಾದ ಧಾತ್ರಿ ಯ ಮದುವೆಯ ದಿನ. ಗೆಳತಿಯ ಮದುವೆಯ ಸಂಭ್ರಮದಲ್ಲಿ ನಾನೂ ವಧುವಂತೆ ಸಿಂಗರಿಸಿಕೊಂಡಿದ್ದೆ.ನೀನು ಕೂಡ ನಿನ್ನ ಗೆಳೆಯರ ಗುಂಪಿನಲ್ಲಿ ಚೆಂದವಾಗಿ ಕಂಗೊಳಿಸುತಿದ್ದೆ.ನಾನೂ ಒಂದೆರಡು ಸಲ ನಿನ್ನೆಡೆ ಕಣ್ಣು ಹಾಯಿಸಿದ್ದೆ..ಆದರೆ ನೀ ಮಾತ್ರ ಅದೇಕೆ ನನ್ನನ್ನೇ ನೋಡುತಿದ್ದೆ...? ನಂಗೆಷ್ಟು ನಾಚಿಕೆ ಅನಿಸುತಿತ್ತು ಗೊತ್ತಾ...ಗೆಳತಿಯನ್ನು ಸಿಂಗರಿಸುವುದು, ಅರಿಸಿನ-ಕುಂಕುಮ ಕೊಡೊದು, ಈ ಎಲ್ಲಾ ಕೆಲಸಗಳ ಮಧ್ಯ ನಿನ್ನನ್ನು ಅಷ್ಟೊಂದು ಗಮನಿಸಲಾಗಿರಲಿಲ್ಲ ನನಗೆ...ಸಂಜೆ ಹೆಣ್ಣು ಒಪ್ಪಿಸುವ ಶಾಸ್ತ್ರದ ಘಳಿಗೆ ಬಂದೇಬಿಟ್ಟಿತ್ತು. ನನ್ನ ಬದುಕಿನ ಪ್ರತಿದಿನ ಧಾತ್ರಿಯೊಂದಿಗೆ ಸಾಗುತಿತ್ತು ಇದೀಗ ಧಾತ್ರಿ ನನ್ನನ್ನು ಬಿಟ್ಟು ಹೋಗುತ್ತಿದ್ದಾಳೆಂಬ ದುಃಖ ನನ್ನ ಕಣ್ಣಾಲೆಗಳನ್ನು ಕೆಂಪಾಗಿಸಿತ್ತು. ಒಂದು ನಿಮಿಷವೂ ಅಲ್ಲಿರಲಾಗದ ನಾನು ನಮ್ಮೂರ ನದಿಯಂಚಿನ ಆಲದ ಮರದ ಬುಡಕ್ಕೆ ಓಡಿದ್ದೆ. ನಾವಿಬ್ಬರೂ ಜೋಕಾಲಿ ಆಡುವಾಗಿನಿಂದನೂ ಈ ಆಲದ ಮರ ನಮ್ಮ ಸ್ನೇಹದ ಗುರುತಾಗಿತ್ತು. ಆಲದ ಮರದ ಬಳಿ ನನ್ನೆಲ್ಲಾ ದುಃಖವನ್ನು ಹೇಳಿ ಬಿಕ್ಕಿ ಬಿಕ್ಕಿ ಅಳುತಿದ್ದೆ. ಅದೆಲ್ಲಿಂದ ಬಂದೆ ನೀನು ಅಚಾನಕ್ಕಾಗಿ? ನನ್ನನ್ನು ನೀ ಹಿಂಬಾಲಿಸಿ ಬಂದದ್ದು ನನಗೆ ತಿಳಿಯಲೇ ಇಲ್ಲ ನೋಡು..ನಿನ್ನ ಕಂಡೊಡನೆ ದುಃಖ ಮರೆಮಾಚಿ ಮುಖದಲ್ಲಿ ನಗು ತುಂಬಲು ಪ್ರಯತ್ನಿಸುತಿದ್ದೆ ಆದರೆ ಆಗಲಿಲ್ಲ.. ನೀ ಬಂದು ನನ್ನ ಸಮಾಧಾನಿಸಿದ್ದೆ.ಬದುಕಿನ ಸತ್ಯಗಳನ್ನು ಒಪ್ಪಿಕೊಳ್ಳುವ ಧೈರ್ಯ ತುಂಬಿದ್ದೆ. ಆಗಲೇ ನೀ ನನಗೆ ಹಿಡಿಸಿ ಹೋಗಿದ್ದೆ.

ಒಂದೇ ಸಲ ಭೇಟಿಯಾಗಿದ್ದರೆ ನಾ ನಿನ್ನ ಮರೆತು ಬಿಟ್ಟಿರುತ್ತಿದ್ದೆನೇನೋ....ಆದರೆ ಆ ದೇವರು ಮತ್ತೆ ಮತ್ತೆ ನಮ್ಮಿಬ್ಬರನ್ನು ಒಟ್ಟಿಗೆ ಸೇರಿಸುತಿದ್ದ....ಗೌರಿ ಹಬ್ಬಕ್ಕೆ ಬಳೆ ಇಡಲೆಂದು ಪೇಟೆಯ ಹೆಬ್ಬಾಗಿಲ ಮುಂದಿರುವ ಚಿನ್ನಕ್ಕ ನ ಅಂಗಡಿಗೆ ನಾ ಬಂದಿದ್ದೆ. ಹಸಿರು-ಕೆಂಪು ಗಚ್ಚಿನ ಬಳೆಗಳನ್ನು ಆಯ್ದು,ಬಳೆ ತೊಡಿಸಲು ಎರಡು ಕೈಯನ್ನು ಮುಂದೆ ನೀಡಿ ನಾ ಕೂತಿದ್ದೆ..ನೋವಿಂದ ಇನ್ನೇನು ಕಣ್ಣು ಮುಚ್ಚಬೇಕೆನ್ನುವಷ್ಟರಲ್ಲಿ ನೀ ನನಗೆ ಕಂಡಿದ್ದೆ...ಕಣ್ಣು ಇನ್ನೆಲ್ಲಿಂದ ಮುಚ್ಚೀತು ಹೇಳು...ನಿನ್ನ ನೋಡುವ ಬರದಲ್ಲಿ ಬಳೆ ತೊಡಿಸಿದ ನೋವೇ ಗೊತ್ತಾಗಲಿಲ್ಲ ನನಗೆ. ನೀ ನನ್ನ ಬಳಿಗೇ ಬರುತಿದ್ದೆ..ಆಚೆ ಈಚೆ ನೋಡಿದೆ..ಏನೂ ಮಾಡಲು ತೋಚದೆ ಬಳೆ ತೊಟ್ಟ ಕೈಗಳನ್ನು ಹಿಸುಕುತ್ತಾ ನಾ ನಿಂತಿದ್ದೆ. ಸೀದಾ ನನ್ನ ಬಳಿಗೆ ಬಂದ ನೀನು, ನಾ ತೊಟ್ಟ ಬಳೆಗೆ ಹಣ ನೀಡಿ,ಓರೆಗಣ್ಣಿಂದ ಇನ್ನೊಮ್ಮೆ ನನ್ನ ನೋಡಿ ನಗು ಬೀರಿದ್ದೆಯಲ್ಲಾ ಅದೇ ನೋಡು ನಮ್ಮಿಬ್ಬರನ್ನು ಒಂದು ಮಾಡಿದ್ದು. ಈ ಜೀವಕ್ಕೆ ಅಷ್ಟೇ ಸಾಕಾಗಿತ್ತು ಪ್ರೀತಿಯಲ್ಲಿ ಬೀಳಲು. ನೀ ಕೊಡಿಸಿದ ಬಳೆಗಿಂತ ಇನ್ನೇನ್ನೂ ಬೇಕಾಗಿರಲಿಲ್ಲ ನನ್ನನ್ನು ನಾ ನಿನಗೆ ಒಪ್ಪಿಸಿಕೊಳ್ಳಲು.ಕೆಲವು ದಿನಗಳ ನಂತರ ಧಾತ್ರಿ ಯ ಪತ್ರ ನನ್ನ ಕೈ ಸೇರಿತ್ತು..ಪತ್ರದಲ್ಲಿ ನಿನ್ನ ವಿಷಯ ಪ್ರಸ್ತಾಪಿಸಿದ್ದಳು..ನೀನು ಅವಳ ಗಂಡನ ಸ್ನೇಹಿತನೆಂದೂ, ಒಳ್ಳೆಯ ಸಾಹಿತ್ಯಾಭಿರುಚಿ ಹೊಂದಿರುವ ಅತ್ಯಂತ ಸರಳ ವ್ಯಕ್ತಿಯೆಂದೂ, ನಿನಗೆ ನನ್ನ ಮೇಲೆ ಇಷ್ಟ ಇರುವುದಾಗಿಯೂ ತಿಳಿಸಿ ನನ್ನ ಆಭಿಪ್ರಾಯಕ್ಕಾಗಿ ಕಾಯುತ್ತಿರುವೆನೆಂದು ಬರೆದಿದ್ದಳು..ಅವಳು ನನ್ನ ಬಿಂಬದಂತೆ.ಚಿಕ್ಕಂದಿನಿಂದ ಒಟ್ಟಿಗೆ ಆಡಿ-ಬೆಳೆದಿದ್ದರಿಂದ ನನ್ನ ಇಷ್ಟ-ಕಷ್ಟಗಳು ನನಗಿಂತ ಅವಳಿಗೆ ಚೆನ್ನಾಗಿ ಗೊತ್ತು. ಅವಳ ಈ ಪತ್ರದಿಂದ ನಿನ್ನ ಮೇಲಿದ್ದ ನನ್ನ ನಿರೀಕ್ಷೆ ಹೆಚ್ಚಾಗಿತ್ತು.ಪತ್ರಕ್ಕೆ ಹೂಂ ಎಂದು ಉತ್ತರಿಸುವಾಗ ಕೈ ನಡುಗುತಿತ್ತು.ಆದರೂ ನಿನ್ನ ಮೇಲಿನ ಆಕರ್ಷಣೆಗೊಂದು ಅರ್ಥ ಕೊಡಲು ಇದೇ ಸುಸಂದರ್ಭ ಎಂದೆನಿಸಿತ್ತು.ಪತ್ರ ಕಳಿಸಿದ ಮೇಲೆ ಪ್ರತೀ ರಾತ್ರಿಗಳನ್ನು ನಿನ್ನ ಕನಸುಗಳಲ್ಲೇ ಕಳೆಯ ತೊಡಗಿದ್ದೆ..ನಿನ್ನ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹೊತ್ತು ಕಾಯುತಿದ್ದೆ..ನಾ ನಿನ್ನೊಂದಿಗೆ ಕಳೆಯ ಬಹುದಾದ ಸುಂದರ ಕ್ಷಣಗಳನ್ನು ಕಲ್ಪಿಸಿಕೊಂಡು ನಗುತ್ತಿದ್ದೆ...ನೀ ನಿನ್ನವರ ಜೊತೆ ಬಂದೇಬಿಟ್ಟಿದ್ದೇ ನಮ್ಮನೆ ಬಾಗಿಲಿಗೆ..ನಿನ್ನ ನಯ-ವಿನಯಕ್ಕೆ ಮನೆಯವರೆಲ್ಲರೂ ಸೋತೇ ಹೋಗಿದ್ದರು..ನಿನ್ನನ್ನು ಪಡೆಯುವ ಸೌಭಾಗ್ಯ ನನಗೊಲಿದದ್ದಕ್ಕೆ ದೇವರಿಗೆ ಸಾವಿರ ನಮನ ಸಲ್ಲಿಸಿದ್ದೆ.
ಮದುವೆ ನಿಶ್ಚಯಿಸಿ ನೀ ವಾಪಾಸು ಹೊರಡುವಾಗ ಕೊಟ್ಟ ಕಣ್ಣ ಸಂನ್ನೆ ನನ್ನ ಸಾಯಿಸಿಯೇ ಬಿಟ್ಟಿತ್ತು...ಸಾಮಾನ್ಯ ಹುಡಿಗಿಯೊಬ್ಬಳು ವಧುವಾಗಿ ಬದಲಾದಾಗಿನ ಹೊಸ ಭಾವನೆಗಳು ನನ್ನ ಖುಷಿ ಹೆಚ್ಚಿಸುತಿತ್ತು..ನೀ ಬರೆಯುತಿದ್ದ ಪತ್ರಗಳಲ್ಲಿ ತುಂಬಿರುತಿದ್ದ ಪ್ರೀತಿ ಮಾತುಗಳನ್ನು ಓದಲು, ಯಾರೂ ಇಲ್ಲದ ಆಲದ ಮರದ ಬುಡಕ್ಕೆ ಓಡುತಿದ್ದೆ..ನೀ ನನ್ನ ಹುಟ್ಟು ಹಬ್ಬಕ್ಕೆಂದು ಕಳಿಸಿದ್ದ ಸೀರೆ ನನ್ನ ಅತೀ ಇಷ್ಟದ ಸೀರೆ. ಕಾಕತಾಳೀಯ ಎಂದರೆ ಇಂದು ಈ ಪತ್ರ ಬರೆಯುವಾಗಲೂ ಅದೇ ಸೀರೆ ಉಟ್ಟಿದ್ದೇನೆ ನೋಡು.

ಅಂತೂ ಇಂತೂ ಮದುವೆಯ ದಿನ ಬಂದೇ ಬಿಟ್ಟಿತ್ತು..ನಮ್ಮೂರ ಮಲ್ಲಿಕಾರ್ಜುನ ಗುಡಿಯ ಮುಂದಿರುವ ಬಸವನ ಕಿವಿಯಲ್ಲಿ ನಾನದೆಷ್ಟು ಸಲ ಒಳ್ಳೆಯ ಗಂಡ ಸಿಗಲೆಂದು ಪ್ರಾರ್ಥಿಸಿದ್ದೆ...ಅದೆಲ್ಲದರ ಫಲವಾಗಿ ನೀ ನನಗೆ ಸಿಕ್ಕಿದ್ದೆ. ನಿನ್ನ ಸೇರುವ ಖುಷಿ ಒಂದೆಡೆಯಾದರೆ, ತವರು ಬಿಡುವ ದುಃಖ ಇನ್ನೊಂದೆಡೆ.
ಮದುವೆಯ ದಿನ ಬೆಳಿಗ್ಗೆ ನನ್ನೊಂದಿಗೆ ಮಾತನಾಡಲು ನೀ ಬಂದಿದ್ದೆ. ನಿನ್ನ ನಂಬಿ ಬರುವ ನನಗೆ ಆಸರೆಯಾಗಿರುವ ಧೈರ್ಯ ನೀಡಿದ್ದೆ...ಹಣೆಗೊಂದು ಮುತ್ತಿಟ್ಟು ನಿನ್ನ ಪ್ರೀತಿ ನೀಡಿದ್ದೆ.. ನನಗಿದ್ದ ಭಯ ದೂರಾಗಿತ್ತು. ನಿನ್ನೊಂದಿಗೆ ಬರುವ ನನ್ನ ನಿರ್ಧಾರ ಸಾವಿರ ಜನುಮದ ಪುಣ್ಯದ ಫಲವೆಂದನಿಸಿತ್ತು.ತಾಳಿ ಕಟ್ಟುವಾಗ ನೀ ನನ್ನ ಕಿವಿಯಲ್ಲಿ "I Love You" ಎಂದು ಪಿಸು ಗುಟ್ಟಿದ್ದಾಗ ನಾಚಿಕೆ ನನ್ನ ಮುಖವನ್ನಾವರಿಸಿತ್ತು.

ಚೆನ್ನಾಗೇ ಇದ್ದೆವಲ್ಲ ನಾವು ....ಒಬ್ಬರನ್ನೊಬ್ಬರು ಕಾಡಿಸುತ್ತಾ, ಮುದ್ದು ಮಾಡುತ್ತಾ, ಸದಾ ಸಂತೋಷದ ನಗೆಯಿಂದಲೇ ತುಂಬಿರುತಿತ್ತು ನಮ್ಮಿಬ್ಬರ ಮುಖ..ಆದರೆ ಅದ್ಯಾರ ಕಣ್ಣು ಬಿತ್ತೋ ನಾ ಕಾಣೆ... ಒಂದೊಮ್ಮೆ ನಿನಗೆ ಬಂದಿದ್ದ ಪತ್ರದ ಹಿಂದಿರುವ ಹುಡುಗಿ ಯ ಹೆಸರು ನೋಡಿ ಅದ್ಯಾರೆಂದು ಕೇಳಿದ್ದೆ..ಅದೇ ನಿನಗೆ ನನ್ನ ಮೇಲಿದ್ದ ನಂಬಿಕೆ ಮರೆಸಲು ಕಾರಣವಾಯಿತೇ...ನನ್ನ ತಪ್ಪನ್ನು ಒಪ್ಪಿಕೊಂಡಿದ್ದೇನೆ..ನಿನ್ನ ಮೇಲೆ ನಂಬಿಕೆಯಿಲ್ಲದೇ ನಾ ಅದನ್ನು ಕೇಳಿದ್ದಲ್ಲ..ಹೆಂಡತಿಯೆಂಬ ಸಲಿಗೆಯಿಂದ ಕೇಳಿದ್ದೆ..

"ನಾ ಪ್ರೀತಿಸಿದ ರತ್ನ ಇಂದು ಕಳೆದು ಹೋಗಿದ್ದಾಳೆ " ಎಂದು ನೀ ನನಗೆ ಬರೆದಿಟ್ಟು ಹೋದ ಪತ್ರ ಇಂದಿಗೂ ನನ್ನ ಕಾಡಿಸುತ್ತಿದೆ. ಇಷ್ಟೇನಾ ನೀ ನನ್ನ ಅರ್ಥ ಮಾಡಿಕೊಂಡದ್ದು..? ನೀ ಪ್ರೀತಿಸಿದ ರತ್ನ ಇಲ್ಲೇ ಇದ್ದಾಳೆ..
ನಿನ್ನ ರತ್ನ ನಿನಗಾಗೆ ಕಾಯುತಿದ್ದಾಳೆ..ತನ್ನ ಒಂದು ತಪ್ಪು ನಡೆಯಿಂದ ನಿನ್ನ ಕಳೆದುಕೊಂಡ ದುಃಖದಲ್ಲಿದ್ದಾಳೆ..ಎದುರಿಗಿದ್ದರೂ ನೀನಾಡುವ ಮಾತಲ್ಲಿ ಮೊದಲಿನ ಪ್ರೀತಿ ಕಾಣಿಸುತಿಲ್ಲ...ನೀ ತೋರುವ ಕಾಳಜಿಯಲ್ಲಿ ನಾ ಮಗುವಂತಾಗಲು ಸಾಧ್ಯವಾಗುತ್ತಿಲ್ಲ...
ನಿನ್ನ ನಿಷ್ಕಳಂಕ ನಗು ಕಾಣದೇ ದಿನಗಳೇ ಕಳೆದು ಹೋಗಿವೆ..ನನ್ನ ಬಿಟ್ಟು ಬದುಕುವ ಶಕ್ತಿ ನಿನಗಿಲ್ಲ ಎಂದು ನಾ ಚೆನ್ನಾಗಿ ಅರಿತಿರುವೆ. ಆದರೂ ಯಾಕಿಷ್ಟು ಹಟ ನಿನಗೆ..ನನ್ನನ್ನು ದೂರ ಮಾಡಿ ಅದೇನು ಸಾಧಿಸ ಹೊರಟಿರುವೆ ನೀನು..ಕ್ಷಮೆಯಿರದ ತಪ್ಪೇ ನಾ ಮಾಡಿದ್ದು..?
ನೀ ನನಗೆ ಪ್ರಪಂಚ ತೋರಿಸಬೇಕಿಲ್ಲ...ನನ್ನ ಪ್ರಪಂಚದಲ್ಲಿ ನೀನಿದ್ದರೆ ಸಾಕು...ನೀ ನನಗೆ ಗುಲಾಬಿ ಕೊಡಬೇಕಾಗಿಲ್ಲ ನೀ ನನ್ನ ಹಣೆಗಿಟ್ಟ ಸಿಂಧೂರವೇ ನನಗೆಲ್ಲಾ...ನೀ ನನ್ನ ರಾಣಿಯಂತೆ ನೋಡಬೇಕೆಂದೇನಿಲ್ಲ...ನಿನ್ನ ಒಲವಿಗೆ ನಾನೇ ಎಂದಿಗೂ ರಾಣಿಯಾಗಿದ್ದರೆ ಸಾಕು...ರಾಜನಿಲ್ಲದ ಮನೆ ಅರಮನೆಯಾದೀತೇ..? ನೀನಿಲ್ಲದೇ ನನ್ನ ಮನಕ್ಕೆ ನೆಮ್ಮದಿಯಿದ್ದೀತೇ..?ಇಂದು ನನ್ನ ಹುಟ್ಟಿದ ದಿನ ...ನಿನ್ನ ಬರುವಿಕೆಗಾಗಿ ಕಾಯುತ್ತಿದ್ದೇನೆ ಮೊದಲಿನ ಮನೋಹರನಾಗಿ..ನನ್ನ ಮನೋಹರನ ಪ್ರೀತಿಯಲ್ಲಿ ನಾ ಮತ್ತೆ ನೆನೆಯಬೇಕಿದೆ..ನನ್ನ ತಪ್ಪನ್ನೆಲ್ಲಾ ನಿನ್ನ ಪಾದದಡಿಗೆ ಹಾಕಿ ಮತ್ತೆ ನೀ ನನ್ನ ಹೊಸದಾಗಿ ಪ್ರೀತಿಸುವಂತೆ ಮಾಡಬೇಕಿದೆ..ನಿನ್ನ ಸವಿ ಮುತ್ತೊಂದನ್ನು ಹುಟ್ಟು ಹಬ್ಬದ ಉಡುಗೊರೆಯಾಗಿ ಪಡೆಯ ಬಯಸಿದ್ದೇನೆ.. ಈ ಪತ್ರ ಓದಿದ ಕೂಡಲೇ ನನ್ನ ಕಾಣಲು ಆಲದ ಮರದ ಬಳಿ ಬರುವೆಯಲ್ಲವೇ..?ನೀ ನಮ್ಮ ಮೊದಲ ಭೇಟಿಯಲ್ಲಿ ನನ್ನ ಸಂತೈಸಿದ ಹಾಗೆ ಮತ್ತೆ ನನ್ನ ಸಂತೈಸುವೆಯಲ್ಲವೇ...? ಮತ್ತೆ ನನ್ನ ಮೊದಲಿಂದ ಪ್ರೀತಿಸುವೆಯಲ್ಲವೇ...? ಕೊನೆವರೆಗೂ ಪ್ರೀತಿಸುತ್ತಲೇ ಇರುವೆಯಲ್ಲವೇ...?

ನಿನಗಾಗಿ ಕಾದಿರುವ
ನಿನ್ನ ಪ್ರೀತಿಯ ರತ್ನ


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...