ಉರ್ವಿ

Posted by ಸಂಪತ್ ಸಿರಿಮನೆ on 16-Feb-2017
ಸಾಯಂಕಾಲದ ಸೂರ್ಯನನ್ನು ಶರಧಿ ದಿಗಂತದಲ್ಲಿ ನಿಧಾನಕ್ಕೆ ನುಂಗುತ್ತಿದ್ದರೆ ಬಿಸಿ ತಡೆಯಲಾರದೇ ಹೊರಚಿಮ್ಮಿದಂತೆ ಅಲೆಗಳು ದಡಕ್ಕೆ ಬಡಿದು ಕಾಲುಗಳಿಗೆ ಹಿತ ನೀಡುತ್ತಿವೆ. ಬದುಕು ಅಸ್ತಮಾನಕ್ಕೆ ಹತ್ತಿರಾದಂತೆ ಎಲ್ಲಾ ನೆನಪುಗಳೂ ಕಣ್ಮುಂದೆ ಕುಣಿಯುವುದು ಜಾಸ್ತಿಯಾಗುತ್ತದೇನೋ. ಸುಮ್ಮನೆ ನಿಂತರೆ ಮನಸ್ಸೆಲ್ಲಾ ಜೋಮು ಹಿಡಿದು ಬಾಲ್ಯದಿಂದ ರೀಲು ಸುತ್ತಲು ಶುರುವಾಗುತ್ತದೆ. ನಾನಂತೂ ಹುಟ್ಟಿನಿಂದ ರಾಜಕುಮಾರನೇ!. ನನಗೊಂದು ಅರಮನೆಯೂ ಇತ್ತು!. ದೂರದಲ್ಲಿ ಗಾಳಿ ಮಳೆಗೆ ಸೆಡ್ಡುಹೊಡೆಯುತ್ತಾ ಇನ್ನೂ ತನ್ನ ಕಾಲ್ಗಳ ಮೇಲೆ ಗಟ್ಟಿನಿಂತಿರುವ ಪಾಳುಬಂಗಲೆಯಿದೆಯಲ್ಲಾ, ಅದೇ ನನ್ನ ಜನ್ಮಸ್ಥಳ. ನಾ ಕಂಡಿರದ ನನ್ನಪ್ಪ ತೀರಾ ಪಾಪದ ಮನುಷ್ಯನಂತೆ. ಬೇಡಿದವರಿಗೆಲ್ಲಾ ಬಿಟ್ಟುಕೊಟ್ಟು ಯಾರಿಗೂ ಬೇಡವಾಗಿ ಉಳಿದ ಸಾಗರದ ಜಾಗದಲ್ಲಿ ಒತ್ತಾಸೆಯಿಂದ ಅವನು ಬೀಸುತ್ತಿದ್ದ ಗಾಳಕ್ಕೆ ಮೀನುಗಳು ಬೀಳದೇ ಇದ್ದರೂ ಅವನ ನಿಷ್ಕಲ್ಮಶ ಮನಸ್ಸಿಗೆ ನನ್ನಮ್ಮ ತಾನಾಗೇ ಸೆರೆಯಾಗಿದ್ದಳು. ನಾ ಹುಟ್ಟಿದಾಗ ನನ್ನಮ್ಮನ ಸಾರ್ಥಕ್ಯದ ನಗು ತಂದ ನೆಮ್ಮದಿ ಬಿಟ್ಟರೆ ಅಪ್ಪನಿಗೆ ಖುಷಿಪಡಲು ಇನ್ನಾವುದಾದರೂ ಕಾರಣವಿತ್ತೆಂದು ನನಗನಿಸುವುದಿಲ್ಲ. ಬಾಣಂತಿಗೆ ಗಂಜಿಯುಣಿಸಲೂ ಆಗುತ್ತಿಲ್ಲವೆಂಬ ಹತಾಶೆಯೇ ಅವನನ್ನು ಚಂಡಮಾರುತದ ಎಚ್ಚರಿಕೆಯ ನಡುವೆಯೂ ಸಮುದ್ರಕ್ಕೆ ನೂಕಿದ್ದಿರಬೇಕು. ನಾನಾಗ ಸರಿಯಾಗಿ ಕಣ್ಣು ಬಿಟ್ಟಿರಲಿಲ್ಲವಾದರೂ ನನ್ನಮ್ಮ ಅತ್ತಳೆಂದು ಮಾತ್ರ ನಾ ನಂಬಲಾರೆ. ಯಾಕೆಂದರೆ ಅವಳು ಭಯಂಕರ ಗಟ್ಟಿಗಿತ್ತಿ. ಅವಳ ಮುಖದಲ್ಲಿ ಪಾರ್ವತಿ-ಕಾಳಿಯರಿಬ್ಬರೂ ಮೇಳೈಸಿದ್ದರು. ಸ್ಫುಟತೆಯ ಪ್ರತಿರೂಪದಂತಿದ್ದ ಅವಳೆರಡು ಕಡುಕಂಗಳ ಮಧ್ಯೆ ನಾಜೂಕಾಗಿ ಅವಳಿಟ್ಟುಕೊಳ್ಳುತ್ತಿದ್ದ ದೊಂದಿಯಂತಹ ಹಣೆಬೊಟ್ಟು, ಯಾರೋ ಆಸ್ಥೆಯಿಂದ ತಿದ್ದಿ ತೀಡಿದಂತಿದ್ದ ಅವಳ ನೀಳಮೂಗಿನ ಮೇಲಿನ ವೃತ್ತಾಕಾರದ ಮೂಗುಬೊಟ್ಟು ಬೆಂಕಿಯಂತಹ ಅವಳ ದಿಟ್ಟದೃಷ್ಟಿಗೆ ಶೋಭೆಯಂತಿದ್ದವು. ಜೀವನದಲ್ಲಿ ನಾ ಕಂಡ ಅತಿಸುಂದರಿಯೆಂದರೆ ನನ್ನಮ್ಮ. ಕಂಡಕಂಡಲ್ಲಿಂದ ಬೀಸಿ ಮೇಲೆರಗುವ ಸಮಾಜವೆಂಬ ರಾಕ್ಷಸ ಅಲೆಯೆದುರು ತಲೆತಗ್ಗಿಸದೇ ಹೋರಾಡಿ ನನ್ನ ಬದುಕಿನ ದೋಣಿಯನ್ನು ದಡಸೇರಿಸಲು ಅವಳು ಪಟ್ಟ ಶ್ರಮ ಅವಳ ವ್ಯಕ್ತಿತ್ವಕ್ಕೆ ಅಳಿಸಲಾಗದ ಮೆರುಗನ್ನಿತ್ತಿತ್ತೆಂದು ನನ್ನನಿಸಿಕೆ. ಹೆಂಗಳೆಯರ ಕೆಲಸವಲ್ಲವೆಂದವರ ಬಾಯಿಮುಚ್ಚಿಸಿ ಒಬ್ಬಳೇ ದೋಣಿಯನ್ನು ತೆಗೆದುಕೊಂಡು ಸಾಗರಕ್ಕೆ ಲಗ್ಗೆಯಿಡುತ್ತಿದ್ದಳು, ಕಂಡಕಂಡವರ ಮನೆಯ ಕಸಮುಸುರೆ ಮಾಡುತ್ತಿದ್ದಳು, ನನಗೆ ಲಾಲಿಹಾಡುತ್ತಾ ಹಾಗೇ ಸೆಣಬಿನ ಬುಟ್ಟಿ ಹೆಣೆಯುತ್ತಿದ್ದಳು. ಅವಳು ನೋಡಿರದ ಕಷ್ಟವಿಲ್ಲ. ಪಾಳುಬಂಗಲೆ ಬಿಟ್ಟು ಜಿಂಕ್ ಶೀಟಿನ ಸೂರು ಹೊಕ್ಕಾಗ ಕೇಳಿದ್ದೆ "ಅಮ್ಮಾ ಅರಮನೇನೇ ಚೆನ್ನಾಗಿತ್ತು....". ನನಗೆ ಬೈತಲೆ ತೆಗೆಯುತ್ತಾ ನುಡಿದಿದ್ದಳು, " ಅರಮನೇಲಿದ್ರೆ ರಾಜನಾಗುತ್ತೀಯಾ, ರಾಜಕೀಯ ಮಾಡಬೇಕಾಗುತ್ತೆ, ನೀನು ಮನುಷ್ಯನಾಗು....". ಹೌದು, ನನ್ನಮ್ಮ ಒಮ್ಮೆ ಅತ್ತಿದ್ದಳು, ಅದು ನನ್ನಿಂದಲೇ. ಸರ್ಕಾರಿ ಶಾಲೆಯಲ್ಲಿ ನಮಗಾಗ ಓದಲು 'ಚಂದಮಾಮ' ಕೊಡುತ್ತಿದ್ದರು. ಆಗ ಯಾರೂ ಕಲಿಸದೇ ನಾನೊಂದು ವಿದ್ಯೆ ಕಲಿತಿದ್ದೆ, ಕದಿಯುವುದು. ಮನೆಯಲ್ಲಿ 'ಚಂದಮಾಮ'ರು ಹೆಚ್ಚುತ್ತಿರುವುದನ್ನು ನೋಡಿ ಅಮ್ಮ ಕೇಳಿದಾಗ "ನಾನು ಚೆನ್ನಾಗಿ ಓದ್ತೀನಿ ಅಂತ ಟೀಚರ್ರು ಬಹುಮಾನ ಕೊಟ್ಟಿದ್ದು" ಎಂದಿದ್ದೆ. ಯಾರೂ ಕಲಿಸದೇ ಮತ್ತೊಂದು ವಿದ್ಯೆ ಕಲಿತಿದ್ದೆ, ಸುಳ್ಳುಹೇಳುವುದು!. "ನಿಮ್ಮ ಮಗ ಕಳ್ಳ" ಎಂದು ಶ್ಯಾಮಲಾ ಮೇಡಂ ಸಾದಾಸೀದಾ ಹೇಳಿದಾಗ ಅಮ್ಮನ ಮುಖದ ಒಂದು ನರವೂ ಕೊಂಕಲಿಲ್ಲ, ಆದರೆ ಎರಡು ಹನಿಗಳು ಕಣ್ಣಿಂದ ಹಾಗೇ ಜಾರಿದವು. "ನಾನು ನನ್ನ ಮಗನನ್ನು ಬೆಳೆಸೋದ್ರಲ್ಲಿ ಎಲ್ಲೋ ಎಡವಿದೆ ಅನ್ಸುತ್ತೆ, ಅವನು ಹೀಗೆ ಮಾಡಿದಾನೆ ಅಂದ್ರೆ ಒಬ್ಬ ಅಮ್ಮನಾಗಿ ನಾನು ಸೋತಿದೀನಿ" ಎಂದಿದ್ದಳು. ಹೊಡೆಯಲೂ ಇಲ್ಲ ಬೈಯಲೂ ಇಲ್ಲ, ಆದರೆ ನನ್ನಮ್ಮ ನನಗೆ ಆಳವಾದ ಗಾಯ ಮಾಡಿದ್ದಳು. ಅವತ್ತು ಅಮ್ಮನಿಂದ ನಾನು ಕಲಿತದ್ದು 'ಪ್ರಾಮಾಣಿಕತೆ'.
ನನ್ನ ಬದುಕಿನ ಎರಡನೇ ಹೆಣ್ಣು 'ನನ್ನವಳು'. ಅಮ್ಮನಂತೆಯೇ ಕಾಲಿಗೆ ಗೆಜ್ಜೆ ಕಟ್ಟುತ್ತಿದ್ದಳು ಎಂಬುದಕ್ಕಿಂತ ಹೆಚ್ಚಿನ ಕಾರಣವೇ ಬೇಕಿರಲಿಲ್ಲ ನನಗವಳನ್ನು ಇಷ್ಟಪಡಲು. ನನಗಾಗಿ ಮನೆಯವರನ್ನು ಎದುರುಹಾಕಿಕೊಂಡು ನನ್ನ ಜೊತೆ ಬರುವಲ್ಲೆಲ್ಲಾ ನನ್ನಮ್ಮನ ಧೈರ್ಯದ್ದೇ ಪಡಿಯಚ್ಚು. ಅರ್ಧಚಂದ್ರಾಕಾರದ ಹಣೆಬೊಟ್ಟೆಂದರೆ ಅವಳಿಗಿಷ್ಟ. ತಮಾಷೆಗೆ ಅವಳನ್ನು 'ಅಮಾವಾಸ್ಯೆ' ಎಂದು ಕರೆಯುತ್ತಿದ್ದೆ. ಅವಳ ಕಿವಿಯ ಝುಮುಕಿ ನನ್ನ ನೆಚ್ಚಿನ ಆಟಿಕೆ. ನನ್ನ ಬಾಳಿಗೆ ಲಕ್ಷ್ಮಿಯಂತವಳು ಬಂದಮೇಲೆ ಬರೀ ಏಳಿಗೆಯೇ. ನೆನೆಸಿಕೊಂಡರೆ ಎಲ್ಲಾ ಜೇನುತುಪ್ಪದಂತಹ ನೆನಪುಗಳೇ. ಆದರೆ ನನ್ನೊಳಗಿನ ದುರಾತ್ಮ ಅಲ್ಲೂ ಎಚ್ಚೆತ್ತಿದ್ದ. ವ್ಯವಹಾರದ ನಷ್ಟದ ಬೇಸರದಲ್ಲಿ ಮೊದಲ ಬಾರಿಗೆ ಮದಿರೆಯಮಲಿನಲ್ಲಿ ಸಿಲುಕಿದ್ದೆ. ಮನೆಯೆಲ್ಲಾ ವಾಂತಿಮಾಡಿ ನನ್ನವಳಿಗೆ ಹೊಡೆದಿದ್ದೆ, ನನ್ನಿಷ್ಟದ ಆಟಿಕೆ ಕಿತ್ತು ಕಿವಿ ಹರಿದು ರಕ್ತಬರುವಷ್ಟು ಜೋರಾಗಿ. ನನ್ನವಳು ಆಗ ಗರ್ಭಿಣಿ!!. ಯೋಚಿಸಿದರೆ ಈಗಲೂ ಮೈಯೆಲ್ಲಾ ನಡುಗುತ್ತದೆ!. ಮಾರನೇ ದಿನ ಟನ್ನುಗಟ್ಟಲೆ ಪಶ್ಚಾತ್ತಾಪದ ಮೂಟೆಯ ಭಾರಕ್ಕೆ ತಲೆತಗ್ಗಿಸಿ ನಿಂತ ನನ್ನನ್ನು ನೋಡಿ "ನಿಮ್ ಪರಿಸ್ಥಿತಿ ನಂಗೆ ಗೊತ್ತಾಗುತ್ತೆ, ನಂಗೆ ನೀವು- ನಿಮ್ಗೆ ನಾನು ಅಂತ ನಿರ್ಧಾರ ಮಾಡಿದ್ಮೇಲೆ ಮುಗೀತು ಒಬ್ರಿಗೊಬ್ರು ಹೊಂದ್ಕೊಂಡು ಹೋಗ್ಬೇಕು" ಎಂದಿದ್ದಳು!. ನನ್ನವಳಿಂದ ನಾನವತ್ತು 'ಪ್ರೀತಿ' ಎಂದರೇನು ಎಂಬುದನ್ನು ಕಲಿತಿದ್ದೆ.....
ನನ್ನ ಬದುಕಲ್ಲಿ ಮತ್ತೊಂದು ಹೆಣ್ಣು ಬಂದಳು. ನನ್ನ ಮಗಳು, ನನ್ನ ಪ್ರೀತಿಯ ಪುಟ್ಟಿ ಧೈರ್ಯದ ಜೊತೆಗೆ ತನ್ನದೇ ಆದ ಮಾರ್ದವತೆಯನ್ನು ಮೈಗೂಡಿಸಿಕೊಂಡವಳು. ಮಮತೆಯ ಸಾಕಾರಮೂರ್ತಿಯವಳು. ರೂಪದಲ್ಲಿ ನನ್ನ ಪುಟ್ಟಿ ನನ್ನಮ್ಮನಿಗೂ ಕಡಿಮೆಯಿಲ್ಲ. ನೀಳವಾದ ಕಡುಗಪ್ಪು ಕೇಶರಾಶಿಯನ್ನು ಸುರುಳಿಸುತ್ತಿ ಜುಟ್ಟುಕಟ್ಟಿದರೆ ಅವಳು ಸೌಂದರ್ಯದ ಮೂರ್ತರೂಪ. ಪ್ರಾಣಿಗಳೆಂದರೆ ಹುಚ್ಚುಪ್ರೀತಿ. ಕಾಲೇಜೋದುವಾಗ ಕಾಲುಮುರಿದಿದ್ದ ಯಾವುದೋ ಬೀದಿನಾಯಿಮರಿಯನ್ನು ತಂದು ಕಾಳಜಿಯಿಂದ ಸಾಕಿದ್ದಳು. ನಾನು ಹೇಳಿಕೇಳಿ ದುರಾತ್ಮ, ದರಿದ್ರ ನಾಯಿ ಮನೆಯೆಲ್ಲಾ ಗಲೀಜು ಮಾಡುತ್ತದೆಂದು ಶಪಿಸುತ್ತಾ ಮುನಿಸಿಪಾಲಿಟಿಯವರು ಬೀದಿನಾಯಿ ಹಿಡಿಯಲು ಉರುಳಿನೊಂದಿಗೆ ಬಂದಾಗ ಶಕುನಿಯಂತೆ ಮೆಲ್ಲನೆ ಸಾಕುನಾಯಿಯೆಂದು ಸೂಚಿಸುವ ಅದರ ಕುತ್ತಿಗೆಯ ಬೆಲ್ಟು ಬಿಚ್ಚಿ ಹೊರಬಿಟ್ಟಿದ್ದೆ. ನನ್ನ ಮಗಳು ನನ್ನೊಡನೆ ಒಂದು ವರ್ಷ ಮಾತು ಬಿಟ್ಟಿದ್ದಳೆನ್ನುವುದಕ್ಕಿಂತ "ನೀನು ಕೊಂದಿದ್ದು ನಾಯಿಮರಿಯನ್ನಲ್ಲ, ನನ್ನನ್ನೇ ಅಪ್ಪಾ" ಎಂಬ ಅವಳ ಮಾತುಗಳು ದಿನದಿನಕ್ಕೂ ನನ್ನನ್ನು ಭೂಮಿಯಡಿ ತುಳಿಯುತ್ತಿದ್ದವು. ನಮ್ಮಿಬ್ಬರನ್ನೊಂದುಮಾಡಲು ನನ್ನವಳು ಕಾಯಿಲೆಬಿದ್ದು ನಮ್ಮನ್ನಗಲಬೇಕಾಯಿತು. ಆಸ್ಪತ್ರೆಯಿಂದ ವಾಪಸ್ ಬಂದ ದಿನ ಪುಟ್ಟಿ ನಾನು ಇಬ್ಬರೂ ತಬ್ಬಿಕೊಂಡು ಅರ್ಧಗಂಟೆ ಅತ್ತಿದ್ದೆವು. ನನ್ನ ಕಂದ ನನಗೆ 'ಕರುಣೆ'ಯನ್ನು ಕಲಿಸಿದಳು....
"ಅಪ್ಪಾ ಇನ್ನೂ ಜೋರಾಗಿ ಎಳಿ"....., ಪುಟ್ಟಗೌರಿಯ ಮಾತಿನಿಂದ ವಾಪಸ್ಸು ವಾಸ್ತವಕ್ಕೆ ಬಂದೆ. ಅಳಿಯಂದಿರು ನನ್ನ ಮೊಮ್ಮಗಳೊಂದಿಗೆ ದಡಕ್ಕೆ ದೋಣಿಯೆಳೆಯುವ ಆಟದಲ್ಲಿ ಮಗ್ನರಾಗಿದ್ದಾರೆ. ಹಾಗೇ ಮೊಮ್ಮಗಳ ಬಳಿಸಾರಿ ತಲೆನೇವರಿಸುತ್ತಾ ಬಾಯಲ್ಲಿದ್ದ ಎಲೆಯಡಿಕೆ ಉಗಿದು " ಗೌರೀ" ಎಂದೆ. "ತಾತಾ ಕಂಡಕಂಡಲ್ಲೆಲ್ಲ ಉಗೀಬಾರ್ದು" ಎಂದು ಮುಖಸಿಂಡರಿಸಿದಳು. ನನಗಿದು ಮತ್ತೊಂದು ಪಾಠ ಕಲಿಯುವ ವಯಸ್ಸು!!. ಹಾಗೇ ಅವಳ ಮುದ್ದುಮುಖ ನೋಡಿದೆ. ನನ್ನಮ್ಮ, ನನ್ನವಳು, ನನ್ನಪುಟ್ಟಿ ಎಲ್ಲರೂ ಕಾಣಿಸಿದರು. ಹೌದು, ಹೇಗೆ ನೋಡಿದರೂ ನಾನೊಬ್ಬ ಅತಿಮಾಮೂಲಿ ಅಡ್ನಾಡಿ ಗಂಡುಮನುಷ್ಯ. ನನಗೆ ಬದುಕನ್ನು ಕಲಿಸಿದವಳು......, 'ಹೆಣ್ಣು'.........


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...