ಕಾತರ

Posted by ಸಂಪತ್ ಸಿರಿಮನೆ on 26-Feb-2017
ಕಾಯುತ್ತಲೇ ಅದೆಷ್ಟು ಕಾಲ ಕಳೆದಿದೆ??....

ಬಿರುಬಿಸಿಲಿನಲಿ ಬಳಲಿ ಬಾಯ್ಬಿಟ್ಟ ಬರಬಂದ ಬಯಲು
ವರ್ಷಗಳಾಚೆಯೆಲ್ಲೋ ತನ್ನೊಡಲ ಆಶ್ರಯಿಸಿ
ಬೇರುಗಳ ಹುಗಿದು ತಲೆಯೆತ್ತಿದ ತರುಗಳ
ಪ್ರೀತಿಯ ನೆರಳಲ್ಲಿ ಅದಾರೋ ನಿದ್ರೆಗೈದಾಗ
ಅಡಿಗೆ ಹಾಸಿಗೆಯಾಗಿ ಪಡೆದ ಸಾರ್ಥಕ್ಯವ ನೆನೆದು
ಯಾರೋ ತಿಂದು ಬಿಸುಟಿರುವ ಯಾವುದೋ ಹಣ್ಣಿನ ಬೀಜ
ಹೊಸಜೀವ ತಳೆಯಲು ಹನಿನೀರಿಗೆ ತವಕಿಸುವಾಗ
ತಡೆಯಲಾರದೇ ತನ್ನೊಡೆದ ಮೈ ಹುರಿಗೊಳಿಸಿ
ದೂರದಲಿ ಕರಿಗಟ್ಟಿದ ಒಂಟಿಮೋಡವ ಕಂಡು
ಇನ್ನೇನು ನೊಸಲಧಾರೆ ತನ್ನ ಮುತ್ತಿಕ್ಕುವುದೆಂದು
ಕಾಯುತ್ತಲೇ ಅದೆಷ್ಟು ಕಾಲ ಕಳೆದಿದೆ??....

ಅಮ್ಮನ ಮಡಿಲಲಿ ಮಲಗಿ ಕಥೆಯಾಲಿಸುತಿರುವ ಮಗು
ಮುಚ್ಚಿರುವ ಬಾಗಿಲನು ಬೇಸರದಿ ದಿಟ್ಟಿಸುತ
ದೇಶದೇಶಗಳ ಮಧ್ಯೆ ಗೆರೆಯೆಲ್ಲ ಮರೆಯಾಗಿ
ದ್ವೇಷ ಸ್ವಾರ್ಥಗಳ ಕಿಚ್ಚು ಕೊನೆಗೂ ಕೊನೆಯಾಗಿ
ವಿಶ್ವವಿಡೀ ಒಂದಾಗಿ ಎಲ್ಲ ಸಂಬಂಧಿಕರಾಗಿ
ಬಂದೂಕು ಬಾಂಬುಗಳಿಗೆ ಬೆಲೆಯಿಲ್ಲದಂತಾಗಿ
ಗಡಿಗೆ ತೆರಳಿರುವ ಅಪ್ಪ ಇನ್ನೇನು ಮರಳುವರೆಂದು
ಕಂಕುಳಲ್ಲೆತ್ತಿಕೊಂಡು ಒಮ್ಮೆ ಮುದ್ದಿಸುವರೆಂದು
ಕಾಯುತ್ತಲೇ ಅದೆಷ್ಟು ಕಾಲ ಕಳೆದಿದೆ??....

ಶಾಂತಿಪ್ರಿಯನೋರ್ವನ ಮನೆಯ ಬಿಳಿಯಪಂಜರದ ಗಿಳಿ
ಅಶಾಂತಿಯ ಬೇಗೆಯಲಿ ನಿಡುಸುಯ್ದು ಬೇಯುತ್ತಾ
ಆಗಸದಲಿ ರೆಕ್ಕೆ ತೆರೆದ ಹಳೇ ಗೆಳೆಯರ ಕಂಡು
ದೊಡ್ಡಾಲದ ಮರದಲಿ ಕುಳಿತು ಹಾಡು ಹೇಳುವೆನೆಂದು
ನೇರಳೆ ಮರದ ಕೊಂಬೆಯನೊಮ್ಮೆ ಮುಟ್ಟುವೆನೆಂದು
ಸ್ವಾತಂತ್ರ್ಯದ ಘಮವನ್ನು ಸವಿದೇ ಸವಿಯುವೆನೆಂದು
ಮಿಂಚಿನ ಕಂಗಳಲಿ ಹೊಸ ಆಸೆಯನು ಹೊಸೆಯುತ್ತಾ
ದೈನೇಸಿ ಮುಖಮಾಡಿ ತನ್ನೊಡೆಯನನು ನೋಡಿ
ಇನ್ನೇನು ಪುಣ್ಯಾತ್ಮ ಮುಕ್ತಿಕೊಡುವನು ಎಂದು
ಕಾಯುತ್ತಲೇ ಅದೆಷ್ಟು ಕಾಲ ಕಳೆದಿದೆ??....

ವರ್ಷಗಳ ಹಿಂದೆಲ್ಲೋ ಹೆಸರಾಗಿದ್ದ ಕವಿಯೊಬ್ಬ
ಕವನ ಜನಿಸದ ಇಂದಿನ ದುಸ್ಥಿತಿಯ ಹಳಿಯುತ್ತಾ
ಹಳೆಯ ಬಿರುದುಗಳ ನೋಡಿ ತುಟಿಯ ತುದಿಯಲಿ ನಕ್ಕು
ಹೊಸತೊಂದು ಸ್ಫೂರ್ತಿಯ ಎಳೆಗೆ ಎಡೆಬಿಡದೇ ತಡಕಾಡಿ
ಹತಾಶಭಾವದ ಪರದೆ ಇನ್ನೇನು ಸರಿಯುವುದೆಂದು
ಪದಪುಂಜಗಳ ಅಲೆಯು ಮನವನ್ನೇ ಮುಳುಗಿಸಿ
ಲೇಖನಿಯ ತುದಿಯಲ್ಲಿ ಇನ್ನೇನು ಹರಿಯುವುದೆಂದು
ಕಾಯುತ್ತಲೇ ಅದೆಷ್ಟು ಕಾಲ ಕಳೆದಿದೆ???.....


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...