ಮಲೆನಾಡ ಗರ್ಭವದು!

Posted by ಶ್ರೀನಿಧಿ ವಿ.ನಾ. on 16-Mar-2017
ಇದು ನನ್ನ ತಮ್ಮ ಗುರು ತೆಗೆದ ಚಿತ್ರ. ತಾನು ತೆಗೆಯೋ ಚಿತ್ರಗಳಲ್ಲಿ ಪಿಸುಗುಡುವ ಅವನ ಚಿತ್ರಗಳಲ್ಲಿ ಅದೊಂದು ದಿವ್ಯ ಭಾವದ ಸೆಲೆಯಿರುತ್ತೆ ಸಾಮಾನ್ಯವಾಗಿ. ಈ ಚಿತ್ರ ಅವನು ತೆಗೆದಿರೋ ಎಲ್ಲಾ ಚಿತ್ರಗಳಲ್ಲಿ ನನಗೆ ಹೆಚ್ಚಾಗಿ ಕಾಡೋದು‌.


ಇದರಲ್ಲಿ ಏನಿದೆ, ತಮ್ಮ ಅಂತ ಸುಮ್ನೆ ಮಮತೆ ಮಾತಾಡ್ತಿದೆ ಅಂತ ಮೂಗು ಮುರಿಯಬಹುದು, ಆದರೆ ಇದರಲ್ಲಿ ಏನಿದೆ ಅನ್ನೋದ್ಕಿಂತ ಏನಿಲ್ಲಾ ಅನ್ನೋದು ಬಹುದೊಡ್ಡ ವಿಷಯ ನಂಗೆ!

ಇದು ಮಲೆನಾಡಿನಲ್ಲಿ ತೀರಾ ಎಲ್ಲರ ಮನೆಯಲ್ಲಿರೋ,‌ ಅಂಗಳದಿಂದ ತೋಟಕ್ಕೆ ಹೋಗಲು ಮಾಡಿರೋ ಮೆಟ್ಟಿಲು. ಆದ್ರೆ ಇದರ ಸುತ್ತನೇ ಅಲ್ಲೇ ಎಲ್ಲೋ, ಅಮ್ಮ ದನದ ಕೊಟ್ಟಿಗೆಗೋ ಅಥವಾ ಹೊರಗೆಲ್ಲೋ ಹೋದಾಗ, ಅವಳಿಗೆ ತಿಳಿಯದಂತೆ ಅಡಿಗೆಮನೆಯಿಂದ ಕದ್ದು ತಂದ ಬೆಲ್ಲದ ಚೂರು, ತೆಂಗಿನಕಾಯಿಯ ಹೋಳು, ದ್ರಾಕ್ಷಿ, ಗೇರು ಬೀಜಗಳ ಚೂರು ಬಿದ್ದಿದಾವೆ!

ಅಲ್ಲೇ ಎಲ್ಲೋ ಪಕ್ಕದಲ್ಲಿ ಕ್ರಿಕೇಟ್ ಆಡ್ತಾ ಕಳ್ದೋದ ರಬ್ಬರ್ ಬಾಲ್ಗಳಿದಾವೆ, ಪಕ್ಕದಲ್ಲಿ ಮಳೆಗಾಲದಲ್ಲಿ ಧೋ ಎಂದು ಸುರಿವ ಮಳೆಯ ನೀರು ಹೋಗಲು ಮಾಡಿರೋ ಸಣ್ಣ ಕಾಲುವೆಗಾಳಿದಾವೆ, ಕಾಲುವೆಯಲ್ಲಿ ತೇಲಿಬಿಟ್ಟ ಕಾಗದದ ದೋಣಿಗಳಿದಾವೆ, ಬಣ್ಣ ಮಾಸಿರಬೋದು ಅಷ್ಟೇ ಕಾಗದದ್ದು!

ಅಲ್ಲೇ ಎಲ್ಲೋ ಚಿಕ್ಕು ಪೇರಲೆ ಗೇರು ಮರದ ಮುರಿದ ಕೊಂಬೆಗಳಿದಾವೆ! ಚೂರು ಗಮನವಿಟ್ಟು ನೋಡಿದ್ರೆ ದೋಟಿ ಹಾಕಿ ಎಳೆದ ಪೇರಲೆ ಹಣ್ಣು ಸಿಗ್ಲೂ ಬಹುದೇನೊ!

ಮಳೆಗಾಲಕ್ಕೆ ನೆಲದ ಅಂಗುಲವೂ ಬಿಡದೇ ಪೂರ್ತಿಯಾಗಿ ಹಸಿರುಗವಚ ಹಾಸಿರತ್ತೆ! ಇಲ್ಲೇ ಎಲ್ಲೋ ಜಾರಿ ಬಿದ್ದು 'ಹಿಂದಿನ ಭಾಗ' ಜಜ್ಜಿಕೊಂಡಿರ್ತೀವಿ!

ಆಗಷ್ಟೇ ಚೂರೇ ಚೂರು ಮಳೆ ಬಂದು, ಬಿಸಿಲಿನ ಅಪ್ಪುಗೆ ಮುತ್ತಿದ್ದರೆ, ಅಲ್ಲಿಯ ಕಾಫ಼ೀ ಗಿಡಗಳು ಅರಳಿ ಬೆಳ್ಳಗಿನ ಹೂವು ಹೊತ್ತು ನಿಂತಿರ್ತಾವೆ, ಚೂರು ಮೂಗಿಗೆ ಕೆಲ್ಸ ಕೊಟ್ರೆ, ಈ ಬೆಂಗ್ಳೂರ ಕಾಂಕ್ರೀಟಲ್ಲಿ ಕೂಡ ಆ ಘಮ ಮೂಗಿಗೆ ತಾಗುತ್ತೆ ಚಿತ್ರವನ್ನು ದಿಟ್ಟಿಸಿದರೆ...!

ಅಲ್ಲಿ ಬಲವಂತದಿಂದ ಕಟ್ಟಿ ಮನದ ಅಟ್ಟಕಿಟ್ಟ ಹಸಿಬಿಸಿ ನೆನಪುಗಳಿದಾವೆ, ಅಲ್ಲಿ ಎಲ್ಲಿಕ್ಕಿಂತ ಹೆಚ್ಚಾಗಿ ನನ್ನ ಜೀವವಿದೆ, ೨೪ ವಸಂತ ಕಂಡ ಜೀವನಕ್ಕೆ ನಾಂದಿಯಾದ ಮಲೆನಾಡ ಗರ್ಭವದು!


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...