ಪುಟ್ಟವ್ವ...!

Posted by ಮಲ್ಲಿಕಾರ್ಜುನ್ ಜಿ ಎಸ್ on 20-Mar-2017
ಮನೆಯಂಗಳದ ಕಟ್ಟೆಯ ಮೇಲೆ ಕೂತು ಬೇರಾವುದೋ ಯೋಚನೆಯಲ್ಲಿ ಮಗ್ನನಾಗಿದ್ದ ಸಿದ್ದಪ್ಪನನ್ನು ಪೆಟ್ಟಿಗೆಯ ಚಿಲಕದ ಶಬ್ಧ ವಾಸ್ಥವಕ್ಕೆ ಕರೆಸಿತು."ಒಳಗ್ ಅವ್ಳೇನ್‍ ಮಾಡ್ತಾವ್ಳೊ ನೋಡ್ರಪ.."ಎಂದು ತನ್ನ ಮಕ್ಕಳಿಗೆ ಸೂಚನೆ ಕೊಟ್ಟು ಮತ್ತೆ ತನ್ನ ಚಿಂತನಾಲೋಕಕ್ಕೆ ಮರಳಿದ. ತಾನು ಪುಟ್ಟಮ್ಮನನ್ನು ಮದುವೆಯಾದಾಗಿನಿಂದ ಇಂದಿನವರೆಗೆ ಆದ ಅದೆಷ್ಟೊ ಬದಲಾವಣೆಗಳು ಅವನೆದರು ಹಾದುಹೋಯಿತು.ತಾನೇ ಆಕೆಗೆ ಕಲಿಸಿದ ಕುಡಿತದ ಚಟ ಸಂಸಾರಕ್ಕೆ ತಂದ ಅವಸ್ಥೆ ಕೊನೆಗಾಲದಲ್ಲಿ ಸಿದ್ದಪ್ಪನಿಗೆ ಕಾಡತೊಡಗಿದವು.
ನಾಲ್ಕು ಜನ ಅಣ್ಣ-ತಮ್ಮಂದಿರ ತುಂಬು ಕುಟುಂಬಕ್ಕೆ ಪುಟ್ಟವ್ವ ಸಿದ್ದಪ್ಪನ ಕೈ ಹಿಡಿದು ಬಂದಾಗ ಆಕೆಯೆದುರು ಮೊದಲಿದ್ದ ಸವಾಲು ತನ್ನ ಗಂಡನೊಂದಿಗೆ ಬೇರೆ ಸಂಸಾರ ಹೂಡುವುದು.ಎಷ್ಟೇ ಪ್ರಯತ್ನಿಸಿದರು ಪುಟ್ಟವ್ವಳಿಗೆ ಅವಕಾಶ ಒದಗಲು ಮೂರು ವರ್ಷಗಳೇ ಕಳೆಯಿತು. ತನ್ನ ಎರಡನೇ ಬಾಣಂತನ ಮುಗಿಸಿ ಬಂದಾಗ ಮನೆಯ ಹಿರಿ ಸೊಸೆ ಸಾರಾಯಿ ಹೀರಿ ತನ್ನ ಸೀರೆಯ ಸೆರಗನ್ನು ಬಾಯೊಳಗೆ ತುರುಕಿಕೊಂಡದ್ದನ್ನು ಕಣ್ಣಾರೆ ಕಂಡಾಗ ಪುಟ್ಟವ್ವ ಅದೇ ರಾತ್ರಿ ಸಿದ್ದಪ್ಪನ ಬಳಿ ತಕರಾರೆತ್ತಿದಳು."ನಮ್ ವಂಸ್‍ದಾಗೆ ಧಮ್ಮು ಯಾರ್ದೊ ಶಾಪದ್ ಅಂಟ್‍ರೋಗ ಕಣೆ,ಅದಕ್ಕೆ ಹೆಂಡನೆ ಮದ್ದು,ಅದ್ಕೆ ಎಲ್ರು ಸ್ವಲ್ಪ ಸಾರಾಯಿ ತಗಂತಾರೆ.ನಮ್ಗ್ ಇನ್ನು ವಯಸ್ಸೈತೆ ಮುಂದುಕ್ ನಮ್ಗು ಅದೇ ಗತಿ.." ಎಂದು ಸಮಧಾನಿಸಲು ತನ್ನ ವ್ಯರ್ಥ ಪ್ರಯತ್ನ ಮಾಡಿದ. ಕೊನೆಗೂ ಅವಳ ಗೋಳು,ರಂಪಾಟ ತಾಳಲಾರದೆ ತನ್ನ ಭಾಗ ಪಡೆದು ಬೇರೆ ಒಲೆ ಹಚ್ಚಲು ಸಮ್ಮತಿಸಿದ.

ಸಿದ್ದಪ್ಪನಿಗೆ ಕುಡಿತ ಮೀಸೆ ಚಿಗುರಿದಾಗಿನಿಂದ ಅಂಟಿದ್ದ ಬೇತಾಳ,ಅದು ಸಾಲದಲ್ಲಿ ಮುಳುಗಿದರು ಬಿಡದೆ ಹೆಗಲೇರಿತ್ತು.ಇತ್ತ ಪುಟ್ಟವ್ವ ನಾಲ್ಕು ಗಂಡು ಮಕ್ಕಳ ಹೆತ್ತ ನಂತರ ಜೀವನ ಇನ್ನೂ ಬಿಗಡಾಯಿಸಿತು,ಕೇವಲ ತಮ್ಮ ಅಲ್ಪ ಜಮೀನಿನಲ್ಲಿ ದುಡಿದರೆ ಸಂಸಾರಭಾರ ಹೆಚ್ಚೆಂದು ಅರಿತು ಇಬ್ಬರೂ ಕೂಲಿಗೆ ಹೊರಟರು. ಹೊರ ಜಗತ್ತಿಗೆ ಯಾವಾಗಲು ಮಾರುದೂರ ಇರುತ್ತಿದ್ದ ಪುಟ್ಟವ್ವಳಿಗೆ ಇದು ಕಠಿಣ ಕಾಲ, ಜೊತೆಯಲ್ಲಿರುತ್ತಿದ್ದ ಹೆಂಗಸರು ಕೆಲಸದ ಮಧ್ಯೆ ತಮ್ಮ ಸೊಂಟಕ್ಕೆ ಕೈಹಾಕಿ ಸಾರಯಿ ಪ್ಯಾಕೆಟ್‍ನು ಹೊರತೆಗೆದು ಹೀರುವುದು ಇವಳ ಪಾಲಿಗೆ ಹೇಸಿಗೆಯ ಕೃತ್ಯ.ಇದೇ ನೆಪವೊಡ್ಡಿ ತುಂಬು ಕುಟುಂಬದಿಂದ ವಿಭಾಗವಾಗಿದ್ದ ಪುಟ್ಟವ್ವ ಈಗ ಎಲ್ಲವನ್ನು ಅನುಸರಿಕೊಂಡು ಹೋಗಬೇಕಿತ್ತು.ಪುಟ್ಟವ್ವಳ ತಿರುಚಿದ ಮುಖ ನೋಡಿ ಸಾರಾಯಿ ಹೀರಿದ ಹೆಂಗಸು ನಗುತ್ತ "ಏ ಪುಟ್ಟವ್ವ ,ಯಾಕೆ ಮಕ ಹಂಗ್ ಮಾಡ್ಕಂತಿಯ ನಾನೇನ್ ಮಾಡ್‍ಬಾರ್ದ್ ಮಾಡ್ತಿವ್ನ"ಎಂದಳು,ಇದಕ್ಕೆ ಪ್ರತಿಯಾಗಿ ಪುಟ್ಟವ್ವ"ನೀವ್‍ ಏನಾದ್ರು ಮಾಡ್‍ಕಳ್ರಿ, ಕೆಲ್ಸದ್ ಟೇಮ್‍ನಾಗ್ ಮಾಡಿದ್ರೆ ನಮ್ಗ್ ಸರಿ ಬರಕ್ಕಿಲ್ಲ"ಎಂದು ಕಟುವಾಗೆ ಹೇಳಿದಳು. ಇದನ್ನು ಕೇಳಿ ಮತ್ತಿನಲ್ಲಿದ್ದ ಹೆಂಗಸು "ಯಾಯ್ ಮಂಗಿ, ಏನು ತಗಳ್ದೆ ಕೆಲ್ಸ ಮಾಡಿದ್ರೆ ರಾತ್ರಿ ಕೈಕಾಲ್ ಸೊಂಟ ಎಲ್ಲಾ ಹಿಡ್‍ಕಂತಾವೆ,ನಾಳಿಕ್ ಕೆಲ್ಸಕ್ ಬರೋಕ್ ಆದ್ರು ಆದೀತಾ. ಇದಿದ್ರೆ ಹೊತ್ ಹೆಂಗ್ ಹೋಕತೆ ಅನ್ನದೇ ತಿಳಿಯಲ್ಲ"ಎಂದಾಗ ಪುಟ್ಟವ್ವ ಮರುಮಾತಾಡದೆ ಸುಮ್ಮನಾದಳು. ತನ್ನ ಮೊದಲ ದಿನದ ಕೆಲಸ ಮುಗಿಸಿ ಮನೆಗೆ ಬಂದಾಗ ಪುಟ್ಟವ್ವ ನಿತ್ರಾಣಳಾಗಿದ್ದಳು,ಮಕ್ಕಳಿಗೆ ಊಟ ಬಡಿಸಿ ಮಲಗಿದವಳು ಮಾರನೆ ದಿನ ಏಳಲಾಗದೇ ಕುಸಿದಳು.ಜ್ವರ ಅವಳನ್ನು ಆವರಿಸಿತ್ತು.ತನ್ನ ಹಿರಿ ಮಗ ಚಂದ್ರನಿಗೆ ಹೇಳಿ ಮಾತ್ರೆ ತರಿಸಿ ನುಂಗಿದರು ಜ್ವರ ಬಿಡಲಿಲ್ಲ. ಸಿದ್ದಪ್ಪ ಇದರಿಂದ ಗಾಬರಿಯಾದ, ಆಸ್ಪತ್ರೆಗೆ ಕರೆದೊಯ್ದರೆ ಜೇಬಿಗೆ ಕತ್ತರಿಯೆಂದು ಯೋಚಿಸಿ ಪುಟ್ಟವ್ವಳ ಬಳಿ ಬಂದು ಮೆಲ್ಲಗೆ "ಪುಟ್ಟಿ ,ನಿಂಗ್ ಜ್ವರ ಆ ಮಾತ್ರೆ ತಗಂಡ್ ಮಲ್ಗಿದ್ರೆ ಹೋಗಾಕ್ಕಿಲ್ಲ,ನನ್ ಮಾತ್ ಕೇಳು,ಸರ್ವರೋಗಕ್ಕು ಸಾರಾಯಿನೇ ಮದ್ದು ಅಂತ ಸುಮ್ನೇ ಅಂತಾರ, ಟಾನಿಕ್ ಅಂಕೊಂಡು ಚೂರ್‌ಚೂರೇ ಕುಡಿ ಆಮೇಲ್ ಅದ್ಯಾಕ್ ಸರಿ ಹೋಗಲ್ಲ ನಾನು ನೋಡ್ತಿನಿ,,."ಅಂದು ಗಾಬರಿಯಿಂದ ಅವಳ ಉತ್ತರದ ನೀರಿಕ್ಷೆಯಲ್ಲಿದ್ದ. ಪುಟ್ಟವ್ವಳಿಗೆ ಈಗ ಹೊಲದಲ್ಲಿ ಆ ಹೆಂಗಸು ಆಡಿದ ಮಾತುಗಳು ನೆನಪಾದವು,ಈ ದೇಹ ದಂಡಿಸಿದರೆ ಸಾರಾಯಿ ಅತ್ಯಗತ್ಯವೆಂದು ಅದಕ್ಕಾಗಿಯೇ ಆಕೆ ನಿತ್ಯ ಅದರ ಮೊರೆ ಹೋಗುತ್ತಾಳೆಂದು ತಿಳಿದು ಹಾಗು ತಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ಅರಿವಿದ್ದುದರಿಂದ ಗಂಡನ ಮಾತಿಗೆ ಒಪ್ಪಿದಳು. ಇದರಿಂದ ಸಂತಸಗೊಂಡ ಸಿದ್ದಪ್ಪ ಓಡಿ ಹೋಗಿ ಮೂರು ಪ್ಯಾಕೆಟ್ ಸಾರಾಯಿ ಕೊಂಡನು, ಒಂದು ಮಡದಿಗೆ,ತನಗೆರಡು ಹಣ ಉಳಿದ ಸಂತೋಷಕ್ಕೆ.ಸಿದ್ದಪ್ಪನಿಗೆ ಇವೆಲ್ಲದುದರಿಂದ ತನಗೆ ಮುಂದೊದಗುವ ಪರಿಣಾಮದ ಬಗ್ಗೆ ಸ್ವಲ್ಪವೂ ಅರಿವಿಲ್ಲದೇ ಮತ್ತಿನಲ್ಲಿ ತೇಲಿದ.

ಎರಡು ದಿನಗಳ ನಂತರ ಚೇತರಿಸಿಕೊಂಡ ಪುಟ್ಟವ್ವ ಕೆಲಸಕ್ಕೆ ಬಂದಾಗ ಹೊಲದಲ್ಲಿ ಸಹದ್ಯೋಗಿಗಳು ನಡೆದ ವಿಚಾರ ಕೇಳಿ ತಿಳಿದರು,ಇದರಿಂದ ಮೊದಲ ದಿನ ಸಾರಾಯಿಯ ಮಹಿಮೆ ಬಗ್ಗೆ ಗೀತೋಪದೇಶ ಮಾಡಿದ್ದ ಹೆಂಗಸಿಗೆ ಪುಟ್ಟವ್ವ ಪರಮಾಪ್ತೆಯಾದಳು."ಪುಟ್ಟವ್ವ ,ಜ್ವರ ಬಂದ್‍ಮ್ಯಾಗ್ ಕುಡಿಯಕ್ಕಿನ್ನ ಕೆಲ್ಸ ಮಾಡಾಕಾರನೆ ತಗಂಡ್ರೆ ಮೈಕೈ ಹಗುರಾಗಿ ಜಲ್ದಿ ಸಾಗ್ತತೆ" ಎಂದು ಪುಟ್ಟವ್ವಳನ್ನು ವಿನ್ಹಾಕಾರಣ ಕುಡಿತದ ಚಟಕ್ಕೆ ನೂಕಿದಳು. ಮಾತಾಡಿದರೆ ಮುತ್ತು ಉದಿರೀತೆಂದು ಚಿಂತಿಸುತಿದ್ದ ಪುಟ್ಟವ್ವ ಈಗ ಮಾತೇನಿಲ್ಲಿಸದ ಮನರಂಜನೆಯ ಆಕಾಶವಾಣಿ. ಮೊದಮೊದಲು ಮನರಂಜನೆಗಾಗಿ ಪುಟ್ಟವ್ವಳಿಗೆ ಕುಡಿಸುತಿದ್ದ ಸಹದ್ಯೋಗಿಗಳು,ಚಟಕ್ಕೆ ಬಲಿಯಾದ ನಂತರ ಹಣ ಕೇಳಲಾರಂಭಿಸಿದರು. ಇಕ್ಕಟ್ಟಿಗೆ ಸಿಲುಕಿದ ಪುಟ್ಟವ್ವ ಸಾರಾಯಿಯಿಲ್ಲದೆ ಕೈಗೆ ಕೆಲಸವಿಲ್ಲ ಎಂಬಂತಾದಳು. ದಿನಕ್ಕೆ ಹತ್ತು ರೂಪಾಯಿಯಿಂದ ಆರಂಭವಾಗಿ ನಂತರದ ದಿನಗಳಲ್ಲಿ ದಿನದ ಅರ್ಧ ಕೂಲಿ ಸಾರಾಯಿಗೆ ಸಾಲುತಿರಲಿಲ್ಲ.
ಹೀಗೆ ಕಾಲ ಸರಿಯಿತು,ಹಿರಿ ಮಗ ಚಂದ್ರ ದುಡಿಮೆಯಲ್ಲಿ ಯಶಗಳಿಸಿ ಸಾಕಷ್ಟು ಭೂಮಿಗೊಂಡನು,ತಮ್ಮ ತಂದೆ-ತಾಯಿಗೆ ಕೂಲಿಯಿಂದ ಮುಕ್ತಿ ನೀಡಿ ತನ್ನ ತಮ್ಮಂದಿರನ್ನು ಓದಿಸುತ್ತ ಮನೆಯ ಜವಬ್ದಾರಿ ವಹಿಸಿಕೊಂಡನು. ತಮ್ಮಂದಿರಲ್ಲಿ ಮಹೇಶ ಸರ್ಕಾರಿ ಹುದ್ದೆ ಪಡೆದ,ಉಳಿದವರಾದ ನಾಗೇಶ ಮತ್ತು ಕಲ್ಲೇಶ ವಿದ್ಯೆ ಹತ್ತದೆ ಹತ್ತಿರದ ಕಾರ್ಖಾನೆ ಸೇರಿದರು. ಸಿದ್ದಪ್ಪ ಸಣ್ಣಪುಟ್ಟ ವ್ಯವಹಾರ ನಡೆಸುತ್ತ ತನ್ನ ಖರ್ಚಿಗೆ ಕುಂದುಬಾರದಂತೆ ನೋಡಿಕೊಂಡ,ಆದರೆ ಇವೆಲ್ಲದುದರಿಂದ ಪುಟ್ಟವ್ವಳಿಗೆ ತೀವ್ರ ತೊಂದರೆಯಾಯಿತು. ಮೊದಲು ಮನೆಯಲ್ಲಿ ಅಳಿದುಳಿದ ನಾಣ್ಯ ಹುಡುಕಿ ದಾರಿಯಲ್ಲಿ ಕಾಣಸಿಗೊ ಮಕ್ಕಳ ಕರೆದು ಸಾರಾಯಿ ತರಿಸುತ್ತ,ನಂತರ ಗುಪ್ತವಾಗಿ ಒಬ್ಬನೊಂದಿಗೆ ಮಾತನಾಡಿ ಮನೆಯ ಅಕ್ಕಿ-ಬೇಳೆಗಳನ್ನು ಮಾರಿ ತನ್ನ ಸರಕನ್ನು ಪಡೆಯಲಾರಂಭಿಸದಳು.ಇದಾವುದು ಚಂದ್ರನ ಅರಿವಿಗೆ ಬಾರದಂತೆ ತನ್ನ ಕಾರ್ಯ ಸಾಧಿಸಿ ಮತ್ತಿನಲ್ಲಿ ಬೀಗವುದು ಪುಟ್ಟವ್ವಳಿಗೆ ಅಭ್ಯಾಸವಾಯಿತು.

ಚಂದ್ರನಿಗೆ ತನ್ನ ತಾಯಿಯ ದುರಭ್ಯಾಸದ ಬಗ್ಗೆ ತಿಳಿದಿತ್ತು ಆದರೆ ಅದು ಮಿತಿಯ ಪರಮಾವಧಿ ತಲಿಪಿದ್ದುದು ಅರಿವಿಗೆ ಬಂದದ್ದು ಪುಟ್ಟವ್ವ ರೊಟ್ಟಿಗೆ ರಂಗೋಲಿ ಹಿಟ್ಟು ಬಳಸಿದಾಗ. ಆ ದಿನದ ಮುಂಜಾವು ಯಥಾಪ್ರಕಾರ ಹೊಲಕ್ಕೆ ಹೊರಟ ಚಂದ್ರ ಮಧ್ಯಾಹ್ನ ಆಳುಗಳಿಗೂ ಸೇರಿ ರೊಟ್ಟಿ ಮಾಡಿರಲು ಹೇಳಿದ.ಸೂರ್ಯ ನೆತ್ತಿಗೇರಿ ಇಳಿಯಹತ್ತಿದರೂ ಪುಟ್ಟವ್ವ ಪತ್ತೆಯಿಲ್ಲ,ಹೊಟ್ಟೆ ಚುರುಕ್ ಹತ್ತಿತು , ಚಂದ್ರಪ್ಪ ಸಿಟ್ಟಿನಲ್ಲಿ ಮನೆಯೆಡೆ ಹೊರಟ. ಚಂದ್ರನನ್ನು ನೋಡಿದ ಪುಟ್ಟವ್ವ "ಯಾಕೊ ಗೊತ್ತಿಲ್ಲ ತಮಾ,ಹಿಟ್ ಸರಿಗೈತೊ ಇಲ್ಲೋ, ಏಟ್ ತಟ್ಟಿದ್ರು ರೊಟ್ಟಿ ಈಚಂಗೆ ಇಲ್ಲ" ಎಂದು ತನ್ನ ಕೆಂಪಾದ ಕಣ್‍ಬಿಡಲಾಗದೇ ಮತ್ತೆ ತಟ್ಟಲಾರಂಭಿಸಿದಳು. ಇತ್ತ ಮೊದಲೇ ಹಸಿವಿನಿಂದ ಬಳಲಿ ಕೋಪದಿಂದ ಕುದಿಯುತಿದ್ದ ಚಂದ್ರನಿಗೆ ಈ ದೃಶ್ಯ ತಾಳ್ಮೆಯನ್ನು ಒದ್ದುಹೊರಹಾಕಿತು,ಪಕ್ಕದಲ್ಲೇ ಸಿಕ್ಕ ಸೀಳಿದ ಕಟ್ಟಿಗೆಯ ಎತ್ತಿ ಪುಟ್ಟವ್ವಳ ಬೆನ್ನಿಗೆ ಬಾರಿಸಿದ,"ಕುಡ್‍ಕಂದು ರಂಗೋಲಿ ಹಿಟ್‍ನ್ಯಾಗ್ ರೊಟ್ಟಿ ತಟ್‍ಕಂತ ಕೂತಿಯೆನೇ "ಎಂದು ಬಾಯಿಗೆ ಬಂದಂತೆ ಬೈಯತೊಡಗಿದ. ಬಿದ್ದ ಎರಡೇಟಿಗೆ ಪ್ರಾಣ ಹೋಯ್ತೆಂಬ ಪುಟ್ಟವ್ವಳ ಕರ್ಕಶ ಕಿರುಚಾಟ ಕೇಳಿದ ಎಲ್ಲರು ಧಾವಿಸಿದರು,ಅಮಲಿನಲ್ಲಿ ತನ್ನ ಸೀರೆಯ ಮೇಲೂ ಪ್ರಜ್ಞೆಇಲ್ಲದೆ ಬಿದ್ದು ಹೊರಳಾಡುತಿದ್ದ ಪುಟ್ಟವ್ವಳಿಗೆ ದಂಡಿಸುತ್ತಿದ್ದ ಚಂದ್ರನನ್ನು ತಡೆದರು, ಹೊರಹೊರಟಾಗ ಎದುರಿಗೆ ಕಂಡ ಸಿದ್ದಪ್ಪನಿಗೂ ಎರಡು ಬಿಗಿದು ತನ್ನ ಆಕ್ರೋಶ ತೋರಿಸಿದ.
ಸನ್ನಿವೇಶದ ಬಿಸಿ ತಿಳಿಯಾಗತೊಡಗಿತು,ಕೆಲಸಕ್ಕೆ ಹೋಗಿದ್ದ ಉಳಿದ ಮಕ್ಕಳು ಮನೆಗೆ ಬಂದರು, ಅಮಲಿನಿಂದ ಹೊರಬಂದ ಪುಟ್ಟವ್ವ ತನ್ನ ತಪ್ಪನ್ನು ರಂಗೋಲಿ ಹಿಟ್ಟಲ್ಲಿ ಕಂಡಳು ಆದರೆ ಸುಕಾಸುಮ್ಮನೆ ಚಂದ್ರನಿಂದ ಎರ್ಡೇಟು ಪಡೆಯಲು ತನ್ನಿಂದಾದ ತಪ್ಪೇನೆಂದು ತಿಳಿಯದೇ ಸಿದ್ದಪ್ಪ ದಿಗ್ಭ್ರಾಂತನಾಗಿದ್ದ. ತಾಳ್ಮೆಯಿಂದ ಮಾತು ಆರಂಭಿಸಿದ ಚಂದ್ರ "ಅವ್ಳ್ ಕುಡಿತಾಳೆ ಅಂತ ಗೊತ್ತಿತ್ತು, ಏನೊ ಅಪ್ರೂಪಕ್ಕೆ ಅಂಕೊಡಿದ್ದೆ,ಆದ್ರೆ ದಿನಾ ಕುಡಿತಾಳೆ ಅಂದ್ರೆ ದುಡ್ ಎಲ್ಲಿಂದ ಬರ್‍ತೈತೆ ಅನ್ನೋದೊಂದ್ ತಿಳಿತಿಲ್ಲ "ಎಂದೊಡನೆ ಸಿದ್ದಪ್ಪ "ಏನ್ ಅವ್ಳಿಗ್ ನಾನೆ ಕುಡ್‍ಸ್ತಿನಿ ಅಂಕಂಡ್ ನಂಗ್ ಹೊಡ್ಯೊಕ್ ಬಂದಿದ್ಯ"ಎಂದು ತನ್ನಲ್ಲೆದ್ದಿದ ಪ್ರಶ್ನೆಗೆ ಉತ್ತರಕೇಳಿದ.
"ಹ್ಞು ಮತೆ, ನೀನಲ್ದೆ ಇನ್ಯಾರು ಕೊಡ್ತಾರೆ, ಅವ್ಳೇನ್ ದುಡ್ಡಿನ್ ಮರಿ ಹಾಕ್ತಾಳ",
"ನಂಗೆ ಕುಡ್ಯಕ್ ದುಡ್ ಇರಲ್ಲ ಇನ್ನ ದಿನಾ ಕುಡ್ಯೋಳ್ಗ್ ಎಲ್ಲಿಂದ ತಂದ್‍ಕೊಡ್ಲಲೆ"ಎಂದು ಪಿತ್ತನೆತ್ತಿಗೇರಿದ ಸಿದ್ದಪ್ಪ ಎದ್ದುನಿಂತ.
ಇನ್ನೇನು ತನ್ನ ಬಂಡವಾಳವೆಲ್ಲ ಬಯಲಾಯ್ತು ಎಂದರಿತ ಪುಟ್ಟವ್ವ ಮಳೆಗೆ ನೆನೆದ ಬೆಕ್ಕಿನ ಹಾಗೆ ಮೈಮುದುಡಿ ಮಲಗಿದಳು. ಅಡುಗೆ ಸಾಮನುಗಳ ನಿರ್ವಹಣೆ ಮಹೇಶನದು, ಸ್ವಲ್ಪ ಯೋಚಿಸಿದ ಮಹೇಶ ಏನೊ ಹೊಳೆದವನಂತೆ ಎದ್ದು ನಿಂತು ಮೇಲು ದನಿಯಲಿ "ಅಯ್ಯೋ ನಂಗ್ ಈಗ್ ಹೊಳಿತು, ಏಟ್ ತಂದ್ರು ಅಕ್ಕಿ,ಕಾಳ್‍ಗಳು ಕಮ್ಮಿ ಆಗ್ತಿದ್ವು, ಅವ್ನೆಲ್ಲ ಮಾರ್‍ತಿದ್ಲೊ ಎನೊ ಕೇಳಣ್ಣ" ಎಂದು ಎಲ್ಲರಲ್ಲೂ ಸಂಚಲನ ಮೂಡಿಸಿದ.
"ಇದನ್ ಮೊದ್ಲೇ ಹೇಳಕ್ ಬಾಯಾಗ್ ಏನ್ ಹಿಡ್ಕಂದಿದ್ಯಲೇ" ಸಿದ್ದಪ್ಪನ ಕೋಪ ಈಗ ಶಿಖರದ ತುದಿಯಲ್ಲಿತ್ತು ಅದಕ್ಕೆ ಕಾರಣ ಪುಟ್ಟವ್ವಳ ಸಲುವಾಗಿ ಬಿದ್ದ ಹೊಡೆತ. "ಇವ್‍ಳಿಂದ ನಂಗೂ ಮರ್ಯಾದೆ ಇಲ್ಲ ,ಬೋಸೂಡಿ ದಿನಾ ಕುಡ್ಯೋಕ್ ನಿಂಗ್ ಏನ್ ಬಂದತೆ ಬ್ಯಾನೆ",ಎಂದವನೇ ಕೈ ಮುಷ್ಠಿ ಮಾಡಿ ಬೆನ್ನಿಗೆ ಗುದ್ದಿದ.ಸುಮ್ಮನಿದ್ದರೆ ನನ್ನ ಗತಿ ಬದಲಾಗಬಹುದೆಂದು ಯೋಚಿಸಿ ಮತ್ತೊಮ್ಮೆ ಗುದ್ದಲು ಬಂದ ಸಿದ್ದಪ್ಪನಿಗೆ " ಏ ನೀನೆ ಅಲ್ವೆನೊ ನಂಗ್ ಚಟ ಹತ್ಸಿದ್ದು,ದುಡ್ಯೋಕ್ ತಾಕತ್ತಿಲ್ದೆ ನಾನ್ ಕಾಯ್ಲೆ ಬಿದ್ದಾಗ ದುಡ್ ಉಳ್ಸೋಕ್ ನಂಗ್ ಸಾರಾಯ್ ಕುಡ್ಸಿ ಇವಾಗ್ ನಂಗೆ ಹೊಡಿತಿಯ, ನಂಗು ಧಮ್ಮು-ಗಿಮ್ಮು ಎಲ್ಲಾ ಐತೆ, ಮನೆಗೆಲ್ಸ ಬಾಳಾಕೈತೆ ಅದ್ಕೆ ಕುಡಿತೀನಿ ಇಲ್ಲ ನಂಗ್ ಏನು ಮಾಡೋಕ್ ಆಗಕ್ಕಿಲ್ಲ, ಹಂಗಂತ ಮಾಡ್ದೆ ಕೂತ್ರೆ ನಿಂಗೆ ನಿನ್ ಮಕ್ಳಿಗೆ ಯಾವಳ್ ಉಣ್ಣಕ್ಕಿಡ್ತಾಳೆ" ಎಂದು ಒಂದೆ ಉಸಿರಲ್ಲಿ ಬಣಬಣ ಗೊಣಗಿದಳು. ಇವಳ ಮಾತಿಗೆ ಮರುಉತ್ತರಿಸದೆ ಸಿದ್ದಪ್ಪ ತಾನು ಎಂದೊ ಹೇಳಿದ್ದ ಮಾತು ನೆನಪಾಯ್ತು, ನಮ್ಮ ವಂಶದಲ್ಲಿ ಕುಡಿತ ಅಸ್ತಮಾಕ್ಕೆ ಎಂದು ತಾನೆ ಹೇಳಿದ್ದು ಈಗ ಪುಟ್ಟವ್ವಳಿಗೆ ಕುಡಿತದ ಕಾರಣವಾಗಿ ಇವನಿಗೆ ಮುಳುವಾಯ್ತು. ಆದರು ಧೃತಿಗೆಡದೆ " ಆಯ್ತು,ಇನ್ಮ್ಯಾಗ್ ನೀನ್ ಏನು ಕೆಲ್ಸ ಮಾಡ್‍ಬ್ಯಾಡ, ಚಂದ್ರಂಗ್ ಮದ್ವೆ ಮಾಡ್ತಿನಿ,ನಿನ್ ಧಮ್ಮಿಗ್ ಔಷಧಿ ಕೊಡ್ಸ್ತಿನಿ,ನೀನ್ ಮಾತ್ರ ಕುಡ್ಯಂಗಿಲ್ಲ"ಎಂದು ತನ್ನ ನಿರ್ಧಾರ ಹೇಳಿದ,ಎಲ್ಲರು ಸಮ್ಮತಿಸಿದರು .ತಕ್ಷಣವೇ ಪುಟ್ಟವ್ವಳ ಕಾವಲಿನ ಪಡೆಗೆ ಸ್ವತಃ ಸಿದ್ದಪ್ಪನೇ ಮುಖ್ಯಸ್ಥನಾದ.ಚಂದ್ರನ ಮದುವೆಯ ತನಕ ಅಡುಗೆಯ ಜವಬ್ದಾರಿಯನ್ನು ಮಕ್ಕಳೇ ವಹಿಸಿಕೊಂಡರು.

ಪುಟ್ಟವ್ವಳಿಗೆ ತನಗಿದ್ದ ತೀವ್ರ ಭದ್ರತೆಯಿಂದ ಸಾಕಷ್ಟು ಹಿಂಸೆಯಾದರೆ,ಸಿದ್ದಪ್ಪನಿಗೆ ಅದುವೇ ಕಾರ್ಯ,ಯಾವುದೇ ಶಬ್ಧ ಅಕಾಲದಲ್ಲಾದರೆ ಪುಟ್ಟವ್ವಳ ಹುಡುಕಾಟ ಆರಂಭ. ಈಗ ಪುಟ್ಟವ್ವಳಿಗೆ ತೀರ್ಥ ಸಿಗುತಿದ್ದದು ಕೇವಲ ಹಬ್ಬ ಹರಿದಿನಗಳಲ್ಲಿ ,ಚುನಾವಣಾ ಸಮಯದಲ್ಲಿ. ದಿನನಿತ್ಯ ಸಾರಾಯಿ ಸೇವಿಸುತಿದ್ದವಳು ಏಕಾಏಕಿ ಬಿಟ್ಟಿದ್ದರಿಂದ ಪುಟ್ಟವ್ವಳಿಗೆ ಮೈಕೈ ನಡುಕ ಶುರುವಾಯಿತು,ಯಾವಾಗಲು ಮಂಕು ಹಿಡಿದವರಂತೆ ಕೂರುತ್ತಿದ್ದಳು. ಆದ್ದರಿಂದ ಚಂದ್ರನೇ ತಿಂಗಳಿಗೊಮ್ಮೆಯಾದರು ಆಕೆಗೆ ಸಾರಾಯಿ ತಂದು ಕೊಡುತಿದ್ದ. ಹೀಗೆ ಕೆಲದಿನಗಳು ಕಳೆದವು,ಚಂದ್ರ ಪಕ್ಕದೂರಿನ ದೂರದ ಸಂಬಂಧಿಕರ ಮನೆಯ ಹುಡುಗಿಯನ್ನೇ ಮದುವೆಯಾದ.ಪುಟ್ಟವ್ವಳ ಆರ್ಭಟ ಚಂದ್ರ ಮತ್ತು ಸಿದ್ದಪ್ಪನ ಹಿಡಿತದಲ್ಲಿತ್ತು. ಎಲ್ಲವೂ ಸರಿಯಾಯ್ತೆಂದು ತಿಳಿಯುತಿದ್ದ ಚಂದ್ರನಿಗೆ ಮತ್ತೊಂದು ಸಂಕಟ ಎದುರಾಗುವುದಿತ್ತು. ದೂರದೂರಿಗೆ ವರ್ಗಾವಣೆಗೊಂಡಿದ್ದ ಮಹೇಶ ಈಗ ಸಂಪೂರ್ಣ ಬದಲಾಗಿದ್ದ, ಕುಡಿತದ ಜೊತೆಗೆ ಹೆಣ್ಣು ಮತ್ತು ಇಸ್ಪೀಟಿನ ಚಟವಿತ್ತು. ತನ್ನ ತಾಯಿಯ ಕಷ್ಟ ಅವನಿಗೆ ತಿಳಿದಿದ್ದು ಆತನೂ ಕುಡಿತದ ದಾಸನಾದಾಗ,ಆದ್ದರಿಂದಲೇ ಎಲ್ಲರ ಕಣ್ತಪ್ಪಿಸಿ ಊರಿಗೆ ಬಂದಾಗ ಪುಟ್ಟವ್ವಳಿಗೂ ಸಾಕಷ್ಟು ಸರಕನ್ನು ಕೊಡುತಿದ್ದ.ನಾಗೇಶ ಮತ್ತು ಕಲ್ಲೇಶರು ಸಹ ವಂಶದಲ್ಲಿ ಬಳುವಳಿಯಾಗಿ ಬಂದಿದ್ದ ಕುಡಿತಕ್ಕೆ ಶರಣಾಗಿದ್ದರು. ತಮ್ಮಂದಿರಲ್ಲಾದ ಬದಲಾವಣೆಗಳ ಗಮನಿಸಿದ ಚಂದ್ರ ಒಬ್ಬೊಬ್ಬರಾಗಿ ತಮ್ಮಂದಿರ ಮದುವೆ ಮಾಡಿದ,ಇದರಿಂದ ಸಮಸ್ಯೆ ಇನ್ನೂ ಉಲ್ಭಣವಾಯಿತು. ಮನೆತುಂಬಿಸಿಕೊಂಡ ಸೊಸೆಯಂದಿರ ತೀಟೆ-ಟಿಪ್ಪಣಿಗಳು ಹೆಚ್ಚಾದವು,ಕುಡಿದು ಬರುತ್ತಿದ್ದ ತಮ್ಮ ಗಂಡದಿರ ಕಿವಿ ಚುಚ್ಚಿ ಆಗುತಿದ್ದ ಜಗಳಗಳಿಗೆ ಆಸ್ತಿಯ ಭಾಗವೇ ಪರಿಹಾರವಾಗಿತ್ತು.ಪುಟ್ಟವ್ವ ಮಹೇಶನ ಬಳಿ ಬಂದು"ಮಹೇಸ, ನಾನ್ ನಿನ್ ತಾವೇ ಇರ್ತಿನಪ, ಚಂದ್ರನ್ ಮನೆಗ್ ಇದ್ರೆ ನಂಗ್ ಹುಚ್ಚೇ ಹಿಡಿತತೆ" ಎಂದು ಗೋಳಿಟ್ಟರು ಅವನ ಹೆಂಡತಿ ಒಪ್ಪಲ್ಲಿಲ್ಲ.ನಂತರ ಚಂದ್ರನ ಮನೆಯಲ್ಲೇ ತಮ್ಮ ವಾಸ ಖಾತರಿಯಾದಮೇಲೆ ಒಂದೇ ಊರಿನಲ್ಲಿದ್ದ ಮಕ್ಕಳ ಮನೆಗೆ ಒಡಾಡಿಕೊಂಡು ಪುಟ್ಟವ್ವ ಕಾಲ ಕಳೆಯುತ್ತಿದ್ದಳು.ಇದರಿಂದ ಅವಳ ತೈಲ ಸೇವನೆ ಆಗಾಗ್ಗೆ ಸಲೀಸಾಗಿ ಸಾಗುತಿತ್ತು.

ಈಗ ಎಲ್ಲವು ಮೊದಲಿನಂತಿಲ್ಲ,ಚಂದ್ರ ಚಂದ್ರಪ್ಪನಾದ,ಪುಟ್ಟವ್ವ ಪುಟ್ಟಜ್ಜಿಯಾದಳು, ಸಾರಾಯಿ ಸಂಪೂರ್ಣ ರದ್ದಾಗಿ ಹೆಂಡದ ಕನಿಷ್ಟ ಬೆಲೆಯೇ ಮೂವತ್ತಾಯಿತು,ಮಹೇಶ ತನ್ನ ದುಶ್ಚಟಕ್ಕೆ ಸಾಲದ ಸುಳಿಯಲ್ಲಿದ್ದ,ಸಾಲದ್ದಕ್ಕೆ ಆರೋಗ್ಯ ಸಮಸ್ಯೆ ಬೇರೆ. ನಾಗೇಶ ,ಕಲ್ಲೇಶ ಇಬ್ಬರೂ ಆಸ್ತಿಯನ್ನೆಲ್ಲ ಮಾರಿ ಪಟ್ಟಣ ಸೇರಿದರು. ಸಿದ್ದಪ್ಪ ತನ್ನಷ್ಟಕ್ಕೆ ತಾನು ಊರು ಸುತ್ತುತ್ತ ಚಂದ್ರನಿಗೆ ಕೆಲಸದಲ್ಲಿ ಸಹಾಯವಾಗಿ ಸಂಜೆಗೆ ಬೇಕಿದ್ದ ಸೇಂದಿಗೆ ಕಾಸು ಮಾಡಿಕೊಳ್ಳುತ್ತಿದ್ದ.ತನ್ನ ಮೇಲಿನ ಗಮನ ಕಡಿಮೆಯಾದದ್ದೇ ಪುಟ್ಟವ್ವಳ ಕೈ ವರಸೆ ಮತ್ತೆ ಶುರುವಾಯಿತು . ಎಷ್ಟೇ ಚಿಲ್ಲರೆ ಜೋಡಿಸಿದರು ಒಂದು ಬಾಟಲಿಗೆ ಹೊಂದಿಸುವಷ್ಟರಲ್ಲಿ ತಾಳ್ಮೆ ಕಳೆದುಕೊಳ್ಳುತ್ತಿದ್ದಳು.ಒಮ್ಮೆಯಂತು ಹಣಕ್ಕಾಗಿ ನೇರ ಚಂದ್ರನ ಶರ್ಟಿನ ಖಜಾನೆಗೇ ಕೈಹಾಕಲು ಹೋಗಿ ಸೊಸೆಯ ಕಣ್ಣೆದುರೇ ಸಿಲುಕಿ ಮತ್ತೆ ತನ್ನ ಬಿಗಿ ಭದ್ರತೆಯನ್ನು ಬಂದೋಬಸ್ತ್ ಮಾಡಿಕೊಂಡಳು. ಈಗ ಎಲ್ಲ ಮಾರಲ್ಪಡುವ ವಸ್ತುಗಳೂ ಪೆಟ್ಟಿಗೆಯಲ್ಲಿ ಭದ್ರ,ಪೆಟ್ಟಿಗೆಯ ಚಿಲಕ ಸ್ವಲ್ಪ ಕುಲುಕಿದರೂ ಸಿದ್ದಪ್ಪನ ಗಮನಕ್ಕೆ ಬರುತ್ತಿತ್ತು,ಅವನಿಲ್ಲದಿದ್ದರೆ ಸೊಸೆ ಹಾಗೂ ಮೊಮ್ಮಕ್ಕಳ ಹದ್ದುಬಸ್ತಿನಲ್ಲಿ ಪುಟ್ಟವ್ವ ಇರಬೇಕಿತ್ತು.
ನಿಜವಾಗಿಯೂ ಇಷ್ಟೊಂದು ಅಸಹ್ಯವಾ ಕುಡಿತ..?,
ಅಜ್ಜಿಯ ಬಳಿ ಕಥೆ ಕೇಳುವ ಬದಲು ಆಕೆಯನ್ನು ಮೊಮ್ಮಕ್ಕಳೇ ಖೈದಿಯಂತೆ ಕಾಣುವ ಹಾಗೆ ಮಾಡಲು ಕೇವಲ ಕುಡಿತದ ಚಟವೇ ಕಾರಣವಾ? ,
ಮಕ್ಕಳೂ ಇದರ ದಾಸರಾಗಲು ನನ್ನ ಮತ್ತು ಪುಟ್ಟವ್ವಳ ದುಶ್ಚಟವೇ ಪ್ರೇರಣೆಯಾಯಿತಾ...?,
ಪುಟ್ಟವ್ವಳನ್ನು ಈ ಸ್ಥಿತಿಗೆ ತಳ್ಳಿದ್ದು ತಾನೊ ಇಲ್ಲಾ ಸಾರಾಯಿಯ ಮಹಿಮೋಪದೇಶ ಮಾಡಿದ ಆ ಹೆಂಗಸೊ....?

ಇದನ್ನೆಲ್ಲಾ ನೆನಪಿಸಿಕೊಂಡು ಚಿಂತಿಸುತ್ತಿದ್ದ ಸಿದ್ದಪ್ಪ ಅಂಗಳದಲ್ಲಿ ಕೂತಿದ್ದಾಗ ಪೋಸ್ಟ್ ಹುಡುಗನ ಸೈಕಲ್ ಬಂದುನಿಂತಿತು,
"ಸಿದ್ದಜ್ಜ ಸಂಬಳ ಬಂದೈತೆ,ಪುಟ್ಟಜ್ಜಿನು ಕರಿ ಹೆಬ್ಬಟ್ಟ್ ಒತ್‍ಬಕು" ,ಪೋಸ್ಟ್ ಹುಡುಗ ಕೂಗಿದ. ಸರ್ಕಾರದಿಂದ ಮೊದಲಬಾರಿಗೆ ಮಾಸಿಕ ಪಿಂಚಣಿ ಸಿದ್ದಪ್ಪನ ಮನೆಬಾಗಿಲಿಗೆ ಬಂದು ನಿಂತಿತ್ತು. ಮಂದಹಾಸ ಬೀರುತ್ತ ಸಿದ್ದಪ್ಪ ತನ್ನ ಹಣಪಡೆದ.
"ಪುಟ್ಟಜ್ಜಿನು ಕರಿ,ಅವ್ಳುದು ಐತೆ" ಮತ್ತೆ ಹೇಳಿದ ಹುಡುಗನಿಗೆ ಸಿದ್ದಪ್ಪ,
"ಹೇ ಅವ್ಳ್ದು ನಾನೆ ಒತ್ತುತಿನಿ ಇಲ್ಲೇ ಕೊಡಪ",
"ಹಂಗೆಲ್ಲಾ ಆಗಲ್ಲಜಾ, ಅಜ್ಜಿನೇ ಬರ್ಬೇಕು ಬೇರೆರ್ ಕೈ ಕೊಟ್ರೆ ನನ್ ಕೆಲ್ಸ ಹೋಗ್ತತೆ ಅಷ್ಟೆ" ಎಂದು ಕೂಗಿದ. ಇದನ್ನೆಲ್ಲ ಆಲಿಸಿದ ಪುಟ್ಟವ್ವ ಹೊರಬಂದಳು. ಈಗ ಆಜ್ಞಾಪಿಸುವುದು ಪುಟ್ಟವ್ವಳ ಸರದಿ,ಎಷ್ಟೋ ದಿನಗಳ ನಂತರ ತನ್ನ ಧ್ವನಿಯೇರಿಸಿ " ನನ್ ಸಂಬಳ ನನ್ ಕೈಗ್ ಕೊಡೊದಾದ್ರೆ ಅಷ್ಟೆ ಹೆಬ್ಬೆಟ್ ಒತ್ತುತಿನಿ"ಎಂದು ಒಂದೇ ಮಾತಲ್ಲಿ ತನ್ನ ಬೇಡಿಕೆಯನ್ನಿಟ್ಟಳು .ಸಿದ್ದಪ್ಪನಿಗೆ ಒಳ್ಳೆ ಪೀಕಲಾಟ ಶುರುವಾಯಿತು.ಅವಳ ಮಾತಿಗೆ ಒಪ್ಪಿ ಕೊಟ್ಟರೆ ಪುಟ್ಟವ್ವ ಕುಡಿದು ಕುಪ್ಪಳಿಸುತ್ತಾಳೆ,ಇಲ್ಲ ಹಣ ಸಿಗದೇ ಇಬ್ಬರಿಗೂ ಇಲ್ಲದಾಗುತ್ತೆ .ಏನು ಮಾಡಲು ತಿಳಿಯದೇ ಸಿದ್ದಪ್ಪ ದ್ವಂದ್ವತೆಯಲಿ ಸಿಲುಕಿದ.ಆದರೂ ನಿರ್ಧಾರಕ್ಕೆ ಬಂದು ಪುಟ್ಟವ್ವಳಿಗೆ,"ನಾನೆನ್ ನಿನ್ ದುಡ್‍ನಾಗ್ ಮಜಾ ಮಾಡಲ್ಲ,ನಿಂಗು ಎಷ್ಟ್ ಬೇಕೊ ಅಷ್ಟ್ ಕೊಡ್ತಿನಿ"ಎಂದು ತನ್ನ ಬಳಿ ಇದ್ದ ಐನೂರಲ್ಲಿ ಎರಡು ನೋಟು ತೆಗೆದು ಕೊಟ್ಟನು. "ಪಾಲಿಗ್ ಬಂದಿದ್ದೇ ಪಂಚಾಮೃತ" ಎಂದು ಪುಟ್ಟವ್ವಳ ಕಣ್ಣುಗಳು ಇನ್ನೂರಕ್ಕೆ ಅರಳಿ ಸಹಿಗೆ ಒಪ್ಪಿದಳು. ಇದರಿಂದ ಸಿದ್ದಪ್ಪನಲ್ಲಿ ಉಂಟಾದ ಸಂತೋಷ ಅವತ್ತಿಗೇ ಕೊನೆಯದಾಯಿತು. ತನ್ನ ಜೀವಿತಾವಧಿಯ ಕೊನೆಕ್ಷಣಗಳಲ್ಲಿ ಕುಡಿತದ ಪರಿಣಮವನ್ನು ಯೋಚಿಸಿದ್ದ ಸಿದ್ದಪ್ಪನಿಗೆ ಈಗ ಕುಡಿತ ನಿಜವಾಗಿಯು ತನ್ನ ಕೊನೆಯ ಸಂದೇಶವನ್ನ ಮುಟ್ಟಿಸಿತ್ತು.

ಸಿದ್ದಪ್ಪ ಅದೇದಿನ ರಾತ್ರಿ ಹೊಟ್ಟೆಭರ್ತಿ ಕುಡಿದು ಮಲಗಿದವ ಮತ್ತೇ ಏಳಲೇ ಇಲ್ಲ. ಸಾವಿನ ಸುದ್ದಿ ಹರಡಿತು,ಮಕ್ಕಳು-ಬಂಧುಗಳ ಆಗಮನದ ನಂತರ ಸಿದ್ದಪ್ಪನ ಅಂತ್ಯಕ್ರಿಯೆ ನಡೆಯಿತು.ಮನೆಗೆ ಹಿಂದುರುಗಿದ ಪುಟ್ಟವ್ವ ಭಾವುಕಳಾಗಿದ್ದಳು, ತಮ್ಮ ನಡುವೆ ಎಂದಿಗೂ ಮನಸ್ತಾಪ ಮೂಡಿರಲಿಲ್ಲ,ಆತನ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಒಮ್ಮೆ ಬಿಟ್ಟರೆ ಬೇರಾವ ಕಾರಣಕ್ಕು ನನ್ನ ಮೇಲೆ ಕೈ ಮಾಡಿಲ್ಲ, ಈಗ ತನ್ನ ಧೈರ್ಯ, ಮಂಡತನ ಸಿದ್ದಪ್ಪನ ಸಾವಿನ ಜೊತೆಯಲೇ ಹುಡುಗಿದಂತಾಗಿದೆ,ನನ್ನ ಆಸೆ,ಬೇಡಿಕೆಗಳಿಗೆ ಒಮ್ಮೆಯೂ ಇಲ್ಲವೆನ್ನದ ಸಿದ್ದಪ್ಪ ಇನ್ನಿಲ್ಲ, ನನ್ನ ಅಸ್ಥಿತ್ವದ ಮೂಲ ಸಿದ್ದಪ್ಪನೇ ಇಲ್ಲವಾದಾಗ ಇನ್ನು ಹೇಗೆ ನನ್ನುಳಿದ ಕಾಲಾವಧಿಗೆ ಸ್ಪಂದಿಸಲಿ? ಈ ಕುಡಿತದ ಚಟಕ್ಕೆ ಬಿದ್ದಾದ ಮೇಲೆ ಅವರ ಜೊತೆ ಕೂಡಿ ಮಾತಾಡಿದ ನೆನಪೇ ಇಲ್ಲ, ಅಷ್ಟಕ್ಕು ಅವರೇ ಅಲ್ಲವೇ ನನಗೆ ಮೊದಲು ನಶೆಯ ಪರಿಚಯಿಸಿದ್ದು? ಅವರೇ ಅಲ್ಲವೇ ನಾ ಅದರ ಲೋಕದೆಡೆ ದಾಪುಗಾಲು ಇಡುವಾಗ ತಡೆಯದೆ ಇದ್ದದ್ದು? ಹೌದು ಅವರೇ...! ಅವರೇ ನನ್ನ ಈ ಸ್ಥಿತಿಗೆ ಕಾರಣ. ಅವರಿಗೆ ಎಲ್ಲಾ ತಿಳಿದಿದ್ದು,ಅಧಿಕಾರವಿದ್ದು ನನ್ನನ್ನೇಕೆ ತಡೆಯಲಿಲ್ಲ. ಅವರಾಗೆ ಮಾಡಿದ್ದು ನನ್ನ ಮೇಲಿನ ಪ್ರೀತಿಯಿಂದಲೊ? ಇಲ್ಲ ಬೇಜವಬ್ದಾರಿಯಿಂದಲೊ? ಇದನ್ನೆಲ್ಲಾ ಯೋಚಿಸಿದ ಪುಟ್ಟವ್ವ ಎದ್ದು ನಿಂತಳು.ಸಿದ್ದಪ್ಪನ ಕಳೆದುಕೊಂಡ ದುಃಖ ಹಾಗು ಅವನ ಮೇಲಿದ್ದ ಅಸಹನೆಯ ಕೋಪವೆರಡು ಸೇರಿ ಪುಟ್ಟವ್ವಳ ಕಣ್ಣಲ್ಲಿ ನೀರು ತುಂಬಿತ್ತು.ಪುಟ್ಟವ್ವಳಿಗೆ ಅದ್ಯಾವುದೊ ಶಕ್ತಿ ತನ್ನ ಕೈಯ ರಕ್ತನಾಳವನ್ನೆಲ್ಲ ಹಿಡಿದು ಜಗ್ಗಿದಂತಾಯಿತು,ಕಣ್ಣುಗಳಿಗೆ ಕತ್ತಲು ಕವಿದು ಗಂಟಲು ಒಣಗಿತು,ಅದ್ಯಾವುದೊ ತುಡಿತ ಹೆಚ್ಚಾಗಿ ಕಾಲುಗಳು ತನ್ನ ಮಾತಿಗೆ ಸ್ಪಂದಿಸದೇ ಹೆಜ್ಜೆಯಾಕತೊಡಗಿದವು.ಪುಟ್ಟವ್ವ ಮದ್ಯದಂಗಡಿಗೆ ಧಾವಿಸಿದಳು.ತನಗೆ ಬೇಕಾದನ್ನು ಪಡೆದು ಬೀಗಿದ ಪುಟ್ಟವ್ವ ತನ್ನ ಅರಿವಿಗೇ ಬಾರದಂತೆ ಯಾವುದೊ ಶಕ್ತಿ ನನ್ನ ನಿಯಂತ್ರಿಸುತಿದೆ ಎಂದು ತಿಳಿದಳು. ಹೌದು, ತಾನು ಯಾವುದೊ ಶಕ್ತಿಯೊಂದರ ನಿಯಂತ್ರದಲ್ಲಿದ್ದೇನೆ, ಸಿದ್ದಪ್ಪ ನೀಡಿದ್ದ ಇನ್ನೂರರ ನೆನಪೆ ಇಲ್ಲದೇ ನನಗೆ ಕುಡಿತದ ತುಡಿತ ಹೆಚ್ಚಿಸಿದ್ದು ಅದರ ಪ್ರಭಾವ,ಇನ್ನು ಆ ದೈತ್ಯ ಶಕ್ತಿ ತನ್ನನ್ನು ಸಂಪೂರ್ಣ ಆವರಿಸಲಿದೆ, ತನಗೆ ಬೇಕಾದನ್ನು ಆ ಶಕ್ತಿ ನನ್ನಿಂದ ಪಡೆಯಲಿದೆ, ಇನ್ನು ನಾನು ಕೇವಲ ಅದರ ಕಾರ್ಯಗಳಿಗೆ ನಿಮಿತ್ತ ಮಾತ್ರವೆಂದು ಪುಟ್ಟವ್ವ ನಿಶ್ಚಯಿಸಿದಳು.

ಮಾರನೆಯ ದಿನದ ಪೂಜೆಗೆ ಚಂದ್ರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಇನ್ನೇನು ಸಮಾಧಿಯ ಬಳಿ ಹೊರಡಬೇಕು ಪುಟ್ಟವ್ವ ಕಾಣೆಯಾಗಿದ್ದಳು, ಮನೆಯ ಸುತ್ತಲೂ ಹುಡುಕಿದ. ಚಂದ್ರ ಮಹೇಶನಿಗೆ ಮದ್ಯದಂಗಡಿಗೆ ಹೋಗಿ ನೋಡಲು ಹೇಳಿದ,ಅಲ್ಲೂ ಇಲ್ಲವೆಂದು ಹಿಂದುರುಗಿದ ಮಹೇಶ "ನೆನ್ನೆ ಕಂಠ್‍ಪೂರ್ತಿ ಕುಡ್ದು ಇನ್ನೂರ್ ಕೊಟ್ಟು ಚಿಲ್ರೆ ಉಳ್ದಿದ್ದು ಎಣ್ಣೆ ತಗಂಡ್ ಹೋದ್ಲಂತೆ,ಎಲ್ಗ್ ಹೋದ್ಲೊ ಗೊತ್ತಿಲ್ಲ" ಎಂದು ಅಂಗಡಿಯವ ನೀಡಿದ ಮಾಹಿತಿಯನ್ನ ವಿವರಿಸಿ,
"ಇವಾಗ್ ಏನ್ ಮಾಡದ್ ಅಣ್ಣಾ.. ಅವ್ಳಿಲ್ದೇ ಹಾಲ್ ಉಕ್ಸೋಕ್ ಹೆಂಗ್ ಆಗ್ತದೆ"
"ಥತ್ ,ಅವ್ಳ್ ಸಾಯಕಂಟ ನಮ್ ಜೀವ ತಿನ್ನದ್ ನಿಲ್ಸಲ್ಲ ,ಎಲ್ಲಾದ್ರು ಹೋಗ್ ಸಾಯ್ಲಿ ನಡೀರಿ ನಾವೇ ಪೂಜೆ ಮಾಡ್ಕಂಡ್ ಬರನ" ಚಂದ್ರ ತನ್ನ ನಿರ್ಧಾರ ತಿಳಿಸಿದ. ಚಂದ್ರನ ನಿರ್ಧಾರ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದರೂ ಪುಟ್ಟವ್ವಳನ್ನು ಹುಡುಕಿ ಕರೆತರುವ ತಾಳ್ಮೆ ಯಾರಲ್ಲೂ ಉಳಿದಿರಲಿಲ್ಲ.ಸರಿಯೆಂದು ಸಮಾಧಿಯ ಬಳಿ ಬಂದ ಎಲ್ಲರೂ ಗಾಬರಿಯಾದರು.
" ಹೇ ಅಲ್ ನೋಡೊ ಚಂದ್ರ ನಿಮ್ ಅವ್ವನೂ ಅವ್ಳ್ ಗಂಡನ್ ಹತ್ರನೇ ಬಂದ್ ಪ್ರಾಣ ಬಿಟ್ಟಳೆ" ಯಾರೊ ಒಬ್ಬ ಕಿರುಚುತ್ತ ಸಮಾಧಿಯ ಬಳಿ ಓಡಿಹೋದ.ಎಂಥಾ ಅನಾಹುತ ಜರುಗಿತೆಂದು ಚಂದ್ರನ ದುಃಖ ಕಟ್ಟೆಯೊಡೆದು "ಅಯ್ಯೋ ದ್ಯಾವ್ರೆ ನಾನ್ ಅನ್ಬಾರ್ದೆಲ್ಲ ಅಂದೆ ಈಗ ನಂಗ್ ಕಷ್ಟ ಕೊಡ್‍ಬಾರ್ದು ಅಂತ ನಮ್ಮವ್ವನು ಬಿಟ್ ಹೊಂಟೋದ್ಲಲ್ಲಪ" ಎಂದು ಕೊರಗುತ್ತ ಓಡಿದ. ಅವನ ಹಿಂದೆಯೆ ಉಳಿದವರೆಲ್ಲ ಧಾವಿಸಿ ಏದುಸಿರು ಬಿಡುತ್ತ ನೋಡಿದರೆ ನಿರಾಸೆ ಕಾದಿತ್ತು.
ಪುಟ್ಟವ್ವ ಪ್ರಜ್ಞೆ ಇಲ್ಲದೇ ಕುಡಿದು ಬಿದ್ದಿದ್ದಳೆ ಹೊರತು ಚಂದ್ರ ಅಂದುಕೊಂಡಂತೆ ಬೇರಾವ ಕಾರಣಕ್ಕು ಅಲ್ಲ,. ನೆನ್ನೆ ಕುಡಿದ ಪುಟ್ಟವ್ವಳನ್ನು ಆ ಮಾಯಾವಿ ಶಕ್ತಿ ಸಿದ್ದಪ್ಪನ ಬಳಿ ಕರೆಸಿತ್ತು. ಪುಟ್ಟವ್ವಳ ಕಂಡದ್ದೇ ಚಂದ್ರನಿಗೆ ಈಕೆಯ ಈ ಸ್ಥಿತಿಗೋಸ್ಕರ ನಾನು ದುಃಖತಪ್ತನಾದೆನಲ್ಲ ಎಂದು ಕೋಪದಿಂದ ಉರಿದು ಅವಳಮೇಲೆ ಒಂದು ಕೊಡ ನೀರು ಸುರಿದ. ಅಮಲಿನಿಂದಿಳಿದಿದ್ದ ಪುಟ್ಟವ್ವಳಿಗೆ ಮುಖ ತೊಳೆಸಿ ಪೂಜೆಗೆ ಕರೆತಂದರು. ಪೂಜಾ ಸಮಯದಲ್ಲಿ ಸಮಾಧಿಯಾದವರ ಪ್ರಿಯ ಆಹಾರ ಮತ್ತು ವಸ್ತುಗಳನ್ನಿಡುವುದು ವಾಡಿಕೆ,ಅದೇ ರೀತಿ ಸಿದ್ದಪ್ಪನಿಗೆ ಪ್ರಿಯವಾದ ಪಾಯಸ, ಮೆಣಸಿನ ಭಜ್ಜಿ ಹಾಗು ಇತರೆ ಆಹಾರ ಪದಾರ್ಥಗಳು ,ಜೊತೆಗೆ ಅವನ ಕೈಗಡಿಯಾರ,ಉಂಗುರ, ಬಟ್ಟೆಯನ್ನು ಇಟ್ಟಿದ್ದರು. ಆಗ " ಅಯ್ಯೋ ಸಿದ್ದಪ್ಪಂಗ್ ಸಾರಾಯೆ ಇಟ್ಟಿಲ್ವಲ್ರಪ" ಎಂದು ಸಮಾಧಿಗೆ ಗುಂಡಿ ತೆಗೆದವ ನೆನಪಿಸಿದ,ಅದಕ್ಕೆ ಕಾರಣ ಪೂಜೆ ಮುಗಿದಾದಮೇಲೆ ಪ್ರಸಾದವೆಂದು ಮದ್ಯವೆಲ್ಲ ತನಗೆ ಬರುವುದೆಂಬ ಆತನ ಧೃಡವಾದ ನಂಬಿಕೆ. ಬೇಡವೆನ್ನಲು ಮನಸಾಗದೇ ಚಂದ್ರನು ಒಪ್ಪಿ ತರಿಸಿಯಾದಮೇಲೆ ಪೂಜೆ ಆರಂಭವಾಯಿತು. ಹೆಂಡತಿಯೇ ಮೊದಲ ಆರತಿ ಬೆಳಗಬೇಕೆಂದು ಪುಟ್ಟವ್ವಳನ್ನು ಕರೆದರು,ನಿರುತ್ಸಾಹದಿಂದ ಬಂದ ಪುಟ್ಟವ್ವಳ ಪೂಜೆಯ ನಡುವಿನಲ್ಲಿ ಆ ಕಾಣದ ಶಕ್ತಿಗೆ ಎಡೆಗೆಂದು ಇಟ್ಟಿದ್ದ ಮದ್ಯದ ಮೇಲೆ ಕಣ್ಬಿದ್ದಿತು. ಈಗ ಯಾರ ಭಯ,ಅಂಜಿಕೆಯಿಲ್ಲದೇ ಪುಟ್ಟವ್ವ ಪೂಜೆ ಮುಗಿಸಿ ಕೂತು ಆ ಹೆಂಡವನ್ನ ಪಡೆಯಬೇಕೆಂದು ಹೊಂಚುಹಾಕುತ್ತಿರಲು ಒಬ್ಬೊಬ್ಬರಾಗಿ ಪೂಜೆ ಮುಗಿಸಿದರು.ಇನ್ನೇನು ಎಲ್ಲರು ಹೊರಡಬೇಕು ತಕ್ಷಣವೇ ಪುಟ್ಟವ್ವ ತನ್ನ ದುಃಖವನ್ನೆಲ್ಲಾ ಹೊರಹಾಕುತ್ತಾ ಸಮಾಧಿಯ ಅಪ್ಪಿ ತನ್ನ ಗಂಡನ ಗುಣಗಾನ ಮಾಡುತ್ತ ತನ್ನ ಸೀರೆಯ ಸೆರಗನ್ನು ಸಂಪೂರ್ಣವಾಗಿ ಮುಖ ಕಾಣದಂತೆ ಹೊದ್ದಳು,ಇತ್ತ ಜನರೆಲ್ಲ ಪುಟ್ಟವ್ವಳ ದುಃಖಕ್ಕೆ ತಲೆಬಾಗಿ ಇಂದೇ ಆಕೆ ಸಾಧ್ಯವಾದಷ್ಟು ಅತ್ತು ತನ್ನ ನೋವನ್ನು ಹೊರಹಾಕಲೆಂದು ಸಮದಾನಿಸದೆ ಕೂತರು . ತುಸು ಸಮಯದ ನಂತರ ಎದ್ದ ಪುಟ್ಟವ್ವಳ ಕಣ್ಣಲ್ಲಿ ತೊಟ್ಟು ನೀರನ್ನು ಕಾಣದ ಚಂದ್ರ ಎಡೆಗೆಂದು ಇಟ್ಟಿದ್ದ ಮದ್ಯದೆಡೆ ನೋಡಿದರೆ ಒಂದು ಹನಿಯನ್ನು ಬಿಡದೆ ಹೀರಿದ್ದಳು ಮಹಾತಾಯಿ, ಸೇರಿದ್ದ ಜನರೆಲ್ಲ ಪುಟ್ಟವ್ವಳ ನಾಟಕ ಪ್ರದರ್ಶನ ಕಂಡು ನಿಬ್ಬೆರಗಾದರು ಹಾಗು ತಮ್ಮ ಮೂರ್ಖತನಕ್ಕೆ ತಾವೇ ನಸುನಗುತ್ತ ತೆರಳಿದರು.ಇದೆಲ್ಲದರಿಂದ ತನಗಾದ ಮುಜುಗರಕ್ಕೆ ಅಂದೇ ಚಂದ್ರ ನಿಶ್ಚಯಿಸಿದ್ದು,ಇನ್ಮುಂದೆ ಕೈಕಾಲು ನಡುಗಿ ಬಿದ್ದು ಒದ್ದಾಡಿದರು ಸಹ ಪುಟ್ಟವ್ವಳಿಗೆ ಒಂದು ಹನಿ ಹೆಂಡವನ್ನು ನೀಡಬಾರದೆಂದು.

ಪುಟ್ಟವ್ವ ಮದ್ಯವಿಲ್ಲದೆ ಕೆಲ ದಿನಗಳಲ್ಲೇ ಮುದುಡಿದ ಹೂನಂತಾದಳು,ಅಸ್ತಿಪಂಜರಕ್ಕಂಟಿದ ಚರ್ಮ,ಮುಖದಲ್ಲಿ ನಿಸ್ತೇಜವಾದ ಕಣ್ಣುಗಳು, ಹೀಗೆ ಪುಟ್ಟವ್ವ ತನ್ನ ಅರ್ಧಾಯ್ಯುಷ್ಯದಲ್ಲೇ ಹಾಸಿಗೆ ಹಿಡಿದು ಸಾವಿನ ಬಾಗಿಲಲ್ಲಿ ನಿಂತಿದ್ದಳು.ಯಾವುದೇ ಘನ ಆಹಾರವು ಗಂಟಲಲ್ಲಿ ಇಳಿಯದೇ ಕೇವಲ ಗಂಜಿಯಲ್ಲೇ ಕಾಲ ತಳ್ಳಬೇಕಿತ್ತು. ತಾಯಿಯ ಈ ಸ್ಥಿತಿ ಮಹೇಶನಿಂದ ನೋಡಲಾಗಲಿಲ್ಲ, ಆಕೆಯ ಕೊನೆದಿನಗಳನ್ನಾದರು ಅವಳಿಷ್ಟದ ಪ್ರಕಾರ ಕಳೆಯಲಿ ಎಂಬ ಆಸೆ ಅವನ್ನಾದಾಗಿತ್ತು. ಆದರೆ ಅವಳಿಗೆ ಕೊಡಲು ಸ್ವತಃ ಅವನೇ ಸಾಲಗಾರ,ದುಡಿದದ್ದು ತನ್ನ ಹೊಟ್ಟೆಗೆ ಸಾಲದಾಗಿತ್ತು. ಮಹೇಶ ತಮ್ಮೆಲ್ಲಾ ಸಂಬಂಧಿಕರಿಗೂ ಪುಟ್ಟವ್ವಳ ಕೊನೆದಿನಗಳ ಸನ್ನಿಹಿತವಾಗಿವೆ ಎಂದು ತಿಳಿಸಿದ. ಒಮ್ಮೆ ಸಂಬಂಧಿಕರೊಬ್ಬರು ಪುಟ್ಟವ್ವಳನ್ನ ನೋಡಲು ಬಂದರು, ಆಗ ಬಂದಾತ-"ಏ ಪುಟ್ಟವ್ವ,ಯಾಕ್ ಹಿಂಗ್ ಆಗ್ಬಿಟ್ಟೆ,ಜಾಸ್ತಿ ಚಿಂತೆ ಮಾಡ್‍ಬ್ಯಾಡ ಆರಾಮಾಗ್ ಇರು"ಎಂದು ಹೇಳಿದಾಗ ಪುಟ್ಟವ್ವ ಮಾತಾಡಲು ಒದ್ದಾಡುತ್ತ "ಹಾಸಿಗೆ ಹಿಡಿದ್ಯಾಕಿಗೆ ಆರಾಮಾಗ್ ಇರು ಅಂತಿಯಲ ತಮಾ,ಇವತ್ತೋ ನಾಳೆನೊ ಅಂತಿದಿನಿ,ದ್ಯಾವ್ರು ಜಲ್ದಿ ಕರ್‌ಕಬಕು ನಮ್ನೆಲ್ಲಾ" ಎಂದಳು, ಆಗ ಬಂದಾತ-"ಹಂಗ್ ಅನ್‍ಬ್ಯಾಡವ, ಧೈರ್ಯ ತಕ್ಕ,ನಿಂಗ್ ಏನ್ ಬೇಕ್ ಕೇಳ್ ಇಸ್ಕ , ನಕ್ಕಂತ್ ನಕ್ಕಂತ್ ಇದ್ದು ಹೋಗ್ಬಕು ಬಾಳಿ ಬದುಕ್‍ದರು" ಎಂದಾಡಿದ ಮಾತಿಗೆ ಆತ ಬಾರಿ ಬೆಲೆಯನ್ನೇ ತೆರಬೇಕಾಯ್ತು. ಇದೇ ಮಾತಿಗೆ ಕಾದು ಕುಳಿತಿದ್ದ ಪುಟ್ಟವ್ವ " ನಂಗ್ ಕೊನೆ ಆಸೆ ನೆರ್‌ವೇರ್ಸೊ ತಮ್ಮ,ಒಂದ್ ಪಟ ಆದ್ರು ನಂಗ್ ಸಾರಾಯ್ ತಂದ್‍ಕೊಟ್ಟುಈ ಸಾಯೋವ್ಳ್ ಬಾಯಿಗ್ ಬಿಡಪ" ಎಂದಾಗ ಇಕ್ಕಟ್ಟಿಗೆ ಸಿಲುಕಿದ ಸಂಬಂಧಿಕ ಕೊನೆ ಆಸೆಯೆಂದು ಒಪ್ಪಿ ನೆರವೇರಿಸಿದ. ಅದುವರೆಗೆ ಪಿಸು ಮಾತಾಡಲು ಒದ್ದಾಡಿದ್ದ ಪುಟ್ಟವ್ವಳಿಗೆ ಅದೇನೊ ಶಕ್ತಿ ಬಂದು ಚಂದ್ರನಿಗೆ ಬೈಯುತ್ತ ,ತನ್ನ ಆ ದಿನಗಳನ್ನು ನೆನೆದು ಸುಖಿಸಿದಳು. ಹೀಗೆ ದಿನಗಳು ಉರುಳಿದಂತೆ ಸಂಬಂಧಿಕರ ಸಂಖ್ಯೆಯು ಹೆಚ್ಚಾಯ್ತು,ಪುಟ್ಟವ್ವಳ ಕೊನೆ ಆಸೆಗಳು ಕೊನೆಯಾಗದೇ ಮುಂದುವರೆದವು. ಪುಟ್ಟವ್ವ ಹೀಗೆ ಬಂದವರು ಕೊಟ್ಟಿದ್ದನ್ನು ಕುಡಿದು ಅಮಲಿನಲ್ಲಿದ್ದಾಗ ಕರೆದರು ಕೇಳದೇ ಮಲಗುವುದು ಚಂದ್ರನ ಮನೆಯವರಿಗೆ ಮಾಮೂಲಾಯಿತು,ಆದ್ದರಿಂದ ಅವಳಾಗಿಯೆ ಎದ್ದು ಕರೆವ ತನಕ ಪುಟ್ಟವ್ವಳ ತಂಟೆಗು ಹೋಗದೇ ಇರುತ್ತಿದ್ದರು. ಮುಂಜಾನೆಯೆ ಎದ್ದು ಹೊಲದ ಕಡೆ ಹೋಗುವ ಚಂದ್ರ ಒಮ್ಮೆ ಪುಟ್ಟವ್ವಳೆಡೆ ಕಣ್ಣಾಹಿಸಿದ,ನೊಣಗಳು ಪುಟ್ಟವ್ವಳ ಮೂಗಿನ ಬಳಿ ಹಾರಾಡುತ್ತಿದ್ದರು ಆಕೆಯಿಂದ ಚಲನೆಯಿರಲಿಲ್ಲ,ಹತ್ತಿರ ಹೋಗಿ ಕೈ ಮುಟ್ಟಿದಾಗ ತಣ್ಣಗಿದ್ದ ದೇಹ ಪುಟ್ಟವ್ವಳ ಸಾವನ್ನು ಖಚಿತ ಪಡಿಸಿತು.ಆಕೆ ಎಷ್ಟೇ ಕಾಡಿಸಿದ್ದರೂ ಅವಳೂ ತಾಯಿಯಲ್ಲವೇ...! 'ಅದೆಷ್ಟು ಸಮಯ ಕಳೆದಳೊ ಇಹಲೋಕ ತ್ಯಜಿಸಿ,ಮನೆಮಂದಿಯೆಲ್ಲಾ ಇದ್ದು ಸಾವನ್ನು ಗುರುತಿಸುವರಿಲ್ಲದೇ ನೊಣಗಳಾಡುವರೆಗೂ ಇದ್ದಾಳೆ, ಎಂಥಾ ಹಟಮಾರಿ ಹೆಣ್ಣು..!ಯಾರ ಮಾತಿಗೂ ಬಗ್ಗದೆ ಕೊನೆವರೆಗೂ ಕುಡಿದುಕೊಂಡೇ ಇದ್ದಳು,ಅದರಿಂದಲೇ ಸತ್ತಳು,ಅದರಜೊತೆಗೆ ಸತ್ತಳು'ಎಂದು ಯೋಚಿಸಿದ ಚಂದ್ರನ ಕಣ್ಣಂಚಲ್ಲಿ ನೀರಾಡಿತು.

ಎಲ್ಲಾ ಕಾರ್ಯವೂ ಮುಗಿಯಿತು,ಮರದಂಚಿನ ಫ್ರೇಮೊಳಗೆ ಮರಣ ದಿನಾಂಕದೊಂದಿಗೆ ಪುಟ್ಟವ್ವ ನಗುತ್ತ ಪಕ್ಕದಲ್ಲಿದ್ದ ಸಿದ್ದಪ್ಪನ ಕೂಡಿದಳು. ವಾರಕ್ಕೊಮ್ಮೆ ನಡೆವ ಪೂಜೆಯಲ್ಲಿ ಸದಾ ಚಂದ್ರನಿಗೆ ನೆನಪಾಗುತ್ತಾರೆ ಈ ದಂಪತಿ. ಇವರು ನಿಜವಾಗಿಯೂ ಸ್ವಾರ್ಥಿಗಳ? ಕೇವಲ ಕುಡಿತದ ಚಟಕ್ಕೆ ಸಂಸಾರವನ್ನೇ ಬಲಿಹಾಕಲು ಹೇಸದ ಇವರು ತಮ್ಮ ಜೀವಕ್ಕೆ ಮತ್ತು ಮಕ್ಕಳಿಗೆ ಅದೆಷ್ಟು ಪ್ರಾಮಾಣಿಕರಾಗಿದ್ದರು.ಸಂಸಾರನೌಕೆಯ ಅಂಬಿಗರಾದ ತಂದೆ-ತಾಯಿ ಮದ್ಯವ್ಯಸನಿಯಾಗಿದ್ದರ ಪರಿಣಾಮವಾದರು ಏನು..? ಸಂಸಾರನೌಕೆ ಬಿರುಗಾಳಿಗೆ ಸಿಲುಕಿತು,ಆದರೆ ಅಂಬಿಗರೇ ಅಮಲಿನ ಮಜಲಿನಲ್ಲಿದ್ದರು,ಬಿರುಗಾಳಿಯನ್ನು ಲೆಕ್ಕಿಸದೇ ಕುಡಿತದ ಸಮುದ್ರಕ್ಕೆ ಧುಮುಕಿದರು. ಇನ್ನು ಬಿರುಗಾಳಿಯೆದುರಿಸಿ ನಿಲ್ಲುವುದು ಹೇಗೆ..?ಆಗ ತಾನೆ ಜವಬ್ದಾರಿ ಹೊರಬೇಕಾಯ್ತು, ತಮ್ಮಂದಿರು ಸ್ವಲ್ಪ ದೂರ ನನ್ನೊಂದಿಗೆ ಸಾಗಿ ಅವರೂ ಅಂಬಿಗರ ದಾರಿ ಹಿಡಿದು ಸಮುದ್ರಕ್ಕೆ ಬಿದ್ದರು. ಅಂಬಿಗನನ್ನು ಹಿಂಬಾಲಿಸುವುದು ಸಹಜವಲ್ಲವೇ ! ನೌಕೆ ಬಹುದೂರ ಸಾಗಿತು,ಸಮುದ್ರಕ್ಕೆ ಬಿದ್ದವರು ಈಜಿ ದಡಸೇರಲಾಗದೆ,ಮುಳುಗದೇ ಒದ್ದಾಡುತ್ತಿದ್ದಾರೆ. ಅಂಬಿಗರೇ ಸೋಲೊಪ್ಪಿ ಮುಳುಗಾಯಿತು,ಉಳಿದವರು ಇನ್ನೆಷ್ಟು ದಿನ ಮುಳುಗದೇ ಇರುವರು? ಈಗಲೂ ಅವಕಾಶವಿದೆ ! ನನ್ನ ನೌಕೆ ಕಣ್ಣಳತೆಯ ದೂರದಲ್ಲಿದೆ, ಕುಡಿತದ ಸಮುದ್ರದಲ್ಲಿ ಈಜಿ ದಡಸೇರುವ ಆಸೆಬಿಟ್ಟು ಪ್ರಯತ್ನಿಸಿದರೆ ಪ್ರಶಾಂತವಾಗಿ ಸಾಗುತ್ತಿರುವ ನೌಕೆಯ ಸೇರಬಹುದು...


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...