ನೀನು ಅವಳಾಗುವೆಯಾ?

Posted by ರಕ್ಷಿತ್ ಆಚಾರ್ on 07-Jun-2017
ಬಹುಶಃ,
ನನ್ನ ಮೊದಲ ತೊದಲು ನುಡಿ ಕಂಡೋಳು ನನ್ನಮ್ಮ.
ಪ್ರಾಯಶಃ,
ನಿನ್ನೆದುರು ನಿವೇದನೆಯ ಮಾತಾಡಲು ತಂದಿದ್ದ,
ಸಾಲೆಲ್ಲಾ ಮರೆತು, ಮಾತು ಹರಿಯದವನಾಗಿ,
ತೊದಲಲೂ ಅವಳೇ ಕಾರಣ, ನನ್ನಮ್ಮ.
ಯಾಕಂದ್ಯಾ...?

ನಾ ಜಗ ಮರೆಯೋ ನಗು,
ಇಂದು ನಿನ್ನದಾಗಿರಬಹುದು.
ಅದನ್ನ ನಾ ಮೊದಲು ಕಂಡಿದ್ದು,
ನನ್ನ ಮೊದಲ ಅಳುವ ಕೇಳಿ,
ಅಕ್ಷರಶಃ,
ನನ್ನನ್ನೇ ಕಾಣುವ ಸಲುವಾಗಿ,
ನೋವು ನುಂಗಿ ಅವಳು ನಕ್ಕಾಗ.

ನಿನ್ನ ನೂರು ಮಾತುಗಳ ತೋರಣದಲಿ,
ಹತ್ತೆಲೆಗೆ ತಲೆ ಬಾಗಿ, ನಾ ಮೌನಿಯಾಗಿ.
ಮಗುವಂತೆ ಕೇಳುಗನಾಗಲೂ ಅವಳೇ ಮೂಲ.
ಜರಿದರೂ... ಒಂದು ಕ್ಷಣ ದೂರ ಸರಿಯದೆ,
ನಾನರಿಯದಂತೆ, ನನ್ನಾವರಿಸಿ ಮರು ಮಾತಡದಂತೆ.
ತಿಳಿ ಹೇಳಿ ತಣ್ಣಗಾಗಿಸುವವಳ ಮಗ ನಾನು.

ನಿನಗಾಗಿ, ಮರೆತ ಕ್ಷಣಗಳಲ್ಲಿ.
ಅವಳ ನೆರಳು, ನೆನಪು ಕಾಣದಾಗಿರೆ,
ಕಂಠ ಕಟ್ಟಿ, ನಾಲಗೆ ಸ್ತುತಿ ತಪ್ಪಿ,
ತೊದಲಿದೆ ಪಶ್ಚಾತ್ತಾಪದಿ.
ಈ ಬಾಳಲಿ, ಅವಳು ಆ ಸೂರ್ಯ,
ನೀನೆಷ್ಟಾದರೂ ಅದರ ಪ್ರತಿಫಲನ,
ಮುನಿಸಿನಲೂ ಚಂದ ಕಾಣೋ ಚಂದಿರ.


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...