ಕನ್ನಡ ಕೇವಲ ನುಡಿಯಲ್ಲ.. ನಮ್ಮ ಅಂತರಂಗದ ಮಾತು

Posted by ಮಂದಾರ ಕೆ.ಆರ್ on 01-Nov-2017
ನಿನ್ನೆ ಬಸ್ಸಲ್ಲಿ ಯಾರೋ ಇಬ್ರು ಕನ್ನಡಿಗರು ಮಾತಾಡ್ತಾ ಇದ್ರು..ನಾಳೆ ಕನ್ನಡ ರಾಜ್ಯೋತ್ಸವ ಅಲ್ವ ಹಾಗಾಗಿ ಒಂದೂ ಆಂಗ್ಲ ಪದ ಬಳಸದೇ ಕನ್ನಡ ಮಾತಾಡೋಕೆ ಪ್ರಯತ್ನ ಪಡೋಣ ಅಂತಾ..ಆಗ ಅನ್ಕೊಂಡೆ ನಾವು ಹುಟ್ಟಿ ಬೆಳೆದ ನಾಡಿನ ಭಾಷೆಯನ್ನ, ನಮ್ಮ ಮಾತೃ ಭಾಷೆಯನ್ನ ಇನ್ನೊಂದು ಭಾಷೆಯ ಪ್ರಭಾವ ಇಲ್ಲದೇ ಮಾತಾಡೋಕೆ ನಮಗೆ ರಾಜ್ಯೋತ್ಸವದಂತಹ ಸುದಿನ ಬರಬೇಕು ಅಂದ್ರೆ ನಮ್ಮ ಭಾಷೆಯ ಸ್ಥಿತಿಯನ್ನ ನಾವೇ ಅರ್ಥ ಮಾಡ್ಕೋಬಹುದು.

ಕನ್ನಡಿಗರು ಕನ್ನಡ ಮಾತಾಡೋದು ಇವತ್ತಿಗೆ ಕೇವಲ ಜವಾಬ್ದಾರಿಯಾಗಿ ಉಳಿದಿಲ್ಲ..ಅದು ಅನಿವಾರ್ಯತೆ ಆಗಿ ಹೋಗಿದೆ..ಯಾಕಂದ್ರೆ ೨೦೦೦ ವರ್ಷಗಳಷ್ಟು ಇತಿಹಾಸ ಇರುವ ನಮ್ಮ ಭಾಷೆಯನ್ನ ಮುಂದಿನ ಪೀಳಿಗೆಯವರು ಕೂಡ ಬಳಸಬೇಕು ಅಂದ್ರೆ, ಅವರ ಜೊತೆ ಕನ್ನಡದಲ್ಲಿ ಮಾತಾಡೋದು, ಅವರಿಗೆ ಕನ್ನಡ ಕಲಿಸೋದು ನಮ್ಮ ಮುಂದಿರುವ ಏಕೈಕ ದಾರಿ..ನವೆಂಬರ್ ಬಂತು, ಕನ್ನಡ ರಾಜ್ಯೋತ್ಸವ ಮಾಡುದ್ವಿ,ಹಾಡುದ್ವಿ, ಕುಣಿದಾಡುದ್ವಿ..ಮುಗಿತು...ಇಷ್ಟೇನಾ ನಮ್ಮ ಕನ್ನಡತನ? ಇಷ್ಟೇನಾ ನಾವು ನಮ್ಮ ನಾಡಿಗೆ ಮಾಡುವ ಋಣ ಸಂದಾಯ???ಖಂಡಿತಾ ಅಲ್ಲ...ನಾವು ಮಾಡುವ ಚಿಕ್ಕ ಕೆಲಸಗಳಲ್ಲೂ ಕನ್ನಡವನ್ನ ಉಳಿಸಬಹುದು..

"ಮಮ್ಮೀ" ಅಂತ ಹೆತ್ತವಳನ್ನ ಕರೆಯುವ ಬದಲು "ಅಮ್ಮಾ" ಅಂತ ಕರೆದು ನೋಡಿ, ಆ ಶಬ್ಧದಿಂದ ಉದ್ಭವವಾಗುವ ಭಾವನೆಯೇ ಬೇರೆ..ದಿನ ನಿತ್ಯ ಬಳಸುವ ಹಲವಾರು ಆಂಗ್ಲ ಪದಗಳನ್ನ ತೆಗೆದು ಹಾಕಿ, ಕನ್ನಡ ಬಳಸಿ..ಬ್ರೇಕ್ ಫ಼ಾಸ್ಟ್ ಬದಲಿಗೆ ತಿಂಡಿ ..ಲಂಚ್ ಬದಲಿಗೆ ಊಟ. ಹೆಲೋ ಬದಲಿಗೆ ನಮಸ್ತೇ,ಗುಡ್ ಮಾರ್ನಿಂಗ್ ಬದಲಿಗೆ ಶುಭೋದಯ ಹೀಗೆ ಚಿಕ್ಕ ಚಿಕ್ಕ ಬದಲಾವಣೆ ಮಾಡ್ಕೊಳಿ..ಕನ್ನಡಿಗರು ತುಂಬಾ "ಫ಼್ಲೆಕ್ಸಿಬಲ್"(ಹೊಂದಾಣಿಕೆ ಮನೋಭಾವದವರು) ಅವರು ಯಾವ ಭಾಷೆ ಬೇಕಾದ್ರೂ ಮಾತಾಡ್ತಾರೆ ಅಂತ ಜನಪ್ರಿಯ ಆಗಿರುವಾಗ, ನಾವು ಕನ್ನಡದಲ್ಲಿ ಮಾತಾಡಿದಾಗ ಎದುರಿಗಿರುವ ಕನ್ನಡಿಗ ಕನ್ನಡದಲ್ಲಿ ಉತ್ತರ ಕೊಡಲ್ಲ ಯಾಕೆ..? ಖಂಡಿತಾ ಕೊಟ್ಟೇ ಕೊಡ್ತಾನೆ ಹಾಗಾಗಿ ಕನ್ನಡವನ್ನ ಹೆಚ್ಚು ಹೆಚ್ಚು ಬಳಸುವ ಮನಸ್ಥಿತಿ ನಮ್ಮದಾಗಬೇಕು ಅಷ್ಟೇ..ಪೇಸ್ ಬುಕ್,ವಾಟ್ಸಾಪ್ ಹೀಗೆ ನಾವು ದಿನ ನಿತ್ಯ ಬಳಸುವ ಎಲ್ಲಾ ತಂತ್ರಾಂಶಗಳು ಕನ್ನಡದಲ್ಲಿ ಲಭ್ಯವಿರುವಾಗ ಅದನ್ನೊಮ್ಮೆ ಬಳಸಿ ನೋಡಿ...ನಿಮಗೆ ೫ ಗುಂಪಿನ ೬ ಸಂಭಾಷಣೆಗಳು ಲಭ್ಯವಿದೆ ಅಂತ ಸೂಚನೆಗಳನ್ನ ಕನ್ನಡದಲ್ಲಿ ಓದೋಕೆ ಏನೋ ಒಂತರಾ ಸಂತೋಷ ಆಗತ್ತೆ...ಆಫೀಸಿನ ಬಿಡುವಿಲ್ಲದ ಆಂಗ್ಲ ಸಂಭಾಷಣೆಗಳ ನಡುವೆ ನಿಮ್ಮ ಜಂಗಮ ವಾಣಿಯ ಒಂದು ಕನ್ನಡ ಸೂಚನೆ ನಿಮ್ಮ ಮನಸ್ಸಿಗೆ ಖುಷಿ ಕೊಡಬಹುದು.ಪರ ಭಾಷಾ ಚಿತ್ರಗಳಿಗೆ ಕೊಡುವ ದುಡ್ಡನ್ನ ಕನ್ನಡ ಚಿತ್ರಗಳಿಗೆ ಕೊಡಿ..ಕನ್ನಡ ಮನಸ್ಸಿನಿಂದ ಕನ್ನಡ ಚಿತ್ರಗಳನ್ನ ನೋಡಿ..ಖಂಡಿತಾ ನಮ್ಮ ಚಿತ್ರಗಳು ಯಾವ ಭಾಷೆಯ ಚಿತ್ರಗಳಿಗೂ ಕಡಿಮೆಯಿಲ್ಲ ಅನ್ಸುತ್ತೆ..ಬದಲಾಗಬೇಕಾಗಿರೋದು ಕೇವಲ ನಮ್ಮ ಮನಸ್ಥಿತಿಯೇ ಹೊರೆತು ಚಿತ್ರಗಳಲ್ಲ..

ನಮ್ಮ ತಂದೆ-ತಾಯಿ ಕನ್ನಡದಲ್ಲೇ ಮಾತಾಡ್ತಿದ್ರು...ಶಾಲೆಯ ಮೇಷ್ಟ್ರು ಕನ್ನಡದಲ್ಲೇ ಪಾಠ ಮಾಡ್ತಿದ್ರು ಹಾಗಾಗಿ ಕನ್ನಡ ಕಲಿಯೋದು ನಮಗೆ ಕಷ್ಟ ಆಗಿರ್ಲಿಲ್ಲ...ಆದರೆ ಇಂದಿನ ಮಕ್ಕಳಿಗೆ ಸುತ್ತ-ಮುತ್ತ ಎಲ್ಲೆಡೆಯು ಆಂಗ್ಲ ಭಾಷೆಯೇ ಕೇಳೋದ್ರಿಂದ ಅವರ ಕನ್ನಡ ಕಲಿಕೆ ಹಿಂದೆ ಬೀಳ್ತಾ ಇದೆ...ಯುವ ಪೀಳಿಗೆಯವರು ಕನ್ನಡ ಬಂದ್ರೂ ಕನ್ನಡ ಮಾತಾಡೋಲ್ಲ..ಇಂದಿನ ಪೀಳಿಗೆಯ ಮಕ್ಕಳಿಗೆ ಕನ್ನಡ ಸರಿಯಾಗಿ ಬರಲ್ಲ...ಇದು ನಮ್ಮ ಕರ್ನಾಟಕದ ಇಂದಿನ ಪರಿಸ್ಥಿತಿ.ಇದೆಲ್ಲದಕ್ಕೂ ಪರಿಹಾರ ಅಂದ್ರೆ ಎಲ್ಲೇ ಹೋದ್ರೂ ನಾವು ಕನ್ನಡ ಮಾತಾಡೋದು...ಅಂಗಡಿಯವನಿಗೆ ಕನ್ನಡ ಬರುತ್ತೋ ಇಲ್ವೋ..ಆದ್ರೆ ನೀವು ಮೊದಲು ಕನ್ನಡ ದಲ್ಲೇ ಕೇಳಿ...ಅವನು ಕರ್ನಾಟಕದಲ್ಲಿ ಬಂದು ವ್ಯಾಪಾರ ಮಾಡ್ತಿದಾನೆ ಅಂದ್ರೆ ಇಲ್ಲಿಯ ಭಾಷೆ ಕಲಿಯೋದು ಅವನಿಗೆ ಅನಿವಾರ್ಯ ಆಗಬೇಕೇ ಹೊರತು , ಅವನ ಅಂಗಡಿಯಲ್ಲಿ ಕೊಳ್ಳುವ ನಮಗೆ ಅವನ ಭಾಷೆಯಲ್ಲಿ ವ್ಯವಹರಿಸೊದು ಅನಿವಾರ್ಯ ಆಗಬಾರದು..ಕನ್ನಡಿಗರು ವಿಶಾಲ ಹೃದಯದವರು ಅನ್ನೋದನ್ನ ಕನ್ನಡಿಗರ ಕನ್ನಡತನ ವಿಶಾಲವಾದದ್ದು ಎನ್ನುವ ಹಾಗೆ ಬದಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಸ್ನೇಹಿತರೇ..

ಕನ್ನಡಿಗನಾಗಿ ನಮ್ಮ ಮೊದಲ ಕರ್ತವ್ಯ ಎಲ್ಲೇ ಹೋದ್ರೂ ಕನ್ನಡಿಗನಾಗಿ ಬದುಕುವುದು..ಕನ್ನಡಕ್ಕಾಗಿ ಕೈಲಾದ ಅಳಿಲು ಸೇವೆ ಮಾಡೋದು,ಕನ್ನಡ ಗೊತ್ತಿಲ್ಲದವರಿಗೆ ಕನ್ನಡ ಕಲಿಸೋದು, ಕನ್ನಡದ ಸಂಸ್ಕೃತಿಯನ್ನು ಕಾಪಾಡೋದು. ಕನ್ನಡ ಭಾಷಾ ವ್ಯಾಮೋಹ ನಮ್ಮ ಪಿಡುಗಾಗಬೇಕು, ಕನ್ನಡಿಗರ ಮನಸ್ಥಿತಿ ಕನ್ನಡವಾಗಿ ಬದಲಾಗಬೇಕು..ಕನ್ನಡ ಮೊದಲು ಉಳಿದದ್ದೆಲ್ಲಾ ಆಮೇಲೆ ಎನ್ನುವ ಭಾವನೆ ನಮ್ಮೆಲ್ಲರದ್ದಾಗಬೇಕು.ಕನ್ನಡ ಕೇವಲ ನುಡಿಯಾಗಿರದೇ ನಮ್ಮೆಲ್ಲರ ಅಂತರಂಗದ ಮಾತಾಗಬೇಕು..
ಕನ್ನಡ ಮನಸ್ಸ್ಸುಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...