'ಮಲ್ಲಿಗೆ'ಯ ಪಾಠ...

Posted by ನಾಗೇಂದ್ರ ಎ.ಆರ್. on 03-Nov-2017
1992ರ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರವಾದ "ಮೈಸೂರ ಮಲ್ಲಿಗೆ"ಯನ್ನು ನಿನ್ನೆ ರಾತ್ರಿ ವೀಕ್ಷಿಸುತ್ತಿದ್ದೆ. ನನ್ನ ಪ್ರಕಾರ ಈ ಚಿತ್ರದ ಪ್ರಧಾನ ಆಕರ್ಷಣೆಯೆಂದರೆ , ಅದು ಚಿತ್ರದಲ್ಲಿ ಬರುವ ಸುಮಧುರವಾದ ಭಾವಗೀತೆಗಳು. ಅದರಲ್ಲೂ, ಎಂತಹ ಮೂಡ ಮನಸ್ಸಿನಲ್ಲೂ ದೇಶಪ್ರೇಮವನ್ನು ಭಿತ್ತಬಲ್ಲ ಸಾಹಿತ್ಯವನ್ನು ಹೊಂದಿರುವ ಚಿತ್ರದ ಅಂತಿಮ ಗೀತೆ ನಿಜಕ್ಕೂ ಇಂದು ಸಮಾಜದಲ್ಲಿ ನಮ್ಮ ಎದುರಿರುವ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ನೀಡಬಲ್ಲದು ಎಂದು ನಾನು ಬಲವಾಗಿ ನಂಬುತ್ತೇನೆ. " ಕಣ್ಣು ಬೇರೆ ನೋಟ ಒಂದು, ನಾವು ಭಾರತೀಯರು...ಭಾಷೆ ಬೇರೆ ಭಾವ ಒಂದು, ನಾವು ಭಾರತೀಯರು " ..ಮತ್ತೆ ಮತ್ತೆ ಈ ಸಾಲುಗಳು ಕಿವಿಯ ಮೇಲೆ ಬಿದ್ದಾಗ, ಅನೇಕ ಯೋಚನೆಗಳು ಲಗಾಮು ಇಲ್ಲದ ಕುದುರೆಯಂತೆ ಮನಸ್ಸಿನೊಳಗೆ ಓಡಾಡಲು ಆರಂಭಿಸಿದವು.

ಪ್ರಚಲಿತ ವಿದ್ಯಮಾನದಲ್ಲಿ, ರಾಜಕಾರಣಿಗಳ ವೋಟ್ ಬ್ಯಾಂಕ್ ಚಪಲದಿಂದಾಗಿ ಹಾಗು ಮಾಧ್ಯಮಗಳ TRP ಹುಚ್ಚಿನಿಂದಾಗಿ ಜರುಗುತ್ತಿರುವ ಅನೇಕ ಸಂಗತಿಗಳು ಅಂತಿಮವಾಗಿ ಮುಕ್ತಾಯಗೊಳ್ಳುತ್ತಿರುವುದು ಸಮಾಜದ ಒಗ್ಗಟ್ಟಿನಲ್ಲಿನ ಸಡಿಲು ಹಾಗು ಕೋಮುಘರ್ಷಣೆಯಲ್ಲೇ. ಇತ್ತೀಚೆಗೆ ಚರ್ಚೆಯಲ್ಲಿರುವ ಟಿಪ್ಪು ಜಯಂತಿ, ವೀರಶೈವ-ಲಿಂಗಾಯುತ ಧರ್ಮಗಳ ಪ್ರತ್ಯೇಕತೆಯಂತಹ ವಿಚಾರಗಳೂ ಇದಕ್ಕೆ ಹೊರತೇನಲ್ಲ. ಎರಡು ವರ್ಷಗಳ ಹಿಂದೆ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಿಸುವ ನಿರ್ಧಾರವನ್ನು ಪ್ರಕಟಿಸಿದಾಗ ಜರುಗಿದ ಕೆಲ ವಿದ್ಯಮಾನಗಳು ಸಮಾಜದ ಶಾಂತಿಗೆ ಅಪಾರ ಧಕ್ಕೆಯನ್ನು ತಂದವು. ಕೊಡಗು, ಮಡಿಕೇರಿ, ಬಂಟ್ವಾಳ ಭಾಗಗಳು ಸೇರಿದಂತೆ ರಾಜ್ಯಾದ್ಯಂತ ಹಲವೆಡೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿ, ಅದು ಅನೇಕ ಸಾವು ನೋವುಗಳಲ್ಲಿ ಅಂತ್ಯಗೊಂಡಿತು. ಮೊನ್ನೆ ತಾನೆ ಫೇಸ್ ಬುಕ್ ಮಿತ್ರರರೊಬ್ಬರು ಸುಂದರವಾದ ಅರ್ಥಪೂರ್ಣ ವಾಕ್ಯವೊಂದನ್ನು ಹೀಗೆ ಬರೆದಿದ್ದರು. "ಇತಿಹಾಸವೆಂಬುದು ಹಲವು ರಂಧ್ರಗಳಿರುವ ಒಂದು ಹುತ್ತದಂತೆ". ನಿಜಕ್ಕೂ ಸತ್ಯವಾದ ಮಾತಲ್ಲವೇ... ಕಣ್ಣಾರೆ ಕಂಡದ್ದನ್ನೂ ಪ್ರಮಾಣಿಸಿ ನೋಡು ಎಂಬ ಮಾತನ್ನು ಹಿರಿಯರು ನಮಗಾಗಿ ಬಿಟ್ಟು ಹೋಗಿದ್ದಾರೆ. ಟಿಪ್ಪು ಒಬ್ಬ ಮತಾಂಧನೋ ಅಥವಾ ದೇಶಪ್ರೇಮಿಯೋ ಎಂಬುದನ್ನು ನಾವು ನಿಖರವಾಗಿ ಕಡ್ಡಿ ತುಂಡರಿಸಿದಂತೆ ಹೇಳಲು ಸಾಧ್ಯವಿಲ್ಲ. ಕಾರಣ, ಟಿಪ್ಪುವನ್ನು ಕಣ್ಣಾರೆ ಕಂಡವರು ಅಥವಾ ಆತನನ್ನು ಹತ್ತಿರದಿಂದ ಬಲ್ಲವರಾರೂ ಇಂದು ನಮ್ಮೊಂದಿಗಿಲ್ಲ. ಇತಿಹಾಸಕಾರರಲ್ಲೂ ಟಿಪ್ಪುವಿನ ಬಗ್ಗೆ ಒಮ್ಮತದ ಅಭಿಪ್ರಾಯವಿಲ್ಲ. ಅಂತದ್ದರಲ್ಲಿ ಇತಿಹಾಸಕಾರರಲ್ಲೇ ಒಂದು ಒಮ್ಮತದ ಅಭಿಪ್ರಾಯವಿರದ ವ್ಯಕ್ತಿಯೋರ್ವನ ಜಯಂತಿಯನ್ನು ಸರ್ಕಾರವು ಆಚರಿಸ ಹೊರಟಾಗ, ಕರ್ನಾಟಕದ ಪ್ರತಿಯೊಬ್ಬ ನಾಗರೀಕನೂ ಅದನ್ನು ಜಾತಿ,ಧರ್ಮಗಳೆಂಬ ಸೀಮಿತ ದೃಷ್ಟಿಕೋನದಲ್ಲಿ ಯೋಚಿಸದೆ ಕೊಂಚ ಸಂಯಮದಿಂದ ವರ್ತಿಸಿದ್ದರೆ ನಮ್ಮಲ್ಲಿನ ಒಗ್ಗಟ್ಟು, ಹಾಗು ಸಮಾಜದ ಶಾಂತಿ ಎರಡೂ ಭಗ್ನಗೊಳ್ಳುತ್ತಿರಲಿಲ್ಲವೇನೊ. ಸರಿ..ಸರ್ಕಾರವು ಹೇಳುವಂತೆ, ಟಿಪ್ಪು ಒಬ್ಬ ಸಾಮಾನ್ಯ ರಾಜನಾಗಿರದೆ, ಒಬ್ಬ ಮಹಾ ದೇಶಭಕ್ತನಾಗಿದ್ದ ಎಂದೇ ಭಾವಿಸೋಣ. ಆದರೆ ಟಿಪ್ಪುವಿನಂತೆ, ಈ ಕನ್ನಡದ ಮಣ್ಣಿನಿಂದಲೇ ಸ್ವಾತಂತ್ರ ಸಮರದಲ್ಲಿ ಪಾಲ್ಗೊಂಡ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಸುರಪರದ ವೆಂಕಟಪ್ಪ ನಾಯಕ, ನರಗುಂದದ ಬಾಬಾಸಾಹೇಬ, ಮುಂಡರಗಿ ಭೀಮರಾವ್, ಸಿಂಧೂರ ಲಕ್ಷ್ಮಣರಂತಹ ಮಹಾನ್ ದೇಶಪ್ರೇಮಿಗಳ ಉದಾಹರಣೆಗಳು ನಮ್ಮ ಕಣ್ಣೆದುರಿವೆ. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನು ಸವೆಸಿದ ಹುತಾತ್ಮರನ್ನು ನೆನೆಯುವ ಸದುದ್ದೇಶ ಸರ್ಕಾರಕ್ಕೆ ನಿಜಕ್ಕೂ ಇದ್ದಿದ್ದರೆ ಸರ್ಕಾರವು ಈ ಎಲ್ಲಾ ನಾಯಕರನ್ನೂ ಸ್ಮರಿಸಿಕೊಳ್ಳುವ ಕಾರ್ಯವನ್ನು ಮಾಡಬೇಕಿತ್ತು. ಇವರೆಲ್ಲರನ್ನೂ ಬಿಟ್ಟು ಸರ್ಕಾರವು ಒಬ್ಬ ನಿರ್ದಿಷ್ಟ ವ್ಯಕ್ತಿಯನ್ನು ಮಾತ್ರ ಪರಿಗಣಿಸಿದೆ ಎಂದರೆ ಅದರ ಉದ್ದೇಶವನ್ನು ಪ್ರತಿಯೊಬ್ಬ ಕನ್ನಡಿಗನೂ ತನ್ನ ವಿವೇಚನೆಯಿಂದ ಗ್ರಹಿಸಿ, ನಮ್ಮಲಿನ ಒಗ್ಗಟ್ಟನ್ನು ಮತ್ತಷ್ಟು ಬಿಗಿಗೊಳಿಸಿದ್ದರೆ, ಅಷ್ಟು ದೊಡ್ಡ ಪ್ರಮಾಣದಲ್ಲಿ ಹಾನಿಯು ಸಂಭವಿಸುತ್ತಿರಲಿಲ್ಲವೇನೋ. ಎಲ್ಲಿಯವರೆಗೂ ಇಂತಹ ಬಾಹ್ಯ ಪ್ರಚೋದನೆಗಳಿಂದ ನಮ್ಮ ಆಂತರಿಕ ಒಗ್ಗಟ್ಟು ಸಡಿಗೊಳ್ಳುತ್ತಿರುತ್ತದೋ, ಅಲ್ಲಿಯವರೆಗೂ ನಮ್ಮಲ್ಲಿನ ಈ ದೌರ್ಬಲ್ಯಗಳು ಚೆನ್ನಾಗಿಯೇ ಬಳಸಿಕೊಳ್ಳಲ್ಪಡುತ್ತವೆ.

ಟಿಪ್ಪು ಜಯಂತಿ ಒಂದು ಉದಾಹರಣೆ ಮಾತ್ರವಷ್ಟೆ. ಹಿಂದೆ ನಡೆದ ಇಂತಹ ದುರಂತಗಳಿಂದ ಇನ್ನೂ ಪಾಠ ಕಲಿಯದ ನಾವು, ಈಗಲೂ ಪ್ರತಿಯೊಂದು ವಿಚಾರವನ್ನೂ ಜಾತಿ,ಧರ್ಮ ಎಂಬ ಸೀಮಿತ ದೃಷ್ಟಿಕೋನದಲ್ಲೇ ಆಲೋಚಿಸುತ್ತೇವೆ. ಸಂವಿಧಾನವು ನಮಗೆ ನೀಡಿದ ಮೂಲಭೂತ ಹಕ್ಕಾದ ಮತದಾನದಿಂದ ಹಿಡಿದು ಸಾಮಾಜಿಕ ಹಾಗು ರಾಜಕೀಯ ವ್ಯವಸ್ಥೆಯಲ್ಲಿರುವ ರಂಧ್ರಗಳನ್ನು ಗುರುತಿಸುವಲ್ಲಿಯವರೆಗೂ ಪ್ರತಿಯೊಂದು ವಿಚಾರದೆಡೆಗಿನ ನಮ್ಮ ದೃಷ್ಟಿಕೋನಕ್ಕೆ ಜಾತಿ,ಮತಗಳ ಸೋಕು ಅಂಟಿಕೊಂಡಿರುತ್ತದೆ. ಹಲವು ಧರ್ಮಗಳಿಗೆ ಹಾಗು ಅನುಷ್ಟಾನಗಳಿಗೆ ಬದ್ಧರಾಗಿರುವ ಹಲವು ಜೀವಗಳು ಆಶ್ರಯಿಸಿರುವುದು ಒಂದೇ ದೇಶವನ್ನು ಎಂಬ ಚಿಕ್ಕ ವಿವೇಚನೆಯೂ ನಮ್ಮಲ್ಲಿ ಜಾಗ್ರತವಾಗಿರುವುದಿಲ್ಲ. ಮೀಸಲಾತಿಯಂತಹ ವಿಚಾರಗಳು ಬಂದಾಗ ಪರಸ್ಪರ ಕೆಸರೆರೆಚಾಡುತ್ತೇವೆಯೇ ಹೊರತು, ಒಗ್ಗಟ್ಟಿನಿಂದ ವ್ಯವಸ್ಥೆಯನ್ನು ಪ್ರಶ್ನಿಸುವುದಿಲ್ಲ. "ಶರಣು ಬಂದವರನ್ನು ರಕ್ಷಿಸುವುದೇ ನಮ್ಮ ಧರ್ಮ" ಎಂದು ಯಹೂದಿಗಳಿಗೆ, ಟಿಬೇಟಿಯನ್ನರಿಗೆ ಅವರ ಸಂಕಷ್ಟದ ಸಮಯದಲ್ಲಿ ಆಶ್ರಯವನ್ನಿತ್ತಿದ್ದ ಭಾರತ, ಇಂದು ತಾನೇ ನಿರಂತರ ಆಂತರಿಕ ಕಚ್ಚಾಟಗಳಿಗೆ ಸಾಕ್ಷಿಯಾಗಿರುವುದು ಅತ್ಯಂತ ಬೇಸರದ ಸಂಗತಿ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ಸಂಸ್ಕೃತದ "ವಸುದೈವ ಕುಟುಂಬಕಮ್" ಎಂಬ ಪರಿಕಲ್ಪನೆ, ಪಂಪನ "ಮನುಷ್ಯ ಕುಲಂ ತಾನೊಂದೆ ವಲಂ" ಎಂಬ ಮಾತು, ರಾಷ್ಟ್ರಕವಿ ಕುವೆಂಪು ಅವರ "ಮನುಜಮತ-ವಿಶ್ವಪಥ" ಸಂದೇಶ ಇವೆಲ್ಲವೂ ಕೇವಲ ಪುಸ್ತಕದ ಹಾಳೆಗಳಲ್ಲಷ್ಟೇ ಉಳಿದು ಹೊಗುತ್ತವೆ. ಸಿಕ್ಕ ಸಕ್ಕರೆಯ ಕಾಳೊಂದನ್ನು ಒಟ್ಟಿಗೆ ಹೊರುವ ಇರುವೆಗಳಲ್ಲಿ, ತಮ್ಮ ಗೂಡಿಗೆ ಕಲ್ಲೆಸೆದರೆ ಒಟ್ಟಿಗೆ ಆಕ್ರಮಣ ಮಾಡುವ ಜೇನುನೊಣಗಳಲ್ಲಿ, ಸಿಕ್ಕ ಆಹಾರದ ತುಣುಕನ್ನು ತನ್ನ ಬಳಗದವರ ಜೊತೆ ಹಂಚಿಕೊಂಡು ತಿನ್ನುವ ಕಾಗೆಗಳಲ್ಲಿ ಸಂಘಟನೆಯ ಪಾಠವನ್ನು ಇಂದು ನಾವು ಅವಶ್ಯ ಕಲಿಯಬೇಕಾಗಿದೆ.ಹೇಗೆ ಹರಿಯುವ ನದಿಗಳ ಅಂತಿಮ ಸನ್ನಿಧಾನವು ಸಮುದ್ರವೇ ಆಗಿರುತ್ತದೋ, ಅಂತೆಯೇ ಇಲ್ಲಿನ ಯಾವುದೇ ಧರ್ಮ,ಜಾತಿ,ಮತ,ನಂಬಿಕೆ, ಆಚರಣೆ, ಸಂಸ್ಕ್ರತಿಗಳು ಅಂತಿಮವಾಗಿ ವಿಲೀನಗೊಳ್ಳುವುದು "ಭಾರತ" ಎಂಬ ಮಹಾ ಶರಧಿಯಲ್ಲಿ ಮಾತ್ರ. ಮುಂದಿನ ಜನ್ಮವೆಂಬುದು ಇದೆಯೋ ಇಲ್ಲವೋ ಯಾರಿಗೂ ತಿಳಿದಿಲ್ಲ. ಅಂತೆಯೇ ಈ ಬದುಕಿನ ಹಾದಿಯಲ್ಲಿ ಯಾವ ಕ್ಷಣದಲ್ಲಿ ನಮ್ಮ ಪ್ರಯಾಣ ಅಂತ್ಯಗೊಳ್ಳುತ್ತದೋ ಎಂಬುದರ ಅರಿವೂ ಸಹ ಯಾರಿಗೂ ಇರುವುದಿಲ್ಲ. ಆದ್ದರಿಂದ ಸಿಕ್ಕ ಜೀವನವನ್ನು ತೃಪ್ತಿಯಿಂದ ಅನುಭವಿಸಿ, ಸಹಜೀವಿಗಳೊಂದಿಗೆ ಸಾಮರಸ್ಯದಿಂದ ಬದುಕಿದಲ್ಲಿ ಮಾತ್ರ ಸಮಾಜದ ಹಾಗು ದೇಶದ ಹಿತವಡಗಿದೆ. ವಿವಿಧತೆಯಲ್ಲಿ ಏಕತೆಗೆ ಹೆಸರಾಗಿರುವ ಭಾರತದಲ್ಲಿಂದು ಎದ್ದು ಕಾಣುತ್ತಿರುವುದು ಕೇವಲ ವಿವಿಧತೆ ಮಾತ್ರ. ಆ ವಿವಿಧತೆಯಲ್ಲಿ ಏಕತೆಯ ಬೆಳಕು ಪ್ರಜ್ವಲಿಸುವುದು "ಮನುಷ್ಯತ್ವಕ್ಕಿಂತ ಹಿರಿದಾದ ಧರ್ಮ ಬೇರೊಂದಿಲ್ಲ. ಭಾರತೀಯ ಎಂಬ ಜಾತಿಗಿಂತ ಮಿಗಿಲಾದ ಜಾತಿ ಇಲ್ಲಿ ಮತ್ತಾವುದೂ ಇಲ್ಲ" ಎಂಬ ಅರಿವು ಎಲ್ಲರಲ್ಲೂ ಮೂಡಿ, ಆ ಅರಿವು ಅನುಷ್ಟಾನ ರೂಪಕ್ಕೆ ಬಂದಾಗ ಮಾತ್ರ.
ತಪ್ಪಿದ್ದಲ್ಲಿ ಕ್ಷಮಿಸಿ.


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...