ತಪನೆ...

Posted by ನಟರಾಜ್ ವಿ.ಎಸ್. on 03-Nov-2017
ಬರೀ ಮರಳು ಮರಳಾದ ಬಂಜರು ಮನದ
ನಿಸ್ಸಾರ ಭಾವನೆಗಳ ಒಣಮರುಭೂಮಿಯೆಡೆಗೆ,
ಬಿಡದೆ ಸುರಿವೆ ನೀ ಸಾಕೆನುವವರೆಗೂ ಎಂದು
ಬಂದಿರುವೆ ನೀನದಾವ ಸೀಮೆಯ ಅಮೃತಧಾರೆಯೋ
ಕಾಪಿಟ್ಟ ಮನದ ಅಷ್ಟೂ ಪ್ರೀತಿಯನು
ಮೊಗೆಮೊಗೆದು ಬಡಿಸಿರುವೆ ನಾ ನಿನ್ನಂತರಾಳಕೆ
ಇನ್ನೆಷ್ಟು ಸಹಿಸಲಿ ಗೆಳತಿ ಈ ಒಳಗುದಿಯನ್ನು
ಸ್ವೀಕರಿಸಿಬಿಡು, ಮನ ಮತ್ತೆ ನಿರ್ವಾಣವಾಗುವ ಮುನ್ನ ...

ನನ್ನದೆಂಬಂತಿದ್ದ ನನ್ನದೆಲ್ಲವೂ ನಿನ್ನದಾಗಿರುವಾಗ
ಬಿಗಿದಪ್ಪಿಬಿಡು ಒಮ್ಮೆ ಜಗವೆಲ್ಲ ನನದಾಗುವುದೆಂಬಂತೆ,
ಒಂದಿನಿತು ಕೊಳಕಿಲ್ಲದ ನಿನ್ನ ನಿರ್ಮಲ ತಾಯ್ತನದಲ್ಲಿ
ಮತ್ತೆ ಮತ್ತೆ ಮಗುವಾಗಿಬಿಡಬೇಕು ನಾನೀಗ...


ನೀನೊಂಥರಾ ಅಚಾನಕ್ಕಾಗಿ ಕಣ್ತುಂಬಿಕೊಳ್ಳೋ ಆನಂದದಲ್ಲಿ
ಅವಿತಿರೋ ಕಿವಿಗಡಚಿಕ್ಕುವ ಮೌನರಾಗದ ಹಾಡಂತೆ,
ಜೊತೆಗೆ ಈ ಸ್ವಗತಗಳ ಸಾಂತ್ವನ ಮನವ ನೇವರಿಸಿರಲು
ಬಂದುಬಿಡು ಗೆಳತಿ ಒಂದಿಪ್ಪತ್ತು ಜನ್ಮಕ್ಕಾಗುವಷ್ಟು ಬದುಕಿಬಿಡೋಣ...


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...