ಸಾರೋಟು ಹುಡುಗ

Posted by ಮಂದಾರ ಕೆ.ಆರ್ on 26-Nov-2017
ಅದ್ಯಾಕೊ ಅಂದಿನ ದಿನ ತುಂಬಾ ಆಯಾಸಕರವಾಗಿತ್ತು...ಬೆಂಗಳೂರಿನ ಟ್ರಾಫಿಕ್ಕಿನ ದೆಸೆಯಿಂದ ಬಸ್ಸು ಹತ್ತಿ ಕೂತು ೨ ತಾಸಿನ ನಂತರ ಮನೆ ಸೇರಿದ್ದೆ.ಮನೆಯ ಒಳ ಹೊಕ್ಕಂತೆಯೇ ಅಗ್ನಿಸಾಆಆಆಆಆಆಆಆಆಕ್ಷಿ ಎಂಬ ರಾಗ ಜೋರಾಗಿ ಕಿವಿಗೆ ಬಿದ್ದು ಅದಾಗಲೇ ಶುರುವಾಗಿದ್ದ ನನ್ನ ತಲೆ ನೋವು ಇನ್ನಷ್ಟು ಹೆಚ್ಚಾಗುವಂತೆ ಮಾಡಿತ್ತು. ದರ ದರನೆ ನಡೆದು ಹೇಗೋ ಆ ಧಾರಾವಾಹಿಯ ಹಾವಳಿಯಿಂದ ತಪ್ಪಿಸಿಕೊಂಡು ಉಪ್ಪರಿಗೆಯ ಮೇಲಿದ್ದ ನನ್ನ ಕೋಣೆ ಸೇರಿದೆ. ಆದಾಗಲೇ ಹಾಸಿಟ್ಟಿದ್ದ ಚಾಪೆಯನ್ನು ನೋಡಿ ಮನಸ್ಸಿಗೆ ತುಸು ನೆಮ್ಮದಿಯಾಯಿತು...ಚಾಪೆಯ ಮೇಲೆ ಕುಳಿತು ಹಾಗೆ ಗೋಡೆಗೆ ಒರಗಿ ಸುಧಾರಿಸಿಕೊಳ್ಳುತ್ತಿದ್ದೆ.ತಲೆನೋವು ಸರಿ ಹೋಗುವ ಯಾವ ಸೂಚನೆಯೂ ಸಿಗಲಿಲ್ಲ..ಅಲ್ಲೆ ಪಕ್ಕದಲ್ಲಿದ್ದ ದಿಂಬು ತಲೆಯ ಕೆಳಗಿಟ್ಟು ಮಲಗಿದೆ..ಮಲಗಿ ೫ ನಿಮಿಷ ಕಳೆದಿತ್ತೋ ಇಲ್ಲವೋ ತಂಗಿ ಮಾನಸ ಬಂದು ರೂಮಿನ ದೀಪ ಹಚ್ಚಿ ’ಊಟ ತಯಾರಿದೆ..ಊಟ ಮಾಡಿ ಮಲಗಬಾರದೇ’ ಎಂದಳು..ನಮ್ಮ ಮನೆಯಲ್ಲಿ ಎಲ್ಲರೂ ಒಟ್ಟಿಗೆ ನೆಲದ ಮೇಲೆ ಕುಳಿತು ಊಟ ಮಾಡಿ ರೂಢಿ.ಅದೆಷ್ಟೇ ಹೊತ್ತಾದರೂ ಎಲ್ಲರೂ ಮನೆಗೆ ಬರುವವರೆಗೆ ಕಾದು ಊಟ ಮಾಡುವುದು ಮೊದಲಿನಿಂದ ಅಭ್ಯಾಸ..ಅಂದು ನಾನೇ ಕೊನೆಯವಳಾಗಿ ಬಂದದ್ದರಿಂದ ಊಟ ಮಾಡಲು ಎಲ್ಲರೂ ನನ್ನನ್ನೇ ಕಾಯುತ್ತಿದ್ದರು. ಹೀಗಿರುವಾಗ ಊಟ ಮಾಡದೇ ಮಲಗಿದರೆ ಚೆನ್ನಾಗಿರುವುದಿಲ್ಲ ಎಂದೆನಿಸಿ ಆಫೀಸಿಗೆ ತೊಟ್ಟಿದ್ದ ಬಟ್ಟೆಯಲ್ಲೇ ಹೋಗಿ ಊಟಕ್ಕೆ ಕುಳಿತೆ. ಎದುರಿಟ್ಟಿದ್ದ ತಟ್ಟೆಯಲ್ಲಿ ಕಂಡ ನನ್ನ ಮುಖ ಆಯಾಸದಿಂದ ಕೂಡಿತ್ತು. ಚೂರು ಮೊಸರನ್ನ ತಿಂದು ಊಟದ ನಂತರ ನಾನು ಮಾಡಬೇಕಿದ್ದ ಕೆಲಸಗಳನ್ನೆಲ್ಲಾ ಮಾನಸಳ ಪಾಲಿಗೆ ಬಿಟ್ಟು ಮತ್ತೆ ನನ್ನ ಕೋಣೆ ಸೇರಿದೆ.

ಹಾಸಿಗೆ ಹಾಸಿ , ಹಣೆಯಲ್ಲಿದ್ದ ಬಿಂದಿಯನ್ನು ಕನ್ನಡಿಯ ಮುಖಕ್ಕೆ ಒತ್ತಿ, ಕೂದಲ ಮದ್ಯದಲ್ಲಿದ್ದ ಕ್ಲಿಪ್ ತೆಗೆದು ಕಿಟಕಿಯ ಬದಿಗಿಟ್ಟು ,ಅನಾಥವಾಗಿ ಬಿದ್ದಿದ್ದ ನನ್ನ ಮೊಬೈಲನ್ನು ಚಾರ್ಜರಿಗೆ ಸೆಕ್ಕಿಸಿ ಮಲಗಿದೆ...ಅಷ್ಟರಲ್ಲಾಗಲೇ ಫೋನು ರಿಂಗಣಿಸಿತು...ಅದು ಅಪರೂಪಕ್ಕೊಮ್ಮೆ ನನ್ನ ನೆನೆಸಿಕೊಳ್ಳುವ ಚಿಕ್ಕಮ್ಮನದ್ದಾಗಿತ್ತು. ಇನ್ನೇನು ಫೋನು ಎತ್ತಿ ಮಾತಾಡಬೇಕು ಅಷ್ಟರಲ್ಲಾಗಲೇ ಕರೆ ಸ್ಥಗಿತಗೊಂಡಿತು. ನನ್ನ ಬಳಿ ಜಿಯೋ ಸಿಮ್ ಬಂದಾಗಿನಿಂದ ನನ್ನ ಬಳಿ ಮಾತಾಡಬೇಕೆನಿಸಿದಾಗೆಲ್ಲ ಮಿಸ್ ಕಾಲ್ ಕೊಡುವುದು ಚಿಕ್ಕಿಗೆ ಅಭ್ಯಾಸವಾಗಿ ಹೋಗಿತ್ತು.ಅವಳ ಮನಸ್ಸಿಗೆ ಬೇಸರಿಸುವುದು ಬೇಡ ಎಂದೆನಿಸಿ ಅವಳ ನಂಬರ್ ಗೆ ಫೋನಾಯಿಸಿದೆ. ಊರಿನ ಎಲ್ಲಾ ವಿಷಯವನ್ನೂ ಒಂದೇ ಉಸಿರಿಗೆ ಹೇಳಿ ಮುಗಿಸಿಬಿಟ್ಟಳು. ಅವಳ ಕಥೆಗಳನೆಲ್ಲಾ ಕೇಳಿ ಮುಗಿಸುವಾಗಲೇ ಅರ್ಧ ಗಂಟೆಯಾಗಿ ಹೋಗಿತ್ತು.

ಚಿಕ್ಕಿಯ ಬಳಿ ಮಾತಾಡಿ ಮನಸು ಸ್ವಲ್ಪ ಹಗುರಾಗಿದ್ದರಿಂದಲೋ ಏನೋ ನಿದ್ದೆಯ ಮಂಪರು ಕಡಿಮೆಯಾಗಿತ್ತು..ಹಾಸಿಗೆಯಿಂದ ಎದ್ದು, ಚಾರ್ಜರ್ ಗೆ ಸಿಕ್ಕಿಸ್ಸಿದ್ದ ಮೊಬೈಲು ಹಿಡಿದು ಮಹಡಿಯ ಮೇಲ್ಚಾವಣಿಗೆ ಹೋದೆ. ಅಲ್ಲೇ ಇದ್ದ ಹಾಸು ಕಲ್ಲಿನ ಮೇಲೆ ಕುಳಿತು ರಸ್ತೆಯ ಕಡೆ ಕಣ್ಣಾಯಿಸಿದೆ.. ಪಕ್ಕದ ಮನೆಯ ಹೆಂಗಸು ತನ್ನ ಮಗುವಿಗೆ ಚಂದಮಾಮ ತೋರಿಸಿ ಊಟ ಮಾಡಿಸುತ್ತಿದ್ದದ್ದು ಕಾಣಿಸಿತು.ನಾನೂ ಕೂಡ ಒಮ್ಮೆ ತಲೆಯೆತ್ತಿ ಆಕಾಶ ನೋಡಿದೆ. ತಾರೆಗಳ ಮಡಿಲಲ್ಲಿ ಚಂದ್ರ ಹಾಯಾಗಿ ಆಡುತ್ತಿರುವುದು ಕಾಣಿಸಿತು..ಈ ಚಂದ್ರ ಅದೆಷ್ಟು ಪರಮ ಸುಖಿ ಎಂದು ಯೋಚಿಸುತ್ತಿರುವಾಗಲೇ ನನ್ನ ಮೊಬೈಲ್ ಸಂದೇಶ ಬಂದಿರುವ ಸೂಚನೆ ನೀಡಿತು..ಆಕಾಶ ನೋಡಿ ಮನಸ್ಸು ಸ್ವಚ್ಚಂದವಾಗಿರುವಾಗ, ನಿಜವಾಗಿಯೂ ನನ್ನ ಮೊಬೈಲಿಗೆ ಬಂದಿರುವ ಸಂದೇಶ ಓದಬೇಕೇ ಎನ್ನುವ ಅನುಮಾನ ಕಾಡಿತು.ಆಫೀಸಿ ನ ಕೆಲಸದ ಸಂದೇಶವಾಗಿದ್ದರೆ ಎಂಬ ಭಯ..ಆದರೆ ಈ ಭಯ ಮರೆಯಾಗುವ ಮುನ್ನವೇ ಸಂದೇಶ ಯಾರದಿರಬಹುದು, ಯಾರದಾಗಿದ್ದರೆ ಚೆನ್ನ ಎಂದೆಲ್ಲಾ ನನ್ನ ಮನಸ್ಸು ಊಹಿಸ ತೊಡಗಿತು. ಗೆಳತಿಯರು ಪ್ಲಾನ್ ಮಾಡುತ್ತಿದ್ದ ಪ್ರವಾಸ ದ ಬಗ್ಗೆ ಇರಬಹುದೇ...ಅಥವಾ ಇತ್ತೀಚೆಗೆ ಪರಿಚಯವಾದ ಸಮಾನ ಅಭಿರುಚಿಯುಳ್ಳ ಗೆಳೆಯನದಿರಬಹುದೇ...ಅಥವಾ ನಾನು ಯಾವುದೋ ಕಾರ್ಯಕ್ರಮದ ಆಡಿಷನ್ ಗೆಂದು ಹಾಡಿ ಕಳಿಸಿದ್ದ ಹಾಡು ಆಯ್ಕೆಯಾಗಿರುವ ಸಂದೇಶವೇ...ಹೀಗೇ ಮನಸ್ಸು ಬರೀ ತನಗಿಷ್ಟವಾದದ್ದನ್ನು ಮಾತ್ರವೇ ಆಲೋಚಿಸುತ್ತಿತ್ತು...ಆದರೂ ತನಗಿಷ್ಟವಿಲ್ಲದ ಯಾವುದೋ ಸಂದೇಶವಾಗಿದ್ದರೆ ಎಂಬ ಭಯದಿಂದ ಸಂದೇಶ ಓದದೇ ಮೊಬೈಲು ಪಕ್ಕಕ್ಕಿಟ್ಟು ಮತ್ತೆ ಆಕಾಶ ನೋಡುವ ಹಳೇ ಕಾಯಕದಲ್ಲಿ ತೊಡಗಿದೆ.

ಕಪ್ಪು ಆಕಾಶದ ತುಂಬಾ ತಾರೆಗಳು ಪುಂಜ ಪುಂಜವಾಗಿ ಕುಳಿತು ಕುಶಲೋಪರಿಯಲ್ಲಿ ತೊಡಗಿದ್ದವು..ಚಂದ್ರನಂತೂ ಈ ಕ್ಷಣ ಈ ಪುಂಜದ ಬಳಿ ಇದ್ದರೆ ಇನ್ನೊಂದು ಕ್ಷಣಕ್ಕೆ ಮತ್ತೊಂದು ಪುಂಜದ ಬಳಿ ಓಡಿರುತ್ತಿದ್ದನು.ಮದ್ಯ ಎಲ್ಲೋ ಬಿಳಿ ಮೋಡಗಳ ಗುಂಪೊಂದು ಬರ ಬರನೆ ಓಡುತ್ತಿತ್ತು..ಇದೆಲ್ಲವನು ನೋಡು ನೋಡುತ್ತಿದ್ದಂತೆ ಆಕಾಶದಲ್ಲೊಂದು ಸಾರೋಟು ಕಾಣಿಸಿತು...ಚಿನ್ನದ ಸಾರೋಟು...ಮುಂದೆ ಬಿಳಿ ಕುದುರೆಗಳು....ಸಾರೋಟು ನನ್ನೆಡೆಗೇ ಬರುತ್ತಿದೆ ಎನಿಸುತ್ತಿತ್ತು...ಒಮ್ಮೆ ಕೈಮುಟ್ಟಿ ನೋಡಿದೆ...ಕನಸಲ್ಲ...ನಿಜವಾಗಿಯೂ ಏನೋ ನಡೆಯುತ್ತಿದೆ ಎಂದನಿಸಿತು...ಕುತೂಹಲದಿಂದ ಸಾರೋಟನ್ನೇ ನೋಡುತ್ತಿದ್ದೆ...ಸಾರೋಟು ನನಗೆ ಹತ್ತಿರವಾಗುತ್ತಿದ್ದಂತೆ ಶಂಖದ ಶಬ್ಧ ಕೇಳತೊಡಗಿತು..ಸಾರೋಟಿನೊಳಗೆ ಯಾರೋ ಯುವಕ ಇರುವುದು ಗಮನಕ್ಕೆ ಬಂದಿತಾದರೂ ಮುಖ ಇನ್ನೂ ಸರಿಯಾಗಿ ಕಾಣುತ್ತಿರಲಿಲ್ಲ..ನನ್ನ ಜೀವನದಲ್ಲಿ ಯಾವುದೋ ಒಂದು ಕಾರಣಕ್ಕಾಗಿ ನನ್ನ ಮನಸಲ್ಲಿ ಸ್ಥಾನ ಪಡೆದ ಎಲ್ಲರ ಮುಖವೂ ಒಂದಾದ ಮೇಲೊಂದರಂತೆ ಆ ಯುವಕನ ಮುಖವಾಗಿರಬಹುದೆಂದು ಮನಸ್ಸು ಅದಾಗಲೇ ಕಲ್ಪಿಸಿಕೊಳ್ಳತೊಡಗಿತ್ತು.ಅಷ್ಟರಲ್ಲಾಗಲೇ ಸಾರೋಟು ನನ್ನೆದುರು ಬಂದು ನಿಂತಿತ್ತು... ಬಿಳಿ ಬಣ್ಣದ ಶರ್ಟ್-ಪಂಚೆ ತೊಟ್ಟಿದ್ದ ಯುವಕನೊಬ್ಬ ಸಾರೋಟಿನಿಂದ ಇಳಿದು ನನ್ನ ಮುಂದೆ ಬಂದು ನಿಂತ...ಎಂಥಹವರನ್ನೂ ಆಕರ್ಷಿಸುವ ತೇಜಸ್ಸು ಅವನ ಮುಖದಲ್ಲಿ ಹೊಳೆಯುತ್ತಿತ್ತು..ಸಣ್ಣಗೊಂದು ನಗೆ ಬೀರಿ ನನ್ನ ಕೈ ಹಿಡಿದ. ನನ್ನ ಇಡೀ ದೇಹ ಕಂಪಿಸಿತು. ನನ್ನ ಇಡೀ ಜೀವನದಲ್ಲಿ ಇಂತಹ ಸುಖಾನುಭೂತಿಯ ಸ್ಪರ್ಶ ನಾನೆಂದೂ ಅನುಭವಿಸಿರಲಿಲ್ಲ..ಆತ ನನ್ನನ್ನು ಸಾರೋಟಿನೊಳಗೆ ಕುಳ್ಳಿರಿಸಲು ಮುಂದಾದ.ಒಂದು ಕ್ಷಣವೂ ಯೋಚಿಸದೇ ಅವನ ಹಿಂದೆಯೇ ನಡೆದು ಸಾರೋಟಿನೊಳಗೆ ಕುಳಿತೆ..ಇಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರಿಯುವಷ್ಟರಲ್ಲೇ ಸಾರೋಟು ಪುನಃ ಆಕಾಶದ ಕಡೆ ಹೊರಟಿತ್ತು..ಒಮ್ಮೆ ಸಾರೋಟಿನಿಂದ ಹೊರಗಿಣುಕಿ ನೋಡಿದೆ..ಅಪ್ಪ-ಅಮ್ಮ-ಮಾನಸ ಎಲ್ಲರೂ ನನ್ನ ಬೀಳ್ಕೊಡುತ್ತಿದ್ದಾರೆ..ಅಮ್ಮ-ಮಾನಸ ಇಬ್ಬರೂ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ..ಅರೆ ನಾನದೆಲ್ಲಿಗೆ ಹೋಗುತ್ತಿದ್ದೇನೆ..? ಯಾರಿವನು ? ಇವ ನನ್ನನ್ನು ಅದೆಲ್ಲಿಗೆ ಕರೆದೊಯ್ಯುತ್ತಿದ್ದೇನೆ..ನನಗಾಗಿ ಅದ್ಯಾವ ಊರು ಕಾಯುತ್ತಿದ್ದೆ...ಇಷ್ಟು ದಿನ ನನ್ನ ಜೊತೆಗಿದ್ದದ್ದೆಲ್ಲಾ ಏನಾಯಿತು...ಇಷ್ಟು ದಿನ ಇದ್ದದ್ದೆಲ್ಲಾ ನಶ್ವರವೇ...ನಿಜವಾಗಿಯೂ ನನ್ನ ಬದುಕು ಯಾವುದು..?ಇಷ್ಟು ದಿನ ಕಳೆದದ್ದೇ ನನ್ನ ಬದುಕೇ ಅಥವಾ ಇನ್ನು ಮುಂದೆ ಕಳೆಯಬೇಕಾಗಿರುವುದು ನನ್ನ ಬದುಕೇ...ಹೀಗೆ ಹಲವಾರು ಪ್ರಶ್ನೆಗಳನ್ನು ಹೊತ್ತು ಸಾರೋಟಿನ ಮೂಲೆಯಲ್ಲಿದ್ದ ಕನ್ನಡಿ ನೋಡಿದೆ...ಅದೇ ಆಯಾಸದ ಮುಖ ಕಾಣಿಸಿತು... ನನ್ನ ಅಸ್ಥಿತ್ವವನ್ನು ನಾನೇ ಹುಡುಕುವ ಬಯಕೆಯಾಯಿತು...


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...