ತಂಬೂರಿ...!

Posted by ಶ್ರೀನಿಧಿ ವಿ.ನಾ. on 04-Dec-2017
ಸಂಜೆಯ ಆಕಾಶ ಇನ್ನೇನು ಕರಗಿ ಭೂಮಿಗೆ ನೀರಾಗಿ ಹರಿಯುತ್ತೇನೋ ಅನ್ನುವಷ್ಟು ಪೇಲವವಾಗಿತ್ತು. ಮನೆಗೆ ಬಂದವನೇ ಟೆರೆಸ್ ಮೇಲೆ ಬಂದಿದ್ದೆ, ಅಲ್ಲಿ ಕೂತಿರ್ತಾಳೆ ಅಂತ ಗೊತ್ತು ನಂಗೆ. ಅದ್ಯಾವತ್ತೋ ಕೇಳಿದ ಹಾಡಿಗೆ ತಲೆದೂಗುತ್ತ ಕೂತವಳ ತೊಡೆಯ ಮೇಲೆ, ಎದೆಯ ತಬ್ಬಿ ಕುತ್ತಿಗೆಯ ಮೂಲಕವಾಗಿ ತಲೆಯ ಮೇಲೆ ಆಕಾಶದತ್ತ ಮುಖಮಾಡಿದ್ದ ತಂಬೂರವಿತ್ತು. ಭರ್ತಿ ಒಂದು ಘಳಿಗೆ ನನ್ನತ್ತ ಹಾಕಿದ್ದ ಅವಳ ಬೆನ್ನನ್ನೇ ದಿಟ್ಟಿಸುತ್ತಾ ನಿಂತೆ."ಶ್ರೀ, ನೀ ಬಂದಿದ್ದು ಗೊತ್ತಾಯ್ತು ನಂಗೆ!" ಮೆತ್ತಗೆ ತಲೆಯನ್ನ ಮಾತ್ರ ಹಿಂದಕ್ಕೆ ಚೂರು ವಾಲಿಸಿ ಪಿಸುಗುಟ್ಟಿ ನಕ್ಕಳು!ಒತ್ತರಿಸಿ ಬಂದ ಕಣ್ಣಂಚಿನ ನೀರಿಗೊಂದು ಮುಗುಳ್ನಗೆಯ ಬಣ್ಣ ಹಚ್ಚಿ, ಅವಳು ಕೂತಿದ್ದ ಟೆರೇಸ್ ಮೇಲಿನ ಬಟ್ಟೆ ಒಗೆಯುವ ಕಲ್ಲಿನತ್ತ ಸಾಗಿ, ಹಿಂಬದಿಯಿಂದ ಅಪ್ಪಿ, ಅವಳ ಕೂದಲಿನಲ್ಲಿ ನನ್ನ ನಾನು ಕಳೆದುಕೊಂಡೆ. ಪ್ರೀತಿಯೆಂದು ಕನವರಿಸುವುದಕ್ಕೂ ಮೊದ್ಲೇ ಎದೆಯ ತುಂಬಾ ಒಲವ ತಂದು ಉಳಿಮೆ ಮಾಡಿ ಬಿತ್ತಿದವಳು ನನ್ನವಳು. ಪ್ರತಿ ಬಾರಿ ಅವಳತ್ತ ಸಾರುವಾಗಲೂ ಎದೆಯೊಳಗೆ ಅದೊಂದು ನೆಮ್ಮದಿ, ಸಾವಿರ ಅಲೆಗಳನ್ನು ಪ್ರತೀ ಕ್ಷಣವೂ ಭೂಮಿಯತ್ತ ತಳ್ಳುವ ಸಮುದ್ರದಂತೆ ಅವಳು, ನಾನು ಅವಳನ್ನು ಸೇರುವ ಹೆಸರಿಲ್ಲದೊಂದು ನದಿಯಷ್ಟೇ.ಇದೊಂದು ಕ್ಷಣ ನನ್ನ ನೆಚ್ಚಿನದು, ಅಪ್ಪಿಕೊಂಡ ಮೊದಲೆರಡು ಕ್ಷಣಗಳ ಸಣ್ಣ ಸಹಜ ಹಿಂಜರಿಕೆಯ ನಂತರ ದೇಹಗಳು ಪರಸ್ಪರ ಒಂದನ್ನೊಂದು ಗುರುತಿಸಿಕೊಂಡು, ಕಣಕಣವೂ ಅರಳಲು ಶುರು ಮಾಡುತ್ತೆ. ಅದೊಂದು ಧ್ಯಾನದ ಸ್ಥಿತಿ, ಅಲ್ಲಿ ಕಾಮದ ವಾಂಛೆಗಳಿಲ್ಲ, ಹುಚ್ಚುಕುದುರೆಯಂತೆ ಓಡುವ ಆಸೆಗಳಿಲ್ಲ, ಅಲ್ಲಿ ಒಬ್ಬರನ್ನೊಬ್ಬರು ಗುರುತಿಸಿಕೊಂಡ ಸಮಾಧಾನವಿದೆ, ಅಷ್ಟೇ! ಪರಸ್ಪರ ಮನದೊಳಗೆ ಓಡಾಡುವ ವಿಚಾರಗಳ ವಿಷಯದಲ್ಲಿ ಬೆತ್ತಲಾದಮೇಲೆ ಉಳಿದ್ದಿದ್ದೆಲ್ಲಾ ಸಹಜವೆನಿಸುತ್ತೆ. ಮೂಗಿನೊಳಗೆ ಅವಳು ಬೆಳಿಗ್ಗೆಯೆಲ್ಲೋ ಮಿಂದಾಗ ಹಚ್ಚಿದ್ದ ಶೀಗೆಕಾಯಿಯ ಘಮ, ಹಿಂದಿನಿಂದ ಅವಳ ಮುಚ್ಚಿದ ಕಣ್ಣಿನ ಸಣ್ಣದೊಂದು ತುಣುಕನ್ನು ಕಣ್ತುಂಬಿಕೊಂಡು, ಅವಳು ತಬ್ಬಿದ್ದ ತಂಬೂರದ ತಂತಿಯಂದನ್ನು ಸಣ್ಣಗೆ ಮೀಟಿದೆ, ಅವಳ ಇಡೀ ದೇಹವೊಮ್ಮೆ ತಂತಿಯಂತೆ ಕಂಪಿಸಿತು. ಕಣ್ತೆರೆದಾಗ ಅವಳ ಮುಖದಲ್ಲೊಂದು ಮಂದಹಾಸ!"ಯಕ್ಕೋ ಇಲ್ಲೇ ನಿದ್ದೇ ಮಾಡ್ಲಿಕ್ ಹತ್ತೀಯಾ, ಪಕ್ಕದ ಮನೀ ಹುಡ್ಗುರೂ ಟೆರೇಸ್ ಮ್ಯಾಕೆ ಬಂದೂ ಪ್ರೀ ಶೋ ನೋಡೀ ಶಾನೇ ಮಜಾ ತಗಳ್ಲಿಕ್ ಹತ್ಯಾವ, ಬಡ್ದೀಹೈದ್ರು...!"

ಅರೆಬರೆ ಭಾಷೆಯಲ್ಲಿ, ಒಟ್ರಾಷಿ ಹೇಳಿದ ಮಾತುಗಳನ್ನ ಕೇಳಿ ಅಲೆಅಲೆಯಾಗಿ ನಕ್ಕಳು ಆಕೆ. ನಗುವಾಗ ಸಣ್ಣಗೆ ಝೇಂಕರಿಸಿದ್ದು ಅವಳನ್ನು ತಬ್ಬಿದ್ದ ತಂಬೂರ. ಅವಳ ತುಟಿಯ ಕೆಳಗಿನ ಮಚ್ಚೆಯನ್ನೊಮ್ಮೆ ತೋರುಬೆರಳಲ್ಲಿ ಸುಮ್ಮನೇ ಮುಟ್ಟಿ, ಮನದೊಳಗೇ ಹಿಗ್ಗುತ್ತಾ ಕೂತವನ ಪಕ್ಕ ಕೂತು, ಖಾಸಾ ಗೆಳತಿಯಂತೆ ಹೆಗಲ ಮೇಲೆ ಕೈ ಹಾಕಿ, ನಾ ನೋಡುತ್ತಿದ್ದ ದಿಗಂತದತ್ತ ತಾನೂ ಕಣ್ಣು ನೆಟ್ಟಿದ್ದಳು."ಶ್ರೀ ನಿಂಗೆ ಜೀವನದಲ್ಲಿ ಅತ್ಯಂತ ಹೆಚ್ಚು ಬೇಜಾರಿನ ವಿಷ್ಯ ಏನೋ?!"

ಅವಳ ನೋಟ ಇನ್ನೂ ದಿಗಂತದತ್ತ, ನಾನು ಒಮ್ಮೆ ಆಕಾಶದಿಂದ ನೋಟ ಕಿತ್ತು ಅವಳತ್ತ ನೋಡಿ, ಮತ್ತೆ ಏನೂ ಇಲ್ಲದ ಬೋಳು ಆಕಾಶದತ್ತ ಮುಖ ಮಾಡಿದೆ.ಅರೆಕ್ಷಣದ ನಂತರ ಮಾತಾಡಲು ಬಾಯಿ ತೆರೆದಾಗ ದನಿ ಯಾಕೋ ಪಸೆರಹಿತವಾಗಿತ್ತು. "ಜಗತ್ತಿನಲ್ಲಿ ಏನು ಬೇಕು ಗೊತ್ತಾ ಎಲ್ಲರೊಳಗೂ? ಸಹಾನುಭೂತಿ! ಪ್ರೀತಿ ತಾನಾಗೇ ಬರುತ್ತೆ. ಮತ್ತೊಬ್ಬರ ಜಾಗದಲ್ಲಿ ತಮ್ಮನ್ನು ತಾವು ಕಲ್ಪಿಸಿಕೊಂಡು, ಅವರನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಎಲ್ಲರಿಗೂ ಇರಬೇಕು. ಅನುಭೂತಿಯಲ್ಲಿ ಎರ್ಡ್ ತರ, ಒಂದು ಸರಳ ವಿಷಯಗಳಲ್ಲಿ ಅಂದ್ರೆ ಎಕ್ಸಾಂಪಲ್ಲು ಜ್ವರ ಗಿರ ಬಂದಾಗ. ಬೇರೆಯವರ ದೇಹದಲ್ಲಿ ಏನಾಗ್ತಿದೆ ಅಂತ ಗೊತ್ತಾಗತ್ತೆ ನಿಂಗೆ, ಯಾಕಂದ್ರೆ ನಿಂಗೆ ಕೂಡ ಒಂದಲ್ಲ ಒಂದು ದಿನ ಜ್ವರ ಬಂದೇ ಬಂದಿರತ್ತೆ, ಹಾಗಾಗಿ ನೀನು ಅವ್ರಲ್ಲಿ ನಿನ್ನನ್ನ ಕಂಡ್ಕೋತಿಯಾ, ಹಂಗಾಗಿ 'ನಂಗೆ ನಿನ್ನ ನೋವು ಅರ್ಥ ಆಗತ್ತೆ' ಅಂತ್ಯಾ. ಇನ್ನೊಂದು ತರದ ಅನುಭೂತಿ ಅಂದ್ರೆ ಬೇರೆಯವರ ನೋವು ನಿಂಗೆ ಒಂದಕ್ಕಿ ಕಾಳಿನಷ್ಟೂ ಅರ್ಥ ಆಗ್ತಿರೋಲ್ಲ. ಯಾಕಂದ್ರೆ ನೀನು ಅಂತ ಸ್ಥಿತಿಯನ್ನ ಯಾವತ್ತೂ ದಾಟಿ ಬಂದಿರೋದಿಲ್ಲ. ಆಗ ಅಂತಾ ಪರೀಸ್ಥಿತಿಯಲ್ಲೂ ಅವ್ರನ್ನ ಅರ್ಥ ಮಾಡ್ಕೋಳೋದಕ್ಕೆ ಇಚ್ಚೆಯನ್ನು ತೋರ್ಸ್ಬೇಕು ಅದು ಅನುಭೂತಿ. ನನ್ನ ಭಾಗ್ಯ ಅಂದ್ರೆ ನೀನು ಇವಕ್ಕೆಲ್ಲಾ ಜೀವಂತ ಉದಾಹರಣೆ! ಇಡೀ ವಿಶ್ವಕ್ಕೆ ಪ್ರೀತಿಯನ್ನು ಹಂಚುವ ಸಾಮರ್ಥ್ಯ ಇದೆ ನಿಂಗೆ. ಇಡೀ ಅಂತರಿಕ್ಷವನ್ನೇ ತಬ್ಬುವ ಬಯಕೆ ನಂದು, ನಿನ್ನ ಬಿಗಿದಪ್ಪಿ ನನ್ನ ಬಾಹುಗಳೊಳಗೆ ನಕ್ಷತ್ರಗಳ ನೆರಳನ್ನ ಕಾಣ್ತೀನಿ ನಾನು. ಬೇಜಾರಿನ ವಿಷ್ಯ ಏನು ಗೊತ್ತಾ? ಜಗತ್ತಲ್ಲೀ ಎಷ್ಟೋ ಜನ ಪ್ರೀತಿಯಿಲ್ಲದೇ ಬದುಕ್ತಿದಾರೆ, ಅವರು ಹುಟ್ಟಿ ಬೆಳೆದು, ಮದುವೆಯಾಗಿ, ಮಕ್ಕಳಾಗಿ, ಮುಪ್ಪು ಅಪ್ಪ್ಕೊಂಡು ಸಾಯೋಷ್ಟು ವಯಸ್ಸಾದ್ರೂ ಅವರ ಎದೆಯಲ್ಲಿ ಪ್ರೀತಿಯ ಹೂವು ಮಾತ್ರ ಅರಳಿರೋದೇ ಇಲ್ಲ. ಎಲ್ಲರ ಹೃದಯ ಕೂಡ ಫಲವತ್ತಾದ ಭೂಮಿ, ಅಲ್ಲಿ ಪ್ರೀತಿಯನ್ನ ಬಿತ್ತಬಹುದು, ಮಮತೆಯ ಮರವನ್ನ ಬೆಳೆಸ್ಬಹುದು, ಎಲ್ಲದ್ಕಿಂತ ಜಾಸ್ತಿ ಅನುಭೂತಿಯನ್ನ ಅರಳಿಸ್ಬಹುದು. ಆದ್ರೆ 'ಹರ್ ಕಿಸಿಕೋ ನಹಿ ಮಿಲ್ತಾ, ಯಹಾ ಪ್ಯಾರ್ ಜಿಂದಗೀ ಮೇ...!' ಅದು ಬೇಜಾರಿನ ವಿಷ್ಯ ಕಣೇ ಹುಡ್ಗೀ."ಒದ್ದೆಯಾಗಿದ್ದ ಕಣ್ಣಂಚನ್ನ ತನ್ನ ಕಿರುಬೆರಳಿನ ಪಾಲಿಗೊಪ್ಪಿಸಿ, "ಒಂದು ವಾಕ್ಯದಲ್ಲಿ ಉತ್ತರಿಸಿ ಅಂದ್ರೆ ಒಂದು ಪೂರ್ತಿ ಪ್ರಬಂಧನೇ ಬರ್ದು, ಪಿಎಚ್ಡಿ ಮಾಡಿದೋರ್ ತರಾ ಭಾಷಣನೂ ಕೊಟ್ಟ್ಬಿಡ್ತ್ಯಾ ಶ್ರೀ ನೀನು, ಅದ್ಕೇನೆ ನಿಂಗೆ ಭರ್ತಿ ಮಾರ್ಕ್ಸ್ ಬರ್ತಾ ಇತ್ತು, ಐ ಆಮ್ ಪ್ರೌಡ್ ಆಫ್ ಯೂ ಮಚೀ" ಅನ್ನುತ್ತಾ ಬೆನ್ನ ಮೇಲಿದ್ದ ಕಯ್ಯನ್ನೆತ್ತಿ ಒಮ್ಮೆ ತಟ್ಟಿದಳು. ಗಾಳಿ ನಿನ್ನೆಗಿಂತ ಇವತ್ತು ಜಾಸ್ತಿ ಹಗುರಾಗಿ ಕಾಣ್ತಿತ್ತು ಆ ಕ್ಷಣದಲ್ಲಿ ನಂಗೆ! ನಾಳೆ ಇನ್ನೂ ಜಾಸ್ತಿ ಹಗುರಾಗಲಿದೆ ಅಂತನೂ ಗೊತ್ತು ನಂಗೆ!ನನ್ನ ಕಿವಿಯ ಕೆಳಗೊಮ್ಮೆ ತುಟಿಯನ್ನೊತ್ತಿ, ಕೆಳಗೆ ಅವಳಿಂದ ಸಂಗೀತ ಕಲಿಯಲು ಕಾಯುತ್ತಿದ್ದ ಪುಟಾಣಿ ಮಕ್ಕಳ ಬಳಿ ಓಡಿದವಳ ಕಾಲಲ್ಲಿ ಹಾಡಿದ ಗೆಜ್ಜೆಯ ಗುಂಗಲ್ಲಿ ಕೂತವನನ್ನ ಎಬ್ಬಿಸಿದ್ದು ವಿಶ್ವನ ಕೀರಲು ದನಿಯ ಕಿರುಚಾಟ! ಈಗಷ್ಟೇ ಎದ್ದಿರಬೇಕು. ಅಮ್ಮ ಆಗಾಗ ಆಡ್ಕೋತಿರ್ತಾಳೆ, "ನಿನ್ ತರ್ಕೇಯಾ ಕಿರ್ಚಾಡುತ್ತೆ ನಿನ್ ಮಾಣಿ, ನಿನ್ ಹೆಂಡ್ತಿಗೆ ಎರ್ಡೆಡ್ ಮಕ್ಳನ್ನ ಸಂಭಾಳಿಸೋ ಜವಾಬ್ದಾರಿ, ಪಾಪ" ಅಂತ. ಕೆಳಗೆ ಓಡಿ ವಿಶ್ವನ್ನ ತೆಕ್ಕೆಯೊಳಗೆ ಎತ್ತಿಕೊಂಡು ಮೆಟ್ಟಿಲೇರಿ ಬರುವ ನನ್ನನ್ನ ನೋಡಿ ನಕ್ಕ ಅವಳ ಮುಗುಳುನಗೆ, ನನ್ನ ಬೆನ್ನನ್ನೂ ನಾಚಿಸುವಂತಿತ್ತು! ಚಂದ್ರ ಇನ್ನೇನು ಮೋಡದಪ್ಪುಗೆಯ ಸೆರಗಿನಿಂದ ಹೊರಬರುತ್ತಿದ್ದ ಆಗಸದಲ್ಲಿ!

ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...