ದೇವರನಾಡಿನಲ್ಲಿ ಜೇನುತುಪ್ಪದಂಗಡಿಯ ಒಡತಿ ನನ್ನಮ್ಮ!

Posted by ಶ್ರೀನಿಧಿ ವಿ.ನಾ. on 23-Sep-2016
ಹೇಳಿದ ಸುಳ್ಳುಗಳಿಗೆ,
ನೀ ನನಗಾಗಿ ಕಾದು ಕೂತಿದ್ದಾಗ ಮತ್ತಷ್ಟು ಕಾಯ್ಸಿದ್ದಕ್ಕೆ,
ಒಂದು ಮುಷ್ಟಿ ಕ್ಷಮೆ ಇರಲಿ!

ಸದಾ ಕಾಲ ನಿನ್ನ ಸೆರಗಿನ
ತುದಿ ಹಿಡಿದು ಓಡಾಡಿದವ ನಾ,
ಜಗವೀಗ ವಿಚಿತ್ರ, ಹಿಡಿದು ಓಡಾಡಲು
ಸೆರಗಿನ ತುದಿಯಿದ್ದರೂ
ನನಗೀಗ ಹಮ್ಮು!

ಮಹಿಳಾವಾದವಿಲ್ಲದೇ,
ಸಬಲೀಕರಣಕ್ಕೆ
ಉದಾಹರಣೆಯಾದವಳು ನೀನು!
ನೋವಲ್ಲಿಯೂ
ನನ್ನ ನಾಳೆಗಳ
ಕಂಡ ನಿನಗೆ
ಸಾವಿರ ಇಂದುಗಳು ಮೀಸಲು!

ನಿನ್ನ ಜೀವದ
ಭಾಗವಾಗಿ
ಒಂದಷ್ಟು ಮಾಸ
ನನ್ನ
ಹೊತ್ತಿದ್ದು ನಿಜವಿರಬೇಕು,
ನಿನ್ನ ಹೃದಯ
ಖುಷಿಯಿಂದ ನಕ್ಕಾಗ
ಅದರದೇ ತುಂಡು,
ನನ್ನೆದೆಯಲ್ಲಿ ಮಿಡಿಯೋ
ನನ್ನ ಹೃದಯಕ್ಕೂ
ಎಲ್ಲಿಲ್ಲದ ಸಂಭ್ರಮ!

ಅದ್ಯಾವುದೋ ನದಿ
ಶಾಂತವಾಗಿ ಗಮಿಸಿದಂತೆ,
ನೂರಾರು ಹೂವುಗಳು ಒಟ್ಟಿಗೇ
ನಿಟ್ಟುಸಿರು ಬಿಟ್ಟಂತೆ,
ಬರೀ ನಿನ್ನ ಅಮ್ಮ ಎಂದು
ಉದ್ಘರಿಸಿದಾಗ,
ಎದೆಯೊಳಗೆ ನರ್ತನ!

ಒಬ್ಬಂಟಿಯಾದಗಲ್ಲೆಲ್ಲಾ
ಅಮ್ಮಾ ಎಂದು
ಉದ್ಘರಿಸಿ ಖುಷಿ ಪಡುವೆ!
ನನ್ನ ಸಣ್ಣ ಸಣ್ಣ
ಗೆಲುವಿಗೂ,
ನಿನ್ನ ಕಣ್ತುದಿಯಲ್ಲಿ
ಮಿಂಚುವ ಹೆಮ್ಮೆಯೇ
ನನಗೆ ಸ್ಪೂರ್ತಿಯ ಮೂಲ!

ಬರಿ ಕಣಗಳಿಂದ
ತುಂಬಿಲ್ಲ ನಿನ್ನ ದೇಹ!
ಮಮತೆ, ಮೌನ
ತಾಳ್ಮೆ, ಕನಸು
ಸಣ್ಣ ಆಸೆ
ಹಾಡು
ಇವೆಲ್ಲವೂ ಜೊತೆಯಾಗಿ
ನೀ ಉದ್ಭವಿಸಿದ್ದೆ ಅಮ್ಮ!


ನಿನ್ನೊಳಗೆ
ಉಸಿರಿನ ರೂಪದಲ್ಲಿ
ಹೋಗಿಬರೋ
ಗಾಳಿಯನ್ನೊಮ್ಮೆ ಕೇಳಿನೋಡಮ್ಮ!
ನನ್ನದೊಂದು ಭಾಗ
ಉಳಿದಿರಬೇಕು ನಿನ್ನೊಳಗೆ!
ನಿನ್ನಡೆಗೆ ತುಡಿವ ನನ್ನ ಮನಕ್ಕೆ
ಕಾರಣವು ಅದೇ ಇರಬಹುದು.

ಸುಮ್ಮನೇ ಸಂಜೆಯಲಿ,
ಜಗುಲಿಯ ತುದಿ
ಕೂತು,
ದೂರವಿರೋ ನಮ್ಮಿಬ್ಬರ
ಬಗ್ಗೆ ಯೋಚಿಸುತ್ತಾ,
ಬೆರಳ ತುದಿಯಲ್ಲಿ
ಎಡಗೈ ಮೇಲೆ
ಕಾಣದ ರಂಗೋಲಿ
ಬಿಡಿಸುತ್ತಾ,
ಮುಗುಳ್ನಗುವಿನೊಂದಿಗೆ ನನ್ನ
ನೆನಪಿಸಿಕೊಳ್ಳೋ
ದೇವರನಾಡಿನಲ್ಲಿ
ಜೇನುತುಪ್ಪದಂಗಡಿಯ
ಒಡತಿ ನನ್ನಮ್ಮ!


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...