ಮಲೆನಾಡಿನ ಮಳೆಗಾಲ!

Posted by ಮಂದಾರ ಕೆ.ಆರ್ on 24-Sep-2016
ನಿನ್ನೆ ಅಮ್ಮ ಫೋನು ಮಾಡಿದ್ಲು..ಊರಲ್ಲಿ ತುಂಬಾ ಮಳೆ ಅಂತೆ...ಮಳೆಗಾಲದ ಶುರುಲಿ ಬರಬೇಕಿದ್ದ ಮಳೆ ಇವಾಗ್ ಬರ್ತಿದೆ ನೋಡು ಅಂದ್ಲು...ಅವಳು ಹಾಗೆ ಹೇಳಿ ಫೋನು ಇಟ್ಟಾದ ಮೇಲೆ ನಂಗ್ಯಾಕೋ ನಮ್ಮೂರು ತುಂಬಾ ನೆನಪಾಗ್ತಿದೆ..ನಮ್ಮೂರಿನ ಮಳೆ ಈ ಬೆಂಗಳೂರು ಮಳೆ ತರ ೫-೧೦ ನಿಮಿಷಕ್ಕೆ ಬಂದು ನಿಂತೋಗಲ್ಲ...ಮಳೆ ಬಂತು ಅಂದ್ರೆ ಗುಡುಗು-ಮಿಂಚು-ಮಳೆ ಯ ಜುಗಲ್ಬಂದಿ ಇಡೀ ದಿನ ನಡಿಯುತ್ತೆ...

ಮಳೆ ಬಂದ್ರೆ ಕೊಡೆ(ಛತ್ರಿ )ಗೆ ಪರದಾಡೊ ನಗರದ ನಾಗರಿಕರ ಮದ್ಯೆ ಕೊಡೆ ಇಲ್ಲ್ದೇ ಮನೆ ಹೊರಗೆ ಹೋಗದಿರೋ ನನ್ನ ಅಭ್ಯಾಸ ಮಲೆನಾಡಿನ ಕೊಡುಗೆ ಅಂದ್ರೆ ತಪ್ಪಾಗಲ್ಲ..

ಮಲೆನಾಡಿನ ಮಳೆಯ ಮಜಾನೇ ಬೇರೆ..ಇಲ್ಲಿಯ ಹಾಗೇ ಜೊರು ಮಳೆ ಬಂದ್ರೆ ಕೊಳಚೆ ನೀರು ಮನೇ ಒಳಗೆ ಬರಲ್ಲ..ಬದಲಾಗಿ ಪುಟಾಣಿ ಕಪ್ಪೆ ,ಕೊಂಬು ಇರೋ ಏಡಿ,ಬಣ್ಣ-ಬಣ್ಣದ ಪಾತರಗಿತ್ತಿ ಇವೆಲ್ಲಾ ಮನೆ ಹತ್ರ ಕಾಣೋಕೆ ಸಿಗತ್ತೆ..ಜೊತೆಗೆ ಯಾವುದೋ ಕಾಣದ ಬಿಬ್ರಿ,ಮರಕುಟುಕ,ಕೋಗಿಲೆ ಇವೆಲ್ಲದರ ಚಿತ್ರ-ವಿಚಿತ್ರ ಶಬ್ದನೂ ಕೇಳೋಕೆ ಸಿಗುತ್ತೆ...

ನಾವು ಚಿಕ್ಕೋರಿದ್ದಾಗಂತೂ ಮಳೆಗಾಲ ಅಂದ್ರೆ ಏನೋ ಖುಷಿ..ಬಣ್ಣ-ಬಣ್ಣದ ಛತ್ರಿ,ಆ ಛತ್ರಿ ಮೇಲೆ ನಮ್ಮ ಹೆಸ್ರು..ಅದ್ನ ಹಿಡ್ಕೊಂಡು,ಶಾಲೆಯ ಬ್ಯಾಗು ಹಾಕ್ಕೋಂಡು,ರಸ್ತೆಲಿ ನಡ್ಕೊಂಡು ಹೋಗ್ತಾ ಇದ್ರೆ ಏನೋ ರಾಜ ಕಳೆ ಅನ್ಸ್ತಿತ್ತು..ಆ ರಸ್ತೆ ಮದ್ಯ ನೀರಲ್ಲಿ ಚಪ್ಪಲಿ ಇಟ್ಟು ,ಆ ನೀರನ್ನ ಬಟ್ಟೆ ತುಂಬಾ ಹಾರುಸ್ಕೊಂಡು ಶಾಲೆಗೆ ಹೋದ್ರೇನೇ ಚಂದ..ಬಣ್ಣದ ದೋಣಿ ಮಾಡಿ ನೀರಲ್ಲಿ ಬಿಡೋದು,ದುಂಬಿಯ ರೆಕ್ಕೆಗೆ ದಾರ ಕಟ್ಟಿ ಆಡೋದು,ಮನೆಯ ಛಾವಣಿಯಿಂದ ಬೀಳುವ ನೀರಿಗೆ ಕಟ್ಟೆ ಕಟ್ಟೋದು ಹೀಗೆ ನಾವು ಮಾಡ್ತಿದ್ದ ಕಿತಾಪತಿ ಒಂದಾ ಎರಡಾ.

ನಮ್ಮ ಶಾಲೆ ಅಂತೂ ನದಿ ಪಕ್ಕನೇ ಇದ್ದಿದ್ರಿಂದ ತುಂಬಾ ಜಾಸ್ತಿ ಮಳೆ ಬಂತು ಅಂದ್ರೆ ಶಾಲೆಗೆ ರಜೆ ಗ್ಯಾರೆಂಟಿ...ರಾತ್ರಿ ಪೂರ್ತಿ ಮಳೆ ಬಂದು,ನದಿ ನೀರು ಶಾಲೆ ಹತ್ರ ಬಂದಿರ್ಲಿ ಅಂತ ದೇವರ ಹತ್ರ ಕೇಳ್ಕೊಂಡು ಮಲ್ಕೋತಿದ್ದಿದ್ದು ನಂಗಿನ್ನೂ ಸರಿಯಾಗಿ ನೆನಪಿದೆ...ಬೆಳಿಗ್ಗೆ ಎದ್ದು ಶಾಲೆ ಹತ್ರ ಹೋಗಿ ಮಣ್ಣೆಲ್ಲಾ ಸೇರಿಸಿಕೊಂಡು ದೊಡ್ಡದಾಗಿ ಕಂದು ಬಣ್ಣದಲ್ಲಿ ಹರಿಯೋ ನದಿನ ನೋಡೋದೇ ಏನೋ ಖುಷಿ..ಶಾಲೆಗೆ ರಜೆ ಕೊಟ್ರಂತೂ ಖುಷಿಯೋ ಖುಷಿ..

ಮಳೆ ಬಂದು ಶಾಲೆಗೆ ರಜೆ ಕೊಟ್ರೆ ಇವಾಗಿನ ಮಕ್ಳು ತರ ನಾವು ಟಿ.ವಿ ನೋಡ್ತಿರ್ಲಿಲ್ಲ..ಬದಲಾಗಿ ನದಿಲಿ ನೀರು ಎಷ್ಟು ಬಂದಿದೆ,ರೋಡು ಎಲ್ಲೆಲ್ಲಿ ಮುಚ್ಚೋಗಿದೆ ಅಂತ ನೋಡ್ಕೊಂಡು ಬರೋಕೆ ಹೋಗ್ತಿದ್ವಿ..ಊರೆಲ್ಲಾ ಸುತ್ತಿ ಮೈಯೆಲ್ಲಾ ಗೊಚ್ಚೆ ಮಾಡ್ಕೊಂಡು,ತಲೆ ಎಲ್ಲಾ ಒದ್ದೆ ಮಾಡ್ಕೊಂಡು ಮನೆಗೆ ಬಂದ್ರೆ ಅಮ್ಮನ ಬೈಗುಳ ಶುರು ಆಗ್ತಿತ್ತು ನಿಧಾನಕ್ಕೆ ನಮ್ಮ ತಲೆ ಒರೆಸುತ್ತಾ..

ಹೊರಗಡೆ ಧೋ ಅಂತ ಮಳೆ ಸುರಿಬೇಕಾದ್ರೆ ಅಮ್ಮನಿಗೆ ರಗಳೆ ಮಾಡಿ ,ಹಲಸಿನ ಹಪ್ಪಳ ನ ಕೆಂಡದಲ್ಲಿ ಸುಟ್ಟುಕೊಂಡು ಅದುಕ್ಕೆ ಸ್ವಲ್ಪ ಕೊಬ್ಬರಿ ಎಣ್ಣೆ ಹಚ್ಕೊಂಡು ಓಲೆ ಮುಂದೆ ಚಳಿ ಕಾಯಿಸ್ತಾ ತಿನ್ನೋದರ ಮಜಾ ಈ ಭೂಮಿ ಮೇಲೆ ಬೇರೆ ಎಲ್ಲೂ ಸಿಗಲ್ವೇನೋ..

ಸುಟ್ಟ ಹಪ್ಪಳನ ಅಜ್ಜನಿಗೆ ಕೋಡೋ ನೆಪದಲ್ಲಿ ಅಜ್ಜನ ಕಾಲು ಮೇಲೆ ಕೂತ್ಕೊಂಡು ರಾಮಾಯಣ,ಮಹಾಭಾರತ ಕಥೆ ಕೇಳ್ತಾ ಇದ್ರೆ ಜಗತ್ತಿನ ಅತ್ಯಂತ ಸುಖಜೀವಿ ನಾನೇ ಅನ್ನೋ ಭಾವನೆ ಬರೋದಂತೂ ಸುಳ್ಳಲ್ಲ..ಹೀಗೆ ಮಲೆನಾಡಿನ ಮಳೆಗಾಲದ ಗತವೈಭವ ಅನುಭವಿಸಿದವಿರಿಗೆ ಮಾತ್ರ ಗೊತ್ತು...!!!


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...