ತಾಯಮ್ಮ ಎಂಬ ಎಂಬತ್ತರ ತರುಣಿ..!

Posted by ವಿನಯ್ on 04-Oct-2016
ನಮ್ಮ ಮನೆಯಲ್ಲಿ  ಪ್ರತಿ ತಿಂಗಳು ಹೆಚ್ಚಾಗಿ ರಾಗಿ ಬಳಸದಿದ್ದರೂ, ನನಗೆ ಮುದ್ದೆ ಇಷ್ಟವಾದ್ದರಿಂದ ಅಮ್ಮ ವಾರಕೊಮ್ಮೆಯಾದರು ಮಾಡಿಕೊಡುತ್ತಿದ್ದರು. ಆದರೆ, ಸೊಸೈಟಿಯಿಂದ ತಂದ ರಾಗಿಯಲ್ಲಿ ಸುಮಾರು ೧ ಕೆ.ಜಿ. ಯಷ್ಟು ಕಸವೇ ಇರುತ್ತಿತ್ತು. ದಿನನಿತ್ಯದ ಕೆಲಸದ ನಡುವೆ ರಾಗಿ ಆರಿಸಲು ಸಮಯ ಮಾಡಿಕೊಳ್ಳುವುದು ಆಕೆಗೆ ಕಷ್ಟವಾಯಿತು. ಹೀಗೆ ಸುಮಾರು ೨-೩ ತಿಂಗಳು ಕಳೆದವು. ಪ್ರತಿ ತಿಂಗಳ ಪದ್ದತಿಯಂತೆ ಹಿಂದಿನ ಮನೆಯ ಆರತಿ ಎಂಬುವವರ  ಮನೆಗೆ ತೆರಳಿ ರೇಷನ್ ತರಲು ಬರುವಿರಾ ? ಎಂದು ಕೇಳುವ ಅಭ್ಯಾಸ ನನ್ನ ಅಮ್ಮನದು. ಒಮ್ಮೆ ಹೀಗೆ ಅವರ ಮನೆಗೆ ಹೋದಾಗ ರಾಗಿ ಆರಿಸುತ್ತಿದ್ದ ಅಜ್ಜಿಯೊಬ್ಬರು ಅಮ್ಮನಿಗೆ ಕಂಡಿದ್ದಾರೆ. ವಿಚಾರಿಸಿದಾಗ ಆಕೆಯ ವೃತ್ತಿಯೇ ರಾಗಿ ಆರಿಸುವುದೆಂದು ತಿಳಿದು ಬಂದಿದೆ. ನಮ್ಮ ಮನೆಯ ಸುಮಾರು ೩ ತಿಂಗಳ ರಾಗಿ  ಹಾಗೇ ಇರುವುದನ್ನು ನೆನಪಿಸಿಕೊಂಡು ನಮ್ಮ ಮನೆಗೂ ಬರುವಂತೆ ಹೇಳಿದ್ದಾರೆ. 

ಹೀಗೆ ಒಂದು ದಿನ ಮನೆಯ ಚಿಲಕ ಸದ್ಧಾದ್ದನ್ನು ಕೇಳಿ ಬಾಗಿಲು ತೆರೆದ ನನಗೆ ಯಾವುದೋ ಹೊಸ ಮುಖದ ವೃದ್ದೆಯ ಭೇಟಿಯಾಯಿತು. ಅಮ್ಮ ಆಕೆಯನ್ನು ಕರೆದು ರಾಗಿ ಚೀಲವನ್ನು ಕೊಟ್ಟರು. ಕೆಲಸಕ್ಕೆ ಬಂದ ಕೂಡಲೇ ಕಾಫೀ, ತಿಂಡಿ ಏನಾದ್ರೂ ಕೊಡ್ತೀರಾ? ಎಂದು ಕೇಳುವ ಈಗಿನ ಕಾಲದ ಜನರ ನಡುವೆ, ಏನನ್ನೂ ಕೇಳದೆ ಕುಕ್ಕರಗಾಲಲ್ಲಿ ಕುಳಿತು ತನ್ನ ಕೆಲಸ ಪ್ರಾರಂಭಿಸಿದ ಅಜ್ಜಿಯನ್ನು ಕಂಡ ನನಗೆ ಕುತೂಹಲ ಮೂಡಿತು. ಸುಮಾರು ೧೫ ನಿಮಿಷಗಳಾದರೂ ಮೌನವಾಗಿ, ಶ್ರದ್ಧೆಯಿಂದ ರಾಗಿ ಆರಿಸುವುದರಲ್ಲಿ ತಲ್ಲೀನವಾಗಿದ್ದ ಅಜ್ಜಿಯನ್ನು ಮಾತನಾಡಿಸಬೇಕೆನಿಸಿತು. ಮೊದಮೊದಲು ಕೇಳಿದ್ದಕ್ಕೆ  ಮಾತ್ರ ಉತ್ತರ ನೀಡುತ್ತಿದ್ದ ಅಜ್ಜಿ, ನಿಧಾನವಾಗಿ ತನ್ನ ಹಳೆಯ ದಿನಗಳನ್ನು ಬಿಚ್ಚಿಡಲಾರಂಭಿಸಿತು. "ನಮ್ಮ ಊರು ಬೇಗೂರು , ನನ್ನ ಹೆಸರು ತಾಯಮ್ಮ " ಎಂದರು. ತಾಯಮ್ಮ ಎಂಬ ಪದ ಕೇಳುತ್ತಿದಂತೆಯೇ ನನ್ನ ಸ್ವಂತ ಅಜ್ಜಿ(ಅಮ್ಮನ ಅಮ್ಮ)ನ ನೆನಪಾಗಿ ಮನದಾಳದಲ್ಲಿ ಒಂದು ಮಂದಹಾಸ. ತಾಯಿಯ ಅಮ್ಮನಾದ್ದರಿಂದ ಚಿಕ್ಕವನಿದ್ದಾಗಿನಿಂದ್ಲು "ತಾಯಮ್ಮ" ಎಂದೇ ಕರೆಯುತಿದ್ದೆನು. ಎಷ್ಟು ವರ್ಷ ವಯಸ್ಸು ಎಂದಿದಕ್ಕೆ "೮೦ ಆಯ್ತು ಕಣಪ್ಪ" ಎಂದಾಗ, ಆಕೆಯ ಮನಸಲ್ಲೆಲೋ ನೋವಿತ್ತಾದರು ೮೦ರ ವಯಸ್ಸಿಗಿಂತ ಹೆಚ್ಚಿನ ಹುಮ್ಮಸ್ಸಿತ್ತು. "ಸುಮಾರು ೫೦ ವರ್ಷದಿಂದ ರಾಗಿ ಆರಿಸ್ತಿದಿನಿ. ಹೊನ್ನ ಭಟ್ರು, ಚನ್ನ ಭಟ್ರು ಎಲ್ಲರ ಮನೆಗೂ ನಾನೇ ಆರ್ಸಿ ಕೊಡಕ್ಕ್ ಬರ್ತಿದ್ದೆ. ಶೇಕರಪ್ಪನ ಅಪ್ಪ ತೀರ್ ಹೋದಾಗ್ಲು ನಾ ಅವ್ರ ಮನೇಲ್ ರಾಗಿ ಆರ್ಸ್ತಿದ್ದೆ" ಎಂದು ಮಾತು ಮುಗಿಸಿದ್ರು. ಅಜ್ಜಿಯ ಮಾತಿನಿಂದ ಅವರ ಜೀವನದ ಅನುಭವ ತಿಳಿಯಿತು. ನಿಮ್ಮ ಕುಟುಂಬದವರು ಏನ್ ಮಾಡ್ತಿದ್ದಾರೆ ಎಂದು ಕೇಳಿದಾಗ , "ನಾನು ನನ್ನ ಅಮ್ಮನಿಗೆ ೧೪ ನೆ ಮಗಳು. ೧೩ ಜನ ಮಕ್ಕಳು ಹುಟ್ಟುವಾಗಲೇ ಸತ್ ಹೋದ್ವು. ಅದ್ಕೆ ನಂಗೆ ತಾಯಮ್ಮ ಅಂತ ಹೆಸ್ರಿಟ್ರಂತೆ.  ನಾ ಹುಟ್ಟಿದ್ಮೇಲೆ ನನಗ್ ಒಬ್ಬ ತಮ್ಮ ಹುಟ್ಟಿದ. ನಾವು ನಮ್ಮ ಜಮೀನಿನಲ್ಲಿ ಸ್ವಲ್ಪ ವರ್ಷ ಬೆಳೆ ಬೆಳ್ಕಂಡ್ ಅರಾಮಗೆ ಇದ್ವಿ. ಮತ್ತೆ ಬಡತನ ಶುರು ಆಯ್ತು. ಯಾವ್ ಬೆಳೆ ಹಾಕ್ದ್ರು ಪಸಲು ಬರ್ಲಿಲ್ಲ. ಇದ್ದ ಜಮೀನ್ನನ್ನು ತಮ್ಮನ್ ಮಗ ಮಾರಿ ಕೂತಿದ್ದಾನೆ" ಎಂದಾಗ ಅಜ್ಜಿ ಪಟ್ಟ ಕಷ್ಟ ತಿಳಿದು ಬೇಜಾರಾಯಿತು. ಉನ್ನತಿ ಎಂದು ಉದ್ದುದ್ದಾ ಮಾತಾಡುವ ಯುವ ಜನಾಂಗದ ಮೇಲಿದ್ದ ಅಜ್ಜಿಯ ಹತಾಶೆ ತಿಳಿದು ನಾಚಿಕೆಯಾಯಿತು. ೮೦ರ ಇಳಿ ವಯಸ್ಸಿನಲ್ಲೂ, ದುಡಿದು ಬದುಕಬೇಕೆನ್ನುವ ಈ ಅಜ್ಜಿಯ ಫೋಟೋ ತೆಗೆಯಲೆಂದು ಕ್ಯಾಮರ ಹಿಡಿದು ನಿಂತೆ, "ನನ್ನ ಫೋಟೋ ಯಾಕಪ್ಪ ತೆಗಿತ್ತ್ಯಾ" ಎಂದು ಅಜ್ಜಿ ನಕ್ಕಾಗ  ಚೂರು ನಾಚಿಕೆಯೂ ಕಾಣಿಸಿತು.ಪುರಂದರದಾಸರ "ರಾಗಿ ತಂದೀರ್ಯ ಭಿಕ್ಷಕೆ" ಕೀರ್ತನೆ ನೆನೆಪಿಗೆ ಬಂದು "ಯೋಗ್ಯರಾಗಿ, ಭೋಗ್ಯರಾಗಿ, ಭಾಗ್ಯವಂತರಾಗಿ" ಎಂಬ ದಾಸರವಾಣಿಯ ಧ್ಯೋತಕದಂತೆ ಅಜ್ಜಿ ಕಂಡಿದ್ದಂತೂ ಸತ್ಯ. ಎಲ್ಲರ ಮನೇಲೂ ಕೆಲಸ ಮಾಡಿದಕ್ಕೆ ಸರಿಯಾಗಿ ದುಡ್ಡು ಕೊಡ್ತಾರ ಎಂದ್ರೆ "ನಾನು ಏನು ಕೆಳಕ್ ಹೋಗಲ್ಲ. ಅವ್ರೆ ತಿಳಿದು ಕೊಡ್ತಾರೆ" ಎಂದಾಗ ಯಾವುದೇ ಅಪೇಕ್ಷೆ ಬೇಡದ ಅಜ್ಜಿಯ ಮನಸ್ಥಿತಿ ಕಾಣಿಸ್ತು. ದುಡ್ಡು ಕೊಡದೆ ಕಳ್ಸಿದ್ರೆ ಏನ್ ಮಾಡ್ತೀರಾ ಅಂದ್ರೆ, "ಮುಂದಿನ ಸಲ ಕರ್ದಾಗ್ ಅವ್ರಿಗ್ ಕೈ ಕೊಡ್ತೀನಿ" ಎಂದು  ಸುಲಭವಾಗಿ ಹೇಳಿದ ಅಜ್ಜಿ, ೮೦ರ ಇಳಿ ವಯಸ್ಸಿನಲ್ಲೂ ತರುಣೆಯಂತೆ ಒಂದೇ ಭಂಗಿಯಲ್ಲಿ ಸುಮಾರು ೩ ಗಂಟೆ ಕುಳಿತು ಕೆಲಸ ಮಾಡಿದ್ದು, ನಿಜಕ್ಕೂ ನಮೆಲ್ಲರಿಗೂ ಸ್ಫೂರ್ತಿ..!


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...