ತ್ರಿವಳಿ

Posted by ಸಂಪತ್ ಸಿರಿಮನೆ on 20-Oct-2016
1. ಅದೃಷ್ಟ
ಜೆ.ಪಿ. ನಗರದ ಸೆಂಟ್ರಲ್ ಮಾಲ್ ಎದುರು ಮರದ ಕೆಳಗೆ ನಾವು ನಾಲ್ಕು ಜನ ಹೋಗಿಬರುವ ಹುಡುಗಿಯರನ್ನು ನೋಡುತ್ತಾ, ಹರಟೆಹೊಡೆಯುತ್ತಾ ಕುಳಿತಿದ್ದೆವು. ಬಹಳ ಹೊತ್ತಿನಿಂದ ನಮ್ಮೆದುರು ಹರುಕಲು ಬಟ್ಟೆ ಧರಿಸಿದ್ದ ಪುಟ್ಟ ಹುಡುಗರಿಬ್ಬರು ಗಾಜಿನ ಮೂಲಕ ಮೆಕ್ಡೊನಾಲ್ಡ್ಸಿನಲ್ಲಿ ದುಡ್ಡಿರುವವರು ಎರಡೂವರೆ ಮೀಟರ್ ಬಾಯಿ ಅಗಲಿಸಿ ಒಂದೇ ಹೊಡೆತಕ್ಕೆ ಚೀಸ್ ಬರ್ಗರನ್ನು ಗುಳುಮ್ಮೆನ್ನಿಸುವುದನ್ನು ಆಸೆ-ಅಚ್ಚರಿ ತುಂಬಿದ ಕಂಗಳಿಂದ ನೋಡುತ್ತಾ ನಿಂತಿದ್ದರು. ಇದ್ದಕ್ಕಿದ್ದಂತೆ ಸುಮನ್ "ಅವರಿಗೆ ಊಟ ಕೊಡಿಸೋಣ್ವಾ??" ಎಂದ. ಕ್ಷಣಕಾಲ ಮೌನವನ್ನನುಸರಿಸಿ ಮೂರು 'ಸರಿ'ಗಳು ಒಟ್ಟಿಗೇ ಮೇಳೈಸಿದವು. ಇಬ್ಬರು ಹುಡುಗರನ್ನು ಕರೆದುಕೊಂಡು ಪಕ್ಕದ ಉಪಾಹಾರ ದರ್ಶಿನಿಗೆ ಹೋಗುತ್ತಿದ್ದಂತೇ ಅಲ್ಲಿನ ಕೆಲಸದವನು "ಥೂ ಕಚಡಾ ನನ್ಮಕ್ಳಾ ನೀವ್ಯಾಕೆ ಇಲ್ಲಿ ಬಂದ್ರಿ, ತೊಲಗ್ರೋ ಆಚೆಗೆ" ಎನ್ನುತ್ತಾ ಓಡಿಸಲು ಮುಂದಾದವರು ನಮ್ಮನ್ನೆಲ್ಲಾ ನೋಡಿ "ಓ ನಿಮ್ ಕಡೆಯವ್ರಾ ಸಾರ್..." ಎಂದು ಹಿಂದೆಸರಿದರು. ಭರತನಿಗೆ ತಡೆಯಲಾಗದೇ "ನೀವು ಸಾರ್ ಅಂದಿದ್ದು ನಮಗಲ್ಲ, ಒಗೆದು ಇಸ್ತ್ರಿ ಮಾಡಿ ಸೆಂಟು ಹಾಕಿರೋ ನಮ್ಮ ಬಟ್ಟೆಗೆ. ನಾಳೆ ನಾವು ಬಟ್ಟೆ ಅದಲುಬದಲು ಮಾಡಿಕೊಂಡು ಬಂದ್ರೆ ಈ ಹುಡುಗರು ಸಾರ್ ಆಗ್ತಾರೆ, ನಾವು ಕಚಡಾಗಳಾಗ್ತೀವಿ ಅಲ್ವಾ ಸಾರ್???" ಎಂದದ್ದಕ್ಕೆ ಮುಖ ಪೆಚ್ಚುಮಾಡಿಕೊಂಡು ಕೆಲಸದಾತ ಒಳಹೋದ. 'ಏನು ತಿಂತೀರಾ??' ಎಂಬ ಪ್ರಶ್ನೆಗೆ ಒಂದು ನಿಮಿಷ ಸುಮ್ಮನಿದ್ದ ಹುಡುಗರಿಬ್ಬರೂ "ಅದೂ....., ನಮ್ ಫ್ರೆಂಡ್ಸ್ ಇನ್ನೂ ನಾಲ್ಕು ಜನ ಇದಾರೆ, ಪಾರ್ಸಲ್ ಕೊಡ್ಸಿ, ಆಮೇಲೆ ಹಂಚ್ಕೊಂಡು ತಿಂತೀವಿ" ಎಂದಾಗ ಎಲ್ಲರಿಗೂ ಎದೆಯೊಳಗೆ ಜೀರಿಗೆಮೆಣಸಿನಕಾಯಿಯಿಟ್ಟಂತೆ ಯಾತನೆಯಾಯಿತು. ಆರು ಜನರಿಗಾಗುವಷ್ಟು ತಿಂಡಿ ಕಟ್ಟಿಸಿಕೊಟ್ಟು ಖುಷಿಯಿಂದ ತಗೊಂಡು ಹೋಗ್ತಿರೋ ಹುಡುಗರ ಮುಖದ ನಗು ನೋಡಿ "ಒಂದೊಳ್ಳೆ ಕೆಲಸ ಮಾಡಿದ್ವಿ ಅನಿಸ್ತಿದೆ" ಅಂದೆ. ಅದಕ್ಕೆ ಶ್ರೀಹರಿ "ಇವತ್ತೇನೋ ಇವ್ರ ಹೊಟ್ಟೆ ತುಂಬುತ್ತೆ, ಆದರೆ ನಾಳೆಗೆ???. ಅವರೂ ಮನುಷ್ಯರೇ - ನಾವೂ ಮನುಷ್ಯರೇ, ಆದರೂ ನಾವು ಅವರಿಗಿಂತ ಮೇಲಿರೋಕೆ ಒಂದೇ ಕಾರಣ ನಮ್ಮ ಅದೃಷ್ಟ ಅಷ್ಟೇ..." ಎಂದ. ದೂರದಲ್ಲಿ ಮಾಲ್ ಎದುರು ಹೋಗುತ್ತಿದ್ದ ಆ ಹುಡುಗರನ್ನು ಕಾವಲುಗಾರ ಕಾರಣವಿಲ್ಲದೇ ಕೋಲು ತೋರಿಸಿ ಬೆದರಿಸಿ ಓಡಿಸಿದ್ದು ಕಾಣಿಸಿತು....

2. ಡೆಜಾ ವು
ಶಂಕರನಿಗೆ ಇತ್ತೀಚೆಗೆ ಒಂಥರಾ ಭ್ರಮಾಕಾಯಿಲೆ ಶುರುವಾಗಿತ್ತು. ಆಗಾಗ ಕೆಲವೊಂದು ಘಟನೆಗಳು ಹಿಂದೆಂದೋ ನಡೆದಿರುವಂತೆ, ಆ ಸಂದರ್ಭದಲ್ಲಿ ಹೀಗೆಯೇ ತಾನು ವರ್ತಿಸಿದಂತೆ, ಎಲ್ಲವೂ ಮತ್ತೊಮ್ಮೆ ಅಚ್ಚುಹೊಡೆದಂತೆ ಮರುಕಳಿಸುತ್ತಿದೆ ಎನ್ನುವ ಅನುಭವವಾಗುತ್ತಿತ್ತು. ಗೆಳೆಯರ ಬಳಗದಲ್ಲಿ ಈ ಬಗ್ಗೆ ಚರ್ಚೆಯಾದಾಗ ಬಹುತೇಕ ಜನ "ಅಯ್ಯೋ ನಮ್ಗೂ ಹಂಗೇ ಆಗ್ತಿರುತ್ತೆ ಅದ್ಕೆಲ್ಲಾ ಯಾವೋನು ತಲೆಕೆಡಿಸ್ಕೋತಾನೆ??" ಎಂದು ನಿರಾಶಾದಾಯಕವಾಗಿ ಅವನ ಅನುಭವವನ್ನು ಮೂಲೆಗೊತ್ತಿದರೆ, ಇಂಗ್ಲೀಷು ಚಿತ್ರಗಳನ್ನು ಜಾಸ್ತಿ ನೋಡುವ ಹೈದರು "ನೋಲನ್ನು ಇಂಟರ್ಸ್ಟೆಲ್ಲಾರಲ್ಲಿ ತೋರಿಸಿಲ್ವಾ, ಕಾಲ ಅನ್ನೋದು ಒಂದು ಭೌತಿಕ ಆಯಾಮ, ಗುರುತ್ವಾಕರ್ಷಣೆ ಉಪಯೋಗಿಸಿ ನಮಗೆ ಬೇಕಾದಂಗೆ ಹಿಂದೆಮುಂದೆ ಹೋಗಿಬರ್ಬೋದು, ಯಾರೋ ಆ ಟೈಮ್ ಮೆಷಿನ್ನು ತಯಾರಿಸಿ ಇಡೀ ಜಗತ್ತನ್ನೇ ಒಳ್ಳೆ ಕ್ಯಾಸೆಟ್ ತರ ಹಿಂದೆ ಮುಂದೆ ಓಡಾಡಿಸಿ ಮಜಾ ತಗೊಳ್ತಿದಾರೆ" ಎಂದು ಭಾಷಣ ಹೊಡೆದು ಶಂಕರನ ಸುತ್ತಮುತ್ತಲಿನ ಜಗತ್ತನ್ನೆಲ್ಲಾ ನಿಗೂಢವಾಗಿಸಿ ಸುರೇಶಣ್ಣನ ಕಬ್ಬಿನ ಹಾಲಿನ ಯಂತ್ರವನ್ನೂ ಅನುಮಾನದಿಂದ ನೋಡುವಂತೆ ಮಾಡಿಟ್ಟರು. ಇನ್ನು 'ಹೀಗೂ ಉಂಟೇ?' ಅಭಿಮಾನಿ ಗುಂಪಿನವರು "ಅದೇನೂ ಅಲ್ಲ, ಇದು ಪುನರ್ಜನ್ಮಕ್ಕೆ ಸಾಕ್ಷಿ, ನೀನು ಹಿಂದಿನ ಜನ್ಮದಲ್ಲಿ ಇಲ್ಲೇ ಎಲ್ಲೋ ಸುತ್ತಮುತ್ತ ಹುಟ್ಟಿರ್ತೀಯಾ" ಎಂದು ತೀರ್ಪು ನೀಡಿ ಶಂಕರನ ಕಿವಿಯಲ್ಲೆಲ್ಲಾ 'ತಂಗಾಳಿಯಲ್ಲಿ ನಾನು ತೇಲಿ ಬಂದೆ' ಹಾಡು ರಿಂಗಣಿಸುವಂತೆ ಮಾಡಿದರೆ ಒಂದಿಬ್ಬರು ವಾಸ್ತವವಾದಿಗಳು "ಎಣ್ಣೆ ಹೊಡೆಯೋದು ಕಡಿಮೆ ಮಾಡು, ಎಲ್ಲಾ ಸರಿಯಾಗುತ್ತೆ" ಎಂದು ಸಲಹೆ ಕೊಟ್ಟರು. ಐದು ನಿಮಿಷ ನಿಂತಲ್ಲೇ ತಲೆಕೆರೆದುಕೊಂಡು ಯೋಚಿಸಿದ ಶಂಕರ "ಏನ್ರೋ, ನಾನು ಮುಂಚೆ ಯಾವಾಗ್ಲಾದ್ರೂ ಈ ವಿಷ್ಯದ ಬಗ್ಗೆ ನಿಮ್ಹತ್ರ ಮಾತಾಡಿದ್ನಾ?, ಪಕ್ಕಾ ಇದೇ ತರ ಯಾವತ್ತೋ ಚರ್ಚೆ ಮಾಡಿದ್ದ ಹಾಗೆ ಅನಿಸ್ತಿದೆ" ಎಂದು ಪೆಚ್ಚುಮೋರೆಗೆ ಅಲಂಕಾರದಂತಿದ್ದ ಗೊಂದಲಭರಿತ ಕಂಗಳನ್ನರಳಿಸಿ ಕೇಳಿದ!....

3. ವೇಸ್ಟು ಬಾಡಿ
'ನನ್ನ ನೀನಾವರಿಸಿರುವುದರಲ್ಲಿ ನಿನ್ನ ತಪ್ಪಿಲ್ಲ ಹುಡುಗೀ, ಹಾಗೆ ನೋಡಿದರೆ ಮರುಳನು ನಾನೇ'..., ಒಂದು ಸಾಲು ಗೀಚಿದೆ. ಮತ್ತೆ ಹತ್ತು ನಿಮಿಷ ಗೋಡೆ ಗಡಿಯಾರದ ಮುಳ್ಳಿನ ಸದ್ದು, ನನ್ನ ತೋರುಬೆರಳು-ಮಧ್ಯದಬೆರಳಿನ ಮಧ್ಯೆ ನಲಿಯುತ್ತಿದ್ದ ಟೆಕ್ನೋಟಿಪ್ ಪೆನ್ನು ಮೇಜಿಗೆ ತಾಗಿ ಹೊರಡಿಸುತ್ತಿದ್ದ ಟಕಟಕ ಸದ್ದು, ನನ್ನ ನಿಟ್ಟುಸಿರು - ಇವು ಮೂರು ಬಿಟ್ಟರೆ ಮತ್ತೆಲ್ಲ ನಿಶ್ಯಬ್ದ. ಮತ್ತೊಂದು ಸಾಲು ಮೂಡಿತು, 'ದುಂಬಿ ಬಳಿಬರುವುದು ಹೂವು ಕರೆದುದಕಲ್ಲ, ಹೇಗೆ ನೋಡಿದರೂ ಮರುಳನು ನಾನೇ'..., ಈ ಬಾರಿ ಹಾಳೆಯೆಡೆಗೇ ದಿಟ್ಟಿಸುತ್ತಿದ್ದ ನನ್ನ ನಿಟ್ಟುಸಿರಿನೆದುರು ಇನ್ನಾವ ಸದ್ದೂ ಕೇಳಿಸಲಿಲ್ಲ. "ಥೂ ನನ್ ಪಿಂಡ" ಎಂದು ಅಸಹನೆಯಿಂದ ಹಾಳೆಯನ್ನು ಮುದ್ದೆಮಾಡಿ ಕಿಟಕಿಯಿಂದ ಹೊರಗೆಸೆದೆ. "ಇದೆಲ್ಲಾ ವರ್ಕೌಟ್ ಆಗಲ್ಲ, ನೇರವಾಗಿ ಡೀಲ್ ಮಾಡ್ಬೇಕು" ಎಂದು ನನಗೆ ನಾನೇ ಹೇಳಿಕೊಂಡು ರಪ್ಪಂತ ಮೊಬೈಲೆತ್ತಿ ವಾಟ್ಸ್ಯಾಪ್, ಹೈಕು, ಫೇಸ್ಬುಕ್ಕು ಎಲ್ಲಾ ಕಡೆ ನೋಡಿದೆ, ಎಲ್ಲೆಡೆಯೂ ಅವಳು ಆಫ್ಲೈನ್ ಆಗಿದ್ದಳು. ನೇರವಾಗಿ ಫೋನು ಮಾಡಲು ಅರ್ಧ ಕೆ.ಜಿ. ಧೈರ್ಯ ಕಡಿಮೆಯಿದ್ದದ್ದರಿಂದ ಹಾಗೇ ಕೈಕೈ ಹಿಸುಕಿಕೊಳ್ಳುತ್ತಾ ಹಳೆಯದನ್ನು ಯೋಚಿಸತೊಡಗಿದವನಿಗೆ ಹದಿನೈದು ವರ್ಷದ ಹಿಂದೆ ಮೂರನೇ ತರಗತಿಯಲ್ಲಿ ಮೀಸೆಯಿರಲಿ, ಸರಿಯಾಗಿ ಹಲ್ಲೂ ಬಂದಿರದ ವಯಸ್ಸಿನಲ್ಲಿ ಗೆಜ್ಜೆ ಹಾಕಿಕೊಂಡು ನನ್ನೆದುರು ಬಂದು ಆವರೆಗೂ ಅನುಭವಿಸಿರದ ಎದೆ ಧಸಕ್ಕೆನ್ನುವ ಯಾವುದೋ ಹೊಸಭಾವ ಮೂಡಿಸಿದ ಅವಳ ಮುದ್ದುಮುಖ ರಪ್ಪಂತ ಕಾಡತೊಡಗಿತು. ಇದ್ದಕ್ಕಿದ್ದಂತೆ ಧೈರ್ಯಸ್ಫೋಟವಾಗಿ 'ಆಗಿದ್ದಾಗಲಿ' ಅಂತ ಅಭಿಸಾರಿಕೆ ಎಂದು ಸೇವ್ ಮಾಡಿಕೊಂಡಿದ್ದ ಅವಳ ನಂಬರ್ ಗೆ ಕರೆ ಮಾಡಿಯೇಬಿಟ್ಟೆ. ಹೇಡಿಗಳು ಹೆಜ್ಜೆಯಿಟ್ಟಲ್ಲೆಲ್ಲಾ ಹಾವು ಎಂಬಂತೆ ಅತ್ತಕಡೆಯಿಂದ ಅವರಮ್ಮ ಫೋನೆತ್ತಿ ನಾನು ಗಾಬರಿಯಾಗಿ ಕೊನೆಗೆ ಅವರೇ ನನ್ನ ಯೋಗಕ್ಷೇಮ ವಿಚಾರಿಸಿ ಮಗಳನ್ನು ಕರೆದು ಫೋನುಕೊಟ್ಟರು. "ಹಾಯ್...ಹೆಂಗಿದೀಯಾ??....ತಿಂಡಿ ಆಯ್ತಾ??...ಏನ್ ತಿಂಡಿ??...ಇಡ್ಲಿ ಜೊತೆ ಕಡ್ಲೆ ಚಟ್ನಿನಾ, ಕೊತ್ತಂಬ್ರಿ ಸೊಪ್ಪಿನ್ ಚಟ್ನಿನಾ??" ಅಂತೆಲ್ಲಾ ಕೇಳುತ್ತಾ ಹತ್ತು ನಿಮಿಷ ತಳ್ಳಿದ ಮೇಲೆ ಆ ಕಡೆಯಿಂದ ಮಾತನಾಡಲು ಇನ್ನೇನೂ ಉಳಿದಿಲ್ಲ ಎಂಬಂತಹ ಸೂಚನೆಯ "ಸರಿ...., ಮತ್ತೇ????" ಎಂಬ ಪ್ರಶ್ನೆ ಬಂದಿತು. ಉಗುಳುನುಂಗಿಕೊಂಡು ಐದೂವರೆ ಸೆಕೆಂಡು ಸುಮ್ಮನಿದ್ದು "ಮತ್ತೇನಿಲ್ಲ ಬಾಯ್..." ಎಂದು ಫೋನಿಟ್ಟು ಬೀರುವಿನ ಬಾಗಿಲ ಉದ್ದಕನ್ನಡಿಯಲ್ಲಿ ಬೆವರಿನ ಕೆರೆಯಾಗಿದ್ದ ನನ್ನ ಮುಖವನ್ನೇ ನೋಡಿಕೊಳ್ಳುತ್ತಾ "ನಾಳೆ ಪಕ್ಕಾ ಪ್ರಪೋಸ್ ಮಾಡ್ತೀನಿ" ಎಂದು ಶಪಥಗೈದೆ. ನನ್ನ ಪ್ರತಿಬಿಂಬ ಪುಸುಕ್ಕಂತ ನಕ್ಕಿತು....


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...