ಅಮ್ಮ!

Posted by ಶ್ರೀನಿಧಿ ವಿ.ನಾ. on 27-Oct-2016
ಬೆಳಿಗ್ಗೆ ಎಂಟು ಗಂಟೆಯೊಷ್ಟೊತ್ಗೆ ನನ್ನನ್ನು ಎಬ್ಬಿಸಿ ಹೋಗಿ ಅಡುಗೆಮನೆಯಲ್ಲಿ ಅದ್ಯಾವ್ದೋ ಹಾಡಿಗೆ ತಾನೇ ರಾಗವಾಗಿ ಗುನುಗುನಿಸುತ್ತಾ, ಮುಗುಳ್ನಗುತ್ತಾ ನಿಂತ ಅಮ್ಮನ ನೆನಪು, ಇಲ್ಲಿ ಈ ಕಾಂಕ್ರೀಟ್ ಕಾಡಿನ ಮಧ್ಯೆ, ತರಕಾರಿ ಮಾರುತ್ತಾ ನಿಂತ ಅಜ್ಜಿಯೊಬ್ಬಳು, ಕೊಂಡ ತರಕಾರಿಯ ಜೊತೆಗೆ ನಾಲ್ಕೈದು ದೊಣಮೆಣಸಿನಕಾಯಿ ಹೆಚ್ಗೆ ಕೊಟ್ಟು, "ಇದು Free ಮಗಾ" ಅಂತ ತನ್ನ ಬೊಚ್ಚು ಬಾಯಲ್ಲೊಂದು ಮಮತೆಯ ನಗುವಿನೊಂದಿಗೆ ಹೇಳಿದಾಗ, ಬಹಳವಾಗಿ ಕಾಡಿತು!

ನಿಜ! ಅಮ್ಮನ ಮಮತೆಯೇ ಅಂತದ್ದು, ಸ್ವತಃ ಅಮ್ಮನಿಗೂ ಅವಳಮ್ಮನ ನೆನಪಿನ ಸರಣಿಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ! ತಾನೇ ಅಮ್ಮಳಾಗಿ ದಶಕಗಳೇ ಕಳೆದರೂ, ಪ್ರತೀ ಮಾತು ಕೃತಿಯಲ್ಲಿ, ತನ್ನ ಅಮ್ಮನ ನೆನಪನ್ನು ಬರಮಾಡಿಕೊಳ್ಳೋ ಅಮ್ಮನೂ ಸಹ, ಅಮ್ಮನ ಪ್ರೀತಿಯಲ್ಲಿ ಬಂಧಿ!

ಅಕಸ್ಮಾತ್ತಾಗಿ ಬೇರೋಂದು ಹುಡುಗಿಯ ಕೈಯನ್ನು Bore well ನ ಸಂಧಿಯಲ್ಲಿ ಸಿಕ್ಕಿಸಿ ಜಜ್ಜಿ, ಪ್ರಾಥಮಿಕ ಶಾಲೆಯಲ್ಲಿ ಅದೊಂದು ದಿನ ನಡುಗುತ್ತಾ ಟೀಚರ್ ನ ಎದುರು ನಿಂತಾಗ, "ಪಶ್ಚಾತ್ತಾಪದಲ್ಲಿ ಮಗು ಬೆಂದಿದೆ" ಅಂತೆನೋ ಆ ಕ್ಷಣಕ್ಕೆ ಅರ್ಥವಾಗದ ಡೈಲಾಗ್ ಹೇಳಿ, ಮಮತೆಯಲ್ಲಿ ನನ್ನತ್ತ ನೋಡಿದ ಶಿಕ್ಷಕಿಯೋ ಅಥವಾ ಬೇರೊಬ್ಬ ಶಿಕ್ಷಕರ ಕೈಯಲ್ಲಿ ತುಂಟತನ ಮಾಡಿ ಹೊಡೆಸಿಕೊಂಡಾಗ, ಮೈತುಂಬಾ ಎದ್ದ ಬಾಸುಂಡೆಗಳಿಗೆ ಪ್ರೀತಿಯಿಂದ ಸ್ಪರ್ಶಿಸಿದ ಆ ಶಿಕ್ಷಕಿಯ ತಣ್ಣನೆಯ ಮುಲಾಮು ಪೂರಿತ ಬೆರಳಿನಲ್ಲಿನ ಮಮತೆಯೇ ಆಗಿರಲಿ, ಎಲ್ಲ ಕಡೆ ಅಮ್ಮನದೇ ನೆರಳು.

ಒಂದು ಕುಟುಂಬ ಅಂತ ಮಾಡಿ, ಅದಕ್ಕೊಬ್ಬ ಆಲದ ಮರದಂತಹ ಅಪ್ಪ, ಭೋರ್ಗರೆದರೂ ಶಾಂತಾವಗಿರೋ ಸಮುದ್ರದಂತಹ ಅಮ್ಮನನ್ನು ಅದರೊಳಗಿಟ್ಟಿದ್ದು ದೇವನೆಂಬುವವನ ಕ್ರಿಯೆಯೇ ಆಗಿದ್ರೆ, ಆ ದೇವರ ಅಮ್ಮನೆಷ್ಟು ಮಮತಾಮಯಿಯಾಗಿರಬೇಕು! ಇಂತದ್ದೊಂದು ಪ್ರಕ್ರಿಯೆಯನ್ನು ಹುಟ್ಟುಹಾಕಿದ ಆ ದೇವನಿನ್ನೆಷ್ಟು ಕಲಾವಿದನಿರಬೇಕು!

"ಅಮ್ಮ, ನಿನ್ನ ಎದೆಯಾಳದಲ್ಲಿ, ಗಾಳಕ್ಕೆ ಸಿಕ್ಕ ಮೀನು..." "ಬೇಡೆವೆನು ವರವನ್ನು , ಕೊಡೆತಾಯಿ ಜನ್ಮವನು.." "ಅಮ್ಮಾ ಎಂದರೆ ಏನೋ ಹರುಷವೋ " ಹಿಂಗೆಲ್ಲಾ ಬರ್ದು ಹಾಡಿದ ಕವಿಗಳ ಅಕ್ಷರಗಳಿಗೆ ಸ್ಫೂರ್ತಿ, ಮನೆಯಲ್ಲಿ ಮಗನನ್ನು ಹೆಮ್ಮೆಯಿಂದ ದಿಟ್ಟಿಸುವ ಒಬ್ಬಳು ತಾಯಿ! ಒಮ್ಮೆ ಯೋಚಿಸಿ, ಪ್ರಪಂಚದಲ್ಲಿ ಅದೆಷ್ಟು ಜನರಿದ್ದಾರೆ, ಎಲ್ಲರಿಗೂ ಒಬ್ಬಳು ಅಮ್ಮ, ಹಾಗೂ ಅವಳ ಬೆಟ್ಟದಷ್ಟು ಪ್ರೀತಿ. ಪ್ರೀತಿಗೆ ಭೌತಿಕ ರೂಪವಿದ್ದಿದ್ದರೆ, ಅದನ್ನು ಇಡಲು ಇದೊಂದು ವಿಶ್ವ ಸಾಕಗ್ತಿರ್ಲಿಲ್ಲ.

ನನಗನ್ನಿಸೋದು, ಈ ಭಯೋತ್ಪಾದಕರಿಗೂ ಅಮ್ಮನಿರುತ್ತಳಾಲ್ವಾ? ಪಾಪ ಆಕೆಯ ಹೃದಯಕ್ಕೆ ಅದೆಷ್ಟು ದುಃಖವಾಗಿರಬೇಕಲ್ವಾ. ಜಗಮೆಚ್ಚುವ ಕೆಲಸ ಮಾಡಿದಾಗ ಕಣ್ತುಂಬಿ ಹರಸುವ ತಾಯಿ, ಅದೇ ಮಗ, ವಿಧ್ವಂಸಕ ಕೆಲಸಕ್ಕಿಳಿದಾಗ ಆಕೆಯ ಜಗತ್ತು ಸರ್ವನಾಶವಾಗುತ್ತೆ. ಸ್ವರ್ಗದಲ್ಲಿ ಸಿಗೋ ಅಪ್ಸರೆಯರಿಗೊಸ್ಕರ ಪ್ರಾಣಗಳ ಬಲಿ ತೆಗೆಯುವವರು ಒಮ್ಮೆ ಅವರವರ ತಾಯಿಯ ದೃಷ್ಟಿಯಲ್ಲಿ ಜಗತ್ತನ್ನು ನೋಡಿದರೆ, ಜಗತ್ತು ಶಾಂತಿಯ ಧಾಮವಾಗುತ್ತೆ.

ಜಗತ್ತಿಗೇ ಗುರುಗಳಾಗುವವರು, ಜಗದ್ಗುರುಗಳು, ತಮ್ಮ ತಂದೆಗೆ ತರ್ಪಣವಿಟ್ಟು, ಆತ ಜೀವಂತವಿರುವಾಗಲೇ ಬಿಟ್ಟು ಬರುತ್ತಾರೆ. ಆದರೆ ತಾಯಿಗೆ ಹಾಗಲ್ಲ! ಜಗದ್ಗುರುಗಳೇ ಆಗಲೀ, ತಾಯಿಯೆದುರು ಅಮ್ಮಾ ಎಂದು ಉದ್ಘರಿಸಿ ಮಗುವಾಗುತ್ತಾರೆ. ದೇವರೆದುರು ಬಿಟ್ರೆ ತಾಯಿಗೆ ಮಾತ್ರ ದೀರಘದಂಡ ನಮನ ಸಲ್ಲಿಸುತ್ತಾರೆ.

ಊರಿಗೇ ರಾಜನಾದ್ರೂ ತಾಯಿಗೆ ಮಗ, ಹುಳಿಯಾದರೂ ಮಜ್ಜಿಗೆಯೇ, ಹುಚ್ಚಾದರೂ ತಾಯಿಯೇ, ಅಂತೆಲ್ಲಾ ಜಾನಪದ ಲೋಕ ಗಾದೆಗಳನ್ನು ಮಾಡಿ, ತಾಯಿಯ ಬಗ್ಗೆ ಹೇಳಲು ಒಂದಿಷ್ಟು ಪ್ರಯತ್ನ ಮಾಡಿವೆ. ಪ್ರಾಣಿಗಳ ಲೋಕದಲ್ಲಂತೂ, ಎಲ್ಲೋ ಕೆಲವು ಪ್ರಬೇಧಗಳನ್ನು ಹೊರತುಪಡಿಸಿ, ತಾಯಿಯೇ ಜೀವರಕ್ಷಕಿ. ಹುಟ್ಟಿಸುವ ನಾಲ್ಕಾರು ಕ್ಷಣಗಳಿಗೆ ಮಾತ್ರ ಒಂದಾಗುವ ಗಂಡು, ನಂತರ ಹೆಸರಿಲ್ಲದೇ ಮಾಯ! ತಾಯಿ ಬೆಕ್ಕಾಗಲೀ, ನಾಯಿಯಾಗಲೀ ಮರಿಗಳನ್ನು ಬೆಳೆಸುವ ಪರ್ವ ಬಹಳ ಸುಂದರ.

ಅದರಲ್ಲೂ ನಿಮ್ಮ ಮನೆಯಲ್ಲೊಂದು ಹಸುವಿದ್ರೆ ನೀವೇ ಪುಣ್ಯವಂತರು ಬಿಡಿ. ನೋಡಿದರೆ, ಅಮ್ಮಾ ಎಂದು ಸಂಬೋಧಿಸಲು ನಮಗೂ ಪ್ರೇರೇಪಿಸೋ ಹಸು, ನಿಜಕ್ಕೂ ತಾಯಿಯಾದಾಗ, ನಿಮ್ಮ ಮನೆಯೆ ಸ್ವರ್ಗ. ಬರೀ ನಾಲಗೆ ಮಾತ್ರ ಬಳಸಿ ನೆಕ್ಕಿ, ಕರುವಿಗೆ ಶಕ್ತಿ ನೀಡುವ ತಾಯಿ ಹಸು. ಅರೆಕ್ಷಣದಲ್ಲಿ ನಡೆಯಲು ಕಲಿಯುವ ಕರು, ಕೊಟ್ಟಿಗೆಯಿಂದ ಹೊರಹೋದಾಗ ಹಸು ಕೂಗುವ ಧ್ವನಿ, ಅಬ್ಬಾ! ಕರುಣಾಜನಕ. ಇಂತಾ ಹಸುವು ಆಹಾರವಾದಾಗ ಮನಕ್ಕೆ ನೋವಾಗೋದು ಸಹಜ! ತಿನ್ನೋಕೆ ಇನ್ನೂ ತುಂಬಾ ಆಹಾರಗಳಿದಾವೆ ಅಲ್ವಾ?! ತಾಯಿಯಂತಹ ಹಸುವೆ ಬೇಕೆ?

ನನ್ನಮ್ಮ ಇಂದ್ರಾಣಿ! ಎಲ್ಲರ ಅಮ್ಮನಂತೆಯೇ ಮಕ್ಕಳು ಒಂಚೂರು ಹೊರಹೋದರೆ ನಿರೀಕ್ಷೆಯೇ ತಾನಾಗಿ ಕಾಯುವವಳು. ಆಕೆಯೊಮ್ಮೆ ಚಿಂತೆಯೆಲ್ಲಾ ಬಿಟ್ಟು ಮುದ್ದಾಗಿ ನಕ್ಕರೆ ಆಹ್! ಅದೆಷ್ಟು ಖುಷಿ, ಅದೊಂದು ಕ್ಷಣ ಸಮಯ ನಿಂತುಬಿಡುತ್ತೆ! ಈಗಿನ ಎಲ್ಲಾ ಅತ್ತೆ-ಸೊಸೆ ಧಾರಾವಾಹಿಯ ಕಥೆ ಬರೆಯುವವರ, ಕಲ್ಪನೆಗೂ ಮೀರಿದ ಕಷ್ಟ ಸಹಿಸಿಬಂದವಳಾಕೆ! ತನ್ನೆರಡು ಮಕ್ಕಳನ್ನು ಆಕೆ ಬೆಳೆಸಿದ ರೀತಿ ನಿಜಕ್ಕೂ ಮಾದರಿ. ಆಕೆಯ ಸೃಜನಶೀಲತೆಗೆ, ನಾನೇ ಜೀವಂತ ಉದಾಹರಣೆ!! ನನ್ನ ನಾನೇ ಹೊಗಳ್ಕೊಂಡಿದ್ದು ಜಾಸ್ತಿಯಾಯ್ತು ಅಂತಿರಾ! ಹೌದಿರ್ಬೋದು‌.

ಜಗತ್ತಿನಲ್ಲಿನ ಎಲ್ಲಾ ಒಳ್ಳೆಯದಕ್ಕೂ ಕಾರಣ ಅವಳೇ ಅನ್ನೋ ಭಾವನೆ ನಂದು. ಆಗ್ಲೇ ಹೇಳಿದಂತೆ, ಆಕೆಯೂ ಸಹ ಅವಳಮ್ಮನ ಪಾಶೆಯೆಲ್ಲ ಈಗಲೂ ಬಂಧಿ! ಸ್ಮೃತಿ ಪಟಲದಿಂದ ಆಗಾಗ ಅವಳಮ್ಮನ ಕಥೆ ಹೇಳುವಾಗ ಆಕೆಯ ಕಣ್ಣಿನೊಳಗೆ ಮಿಂಚುವ ಉತ್ಸಾಹಕ್ಕೆ ಸಾಟಿಯಿಲ್ಲ!

ಮುಂದಿನ ಸಲ ನನ್ನ ಅಮ್ಮನನ್ನು, ನಿಮ್ಮಲ್ಲಿ ಯಾರಿಗಾದರೂ ನಾನು ಪರಿಚಯಿಸಿದರೆ, ನೆನಪಿಡಿ ನನ್ನಮ್ಮ ದೇವತೆ! ಆಕೆಯೆಡೆ ಗೌರವ ಹಾಗೂ ಹೆಮ್ಮೆಯಿಂದ ನೋಡಿ‌ ನನ್ನಮ್ಮನಿಗೆ ಪ್ರಪಂಚದಲ್ಲಿರೋ ಅದೆಲ್ಲಾ ಖುಷಿಯೂ ದಕ್ಕಬೇಕು. ನನ್ನಮ್ಮನನ್ನು ದೇವನೂ ಸಹ ಸಂಭ್ರಮದಲ್ಲಿ ಎದುರುಗೊಳ್ಳಬೇಕು‌. ಆಕೆಗೆ ಎಲ್ಲಾ ಗೌರವವೂ ಸಲ್ಲಬೇಕು!

ಹಾಂ! ನೀವೂ ನಿಮ್ಮ ಅಮ್ಮನಿಗೆ ಫ಼ೋನ್ ಮಾಡಿ ಮಾತಾಡಿ ಸುಮ್ಮ್ನೆ ಒಂದ್ಸಲ ಇದ್ನ ಓದಿದ್ಮೇಲೆ. ಸುಮ್ನೆ ಕಾರಣ ಇಲ್ದೇನೆ!ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...