'ಸಂ'ಬಂಧ

Posted by ಕಿರಣ್ ಎನ್. ಜಿ on 25-Nov-2016
ಆಧ್ಯಾತ್ಮದಲಿ ವಿಹರಿಸಿದ ಆ ಜೀವಕೆ,
ಹೊರವಲಯ,ಹೊಸನೋಟ,
ಹೊಸತಿರಬೇಕು...!
ಸಿಹಿಗಾಳಿ ಪಸರಿಸಿದ ಆ ಜೀವಕೆ,
ಆಂತರ್ಯದ ಒಳನೋಟ,
ಹಿತವಿರಬೇಕು...!
ಹಿತವೋ ಮತಿಯೋ,
ದೈವ ಸಾನ್ನಿಧ್ಯದ ಪ್ರತಿನಿಧಿಗೆ,
ಲೌಕಿಕ ಜೀವನದ ಭಯವಿರಬೇಕು..!

ಎಷ್ಟು ಪದ ಬಳಸಿದರು,
ನಿನ್ನ ಅರಿಯದ ಪರಿಗೆ,
ನೀನು ಹೆದರಿದಂತೆಲ್ಲ,
ನನ್ನ ಮನ ಹೆದರುತಿದೆ,
ಇರಬಹುದೆ ನಿನ್ನಲ್ಲು ಕೊಂಚ ಸಲುಗೆ...!
ತುಂಬ ಜಟಿಲವಾಗುತಿದೆ
ಹೇಳ ಹೊರಟ ವಿಷಯ,
ನಿನ್ನ ಗೆಳೆಯನಿಗೊಮ್ಮೆ ಹೇಳು,
ಏರಿಸಬೇಡ ಧರೆಯ ಬಿಸಿಯ...!

ಹೇಳ ಹೊರಟಿರುವುದಿಷ್ಟೆ,
ನನ್ನ ಬಳಿ ಇರುವ ಊದಿನ ಕಡ್ಡಿ,
ಎದುರಿರುವ ಪಟಾಕಿಯ ಕಂಡು
ಪ್ರಥಮ ಚುಂಬನಕೆ ಮಾಡುತಿದೆ ಅಡ್ಡಿ,
ಹಬ್ಬದ ಸಮಯದಿ ಯಾಕೆ
ಬೇಕೀ ಸರಸ ಸಲ್ಲಾಪ,
ಗೆಳೆಯನೆದುರು ತೋರಿಸಬೇಕಿದೆ
ಸ್ವಲ್ಪ ಪ್ರಲಾಪ...!

ಘನ ಗಾಂಭೀರ್ಯದಿ ನಿಂತ ಶಬ್ಧ ಪ್ರಕಾಶನಿಗೆ,
ಕೊನೆಗೂ ಆಯಿತು ಪ್ರಥಮ ಚುಂಬನ,
ಸುಮ್ಮನಿರದೆ ಕೂಗಿ ಊರಿಗೆ ಸಾರಿದ,
ಎತ್ತಿ ಹಿಡಿದು ಹಬ್ಬದ ಲಾಂಛನ,
ಲೌಕಿಕ ಅಲೌಕಿಕದ ನಡುವೆ
ಬೆಳಕು ಕತ್ತಲೆಯ ಕಣ್ಣಾಮುಚ್ಚಾಲೆ,
ಯಾವ ಹಬ್ಬ ಬಂದರೂ ಆಂತರ್ಯದಲ್ಲಿ ಬಚ್ಚಿಟ್ಟುಕೊಳ್ಳಿ ನೆನೆಪುಗಳ ಸರಮಾಲೆ..!


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...