ಭಾರತೀಯ ಶಾಸ್ತ್ರೀಯ ಸಂಗೀತದ ಪರಂಪರೆ ಮತ್ತು ಮಹತ್ವದ ಕಿರುಪರಿಚಯ

Posted by ವಿನಯ್ on 25-Nov-2016


ಭಾರತದೊಂದಿಗೆ ಸಂಗೀತದ ನಂಟು ನಿನ್ನೆ ಮೊನ್ನೆಯದಲ್ಲ. ಇದು ಶತಶತಮಾನಗಳಿಂದ ಉಳಿದುಕೊಂಡು ಬಂದಿರುವ ಬೆಸುಗೆ. ಕಾಲಘಟ್ಟದಲ್ಲಿ ಹಲವು ಬದಲಾವಣೆಗಳನ್ನು ಕಂಡಿದ್ದರೂ ತನ್ನ ಮೂಲ ಛಾಪು ಅಚ್ಚಳಿಯದೆ ಉಳಿದಿದೆ. ಇಂದಿಗೂ ಶಾಸ್ತ್ರೀಯ ಸಂಗೀತದ ಶಕ್ತಿ ಅಪಾರ ಮತ್ತು ಇದರ ಕಂಪು ಜಗತ್ತಿನಾದ್ಯಂತ ಪಸರಿಸಿದೆ. ಎಂಥವರಾದರೂ ಸಂಗೀತದ ಮಧುರತೆಗೆ ತಲೆದೂಗುತ್ತಾರೆ.

ಭಾರತೀಯ ಸಂಗೀತವನ್ನು ಮುಖ್ಯವಾಗಿ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಉತ್ತರದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಮತ್ತು ದಕ್ಷಿಣದ ಕರ್ನಾಟಕ ಶಾಸ್ತ್ರೀಯ ಸಂಗೀತ. ನಮ್ಮ ದೇಶದಲ್ಲಿ ಪ್ರಾಂತ್ಯದನುಸಾರ ಹಲವು ಸಂಗೀತದ ಪದ್ಧತಿಗಳಿರುವುದನ್ನೂ ಇಲ್ಲಿ ಅಲ್ಲಗಳಿಯುವಂತಿಲ್ಲ. ಭಾರತೀಯ ಸಂಗೀತದ ಮುಖ್ಯ ಆಧಾರ ಶೃತಿ ಮತ್ತು ಲಯ. ಶೃತಿ, ಸ್ವರಗಳಿಂದ ರಾಗಗಳ ರಚನೆಯಾದರೆ, ಲಯವು ತಾಳದ ತಳಹದಿ. ಹೀಗಾಗಿಯೇ "ಶೃರ್ತಿ ಮಾತಾ, ಲಯಃ ಪಿತಾ" ಎಂದು ನಮ್ಮ ಪ್ರಾಚೀನ ಸಂಗೀತಜ್ಞರು ಸ್ವರವನ್ನು ತಾಯಿಗೂ ಲಯವನ್ನು ತಂದೆಗೂ ಹೋಲಿಸಿದ್ದಾರೆ. ಈ ಹೇಳಿಕೆಯಿಂದ ಸಂಗೀತದಲ್ಲಿ ಸ್ವರ ಮತ್ತು ಲಯದ ಮಹತ್ವವು ನಮಗೆ ತಿಳಿದು ಬರುತ್ತದೆ.

ಹಿಂದೂಸ್ಥಾನಿ ಮತ್ತು ಕರ್ನಾಟಕ ಸಂಗೀತಕ್ಕೆ ತನ್ನದೇ ಆದ ಉಗಮ ಮತ್ತು ಪ್ರಭಾವಗಳಿವೆ. ಉತ್ತರದಲ್ಲಿ ಪರ್ಷಿಯನ್ನರ, ಇಸ್ಲಾಮರ ಪ್ರಭಾವದಿಂದ ಹಲವು ವಾದ್ಯಗಳು ರಚಿತವಾದವು. ಹೀಗಾಗಿ ಇಲ್ಲಿ ಹೆಚ್ಚಿನ ಮಹತ್ವವನ್ನು ವಾದ್ಯಗಳಿಗೆ ನೀಡಲಾಗಿದೆ. ಸಿತಾರ, ಸಂತೂರ್, ಸರೋದ್, ಶಹನಾಯಿ, ತಂಬೂರಿ, ಸಾರಂಗಿ, ತಬಲಾ ಪ್ರಮುಖವಾದವುಗಳು. ಇತ್ತ ದಕ್ಷಿಣದಲ್ಲಿ ವಿಜಯನಗರದ ಸಾಮ್ರಾಜ್ಯದಲ್ಲಿ ಹಲವು ಬೆಳವಣಿಗೆಗಳನ್ನು ಕಂಡಿತು. ಪುರಂದರದಾಸರು ಕರ್ನಾಟಕ ಸಂಗೀತವನ್ನು ಕ್ರಮಬದ್ಧಗೊಳಿಸಿ 'ಕರ್ನಾಟಕ ಸಂಗೀತ ಪಿತಾಮಹ' ಎಂದು ಪ್ರಖ್ಯಾತರಾದರು. ಇಲ್ಲಿ ಹೆಚ್ಚಿನ ಒತ್ತನ್ನು ಗಾಯನಕ್ಕೆ ನೀಡಲಾಗಿದೆ. ವೀಣೆ, ಖಂಜರ, ಪಿಟೀಲು, ನಾಗಸ್ವರ, ಘಟ, ಮೃದಂಗ ಇಲ್ಲಿಯ ಪದ್ಧತಿಯವುಗಳಾಗಿವೆ. ಆದರೆ ಕೊಳಲು ವಾದನವು ಎರಡು ಕಡೆ ಮನ್ನಣೆ ಪಡೆದಿದೆ.

ಸಂಗೀತದೊಂದಿಗೆ ದೈವತ್ವದ ನಂಟು ಮಹತ್ವದ್ದಾಗಿದೆ. ಇದೊಂದು ದೈವಕಲೆಯೆಂದೂ ನಂಬಲಾಗಿದೆ. ತಾಳದ ಉಗಮದ ಬಗ್ಗೆ ಹಲವಾರು ಅಭಿಪ್ರಾಯಗಳಿವೆ. ಶಿವನ ಡಮರುವಿನಿಂದ ತಾಳದ ಉತ್ಪತ್ತಿಯಾಗಿದ್ದು, ತಾಳವು 'ತಲು' ಎಂಬ ಶಬ್ಧದಿಂದ ಉತ್ಪತ್ತಿಯಾಗಿದೆ ಎಂದು ಹೇಳಲಾಗುತ್ತದೆ. ನಾದಬ್ರಹ್ಮ, ಸರಸ್ವತಿ, ಶಾರದೆ, ನಟರಾಜ ಹೀಗೆ ಹಲವು ದೇವತೆಗಳನ್ನು ಕಲೆಯ ಪ್ರಾಪ್ತಿಗಾಗಿ ಪೂಜಿಸಲಾಗುತ್ತದೆ. ರಾಮಾಯಣ, ಮಹಾಭಾರತ ಗ್ರಂಥಗಳಲ್ಲಿ ಸಂಗೀತದ ಉಲ್ಲೇಖನವಿದೆ. ಸಂಗೀತವನ್ನು ಹಾಡಿ ರಾವಣನು ಶಿವನ ಆತ್ಮಲಿಂಗವನ್ನು ಪಡೆದು ತಂದು ಗೋಕರ್ಣದಲ್ಲಿ ನೆಲೆಸಿದ್ದರಿಂದ ಭೂಕೈಲಾಸವಾಯಿತು. ಸಂಗೀತದಿಂದಲೇ ಆಂಜನೇಯನು ಶಿವನನ್ನು ಮೆಚ್ಚಿಸಿದ್ದರಿಂದ ಲಿಂಗ ಪುರಾಣವು ಹುಟ್ಟಿತು. ಸಂಗೀತ ಹಾಡಿ ನಾರದ ನಾದಮಯನಾದನು. ಸಂಗೀತದಿಂದ ಸಂತ ಮೀರಾಬಾಯಿ ಕೃಷ್ಣನನ್ನು ಪ್ರತ್ಯಕ್ಷ ಮಾಡಿಕೊಂಡಳು. ಪುರಂದರದಾಸರು, ಕನಕದಾಸರು ಏಕದಾರಿ ನಾದದಿಂದ ಪರಮಾತ್ಮನನ್ನು ಒಲಿಸಿಕೊಂಡರು. ಸಂಗೀತವೇ ಉಸಿರಾಗಿಸಿಕೊಂಡ ಪಂ. ಪಂಚಾಕ್ಷರಿ ಗವಾಯಿಗಳವರು ಗಾನಯೋಗಿಗಳಾದರು. ಸಾಮವೇದವು ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಬುನಾದಿಯೆಂದೂ ವರ್ಣಿಸಲಾಗುತ್ತದೆ. ಯಾಜ್ಞವಲ್ಕ ಸ್ಮೃತಿಯಲ್ಲಿ ಯಾರು ಸ್ವರ, ರಾಗ ಮತ್ತು ತಾಳದ ಸಂಪೂರ್ಣ ಜ್ಞಾನವನ್ನು ಪಡೆಯುತ್ತಾರೋ ಅವರು ನಿಶ್ಚಿತವಾಗಿಯೂ ಮುಕ್ತಿಯನ್ನು ಪಡೆಯುತ್ತಾರೆ ಎಂದು ಹೇಳಲಾಗಿದೆ. ಭರತನ ನಾಟ್ಯಶಾಸ್ತ್ರವು ಸಂಗೀತದ ನಾಟ್ಯಪ್ರಕಾರಗಳ ಹಲವು ಪುರಾತನ ವಿಧಾನಗಳನ್ನು ಒಳಗೊಂಡಿದೆ.

ಇನ್ನು ಪ್ರಕೃತಿಯಲ್ಲಿಯೂ ಸಂಗೀತವು ಬೆರೆತುಹೋಗಿದೆ. ಪಕ್ಷಿಗಳ, ಪ್ರಾಣಿಗಳ ಶಬ್ಧಗಳೂ, ಸ್ವರಗಳ ಉಗಮಕ್ಕೆ ಪ್ರೇರೇಪಿಸುವವು. ಭೂಮಿಯ ಚಲನೆ, ಕಣ್ಣಿನ ರೆಪ್ಪೆ, ಶ್ವಾಸದ ವೇಗ, ಹೃದಯದ ಬಡಿತ, ಗಡಿಯಾರದ ಗತಿ ಎಲ್ಲವೂ ಲಯಬದ್ಧವಾಗಿವೆ. ವೈದ್ಯಕೀಯ ಕ್ಷೇತ್ರದಲ್ಲೂ ಸಂಗೀತದ ಮಹತ್ವವಿದೆ. ಇಂದಿನ ದಿನಗಳಲ್ಲಿ ಹಲವು ಮಾನಸಿಕ ಬಾಧೆಗಳಿಗೆ ಸಂಗೀತ ಚಿಕಿತ್ಸೆಯನ್ನು ವೈದ್ಯರು ಶಿಫಾರಿಸುತ್ತಾರೆ. ಹಲವಾರು ಸಂಶೋಧನೆಗಳ ಮೂಲಕ ಮನುಷ್ಯನ ಭಾವನೆಗಳ ಮೇಲೆ ಸಂಗೀತದ ಪ್ರಭಾವಗಳನ್ನು ಪರೀಕ್ಷಿಸಲಾಗಿದೆ. ರಾಗಗಳ ಅನುಸಾರ ಮನಸ್ಸಿನಲ್ಲಿ ಶಾಂತ, ಆನಂದ, ದುಃಖವನ್ನೂ ಉಂಟುಮಾಡಬಹುದೆಂದು ಸಾಬೀತಾಗಿದೆ.

ರಾಗ-ತಾಳಗಳ ಬಾಂಧವ್ಯ ಹಾಲು-ಜೇನು ಬೆರೆತಂತೆ ಆಗುತ್ತದೆ. ಸಂಗೀತದ ಸ್ವಾದ ಜೇನುತುಪ್ಪವನ್ನು ಸವಿದಷ್ಟೇ ಸಿಹಿ. ಆನಂದವೆಂಥವುದು? ಎಂದು ಕೇಳಿದರೆ ಸಕ್ಕರೆ ಹೇಗಿದೆ ಎಂದರೆ ಸಿಹಿ ಎಂದು ಹೇಳಬಹುದು, ಸಿಹಿ ಹೇಗಿದೆ ಎಂದರೆ ತಿಂದು ನೋಡಿದರೆ ಗೊತ್ತಾಗುತ್ತದೆ ಎಂದು ಹೇಳಬೇಕಾಗುತ್ತದೆ. ಅನುಭಾವಕ್ಕೆ ಮಾತ್ರ ನಿಲುಕುವ, ಆನಂದವನ್ನು ಕೊಡುವ ಶಕ್ತಿ ಸಂಗೀತಕ್ಕಿದೆ.


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...