ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ??..., ಇರಲಿ ಬಿಡಿ......

Posted by ಸಂಪತ್ ಸಿರಿಮನೆ on 02-Dec-2016
ಚಿತ್ರಮಂದಿರಗಳಲ್ಲಿ ಚಲನಚಿತ್ರಕ್ಕಿಂತ ಮುಂಚೆ ರಾಷ್ಟ್ರಗೀತೆ ಪ್ರಸಾರ ಮಾಡಬೇಕು ಎನ್ನುವ ಸುಪ್ರೀಂ ಕೋರ್ಟ್ ಆದೇಶ ಬಂದ ನಂತರ ಬಹಳಷ್ಟು ಕಡೆಯಿಂದ ವಿರೋಧಗಳೂ ವ್ಯಕ್ತವಾಗುತ್ತಿವೆ. ದೇಶಭಾಷೆ ಸಂಸ್ಕೃತಿಗಳ ಗಂಧಗಾಳಿಯೂ ಇಲ್ಲದ ಕೆಟ್ಟ ಚಲನಚಿತ್ರಗಳ ಮುಂಚೆ ರಾಷ್ಟ್ರಗೀತೆ ಹಾಕುವುದರಿಂದ ಅದರ ಗೌರವ ಕಡಿಮೆಯಾಗುತ್ತದೆ ಎಂದು, ದೈಹಿಕ ತೊಂದರೆಗಳಿರುವವರಿಗೆ ನಿಂತುಕೊಳ್ಳಲು ಕಷ್ಟವಾಗುತ್ತದೆ ಎಂದು, ರಾಷ್ಟ್ರಗೀತೆಗೆ ಎದ್ದುನಿಲ್ಲಬೇಕೆನ್ನುವ ಕಾರಣಕ್ಕೆ ಕಾಟಾಚಾರಕ್ಕೆ ಎದ್ದು ನಿಂತರೆ ಗೌರವ ಸಲ್ಲಿಸಿದಂತೆಯೂ ಆಗುವುದಿಲ್ಲ - ರಾಷ್ಟ್ರಪ್ರೇಮವೂ ಉಕ್ಕುವುದಿಲ್ಲ ಎಂದು, ಹೀಗೆ ಅನೇಕ ಒಪ್ಪತಕ್ಕಂತಹ ವಾದಗಳು ಅಲ್ಲಲ್ಲಿ ತೇಲಿಬರುತ್ತಿವೆ. ಇವುಗಳಲ್ಲಿ ಖಂಡಿತವಾಗಿಯೂ ನಿಜಾಂಶವಿದೆ. ಆದರೆ ನಮ್ಮ ಮನೆ ಪಕ್ಕದಲ್ಲಿ ವಾಸವಾಗಿರುವ, ಆಧುನಿಕ ಪೀಳಿಗೆಯ ಪ್ರತಿನಿಧಿಯೆಂದು ತಮ್ಮನ್ನು ತಾವು ಕರೆದುಕೊಳ್ಳಲಿಚ್ಛಿಸುವ, ಮೊನ್ನೆಯಷ್ಟೇ ಜಿ.ಎಸ್.ಎಮ್. ಗೌಡ ಎಂದು ಹೆಸರು ಬದಲಾಯಿಸಿಕೊಂಡಿರುವ ಗುಡೇಮಾರನಹಳ್ಳಿ ಸಣ್ಣಹಲಗೆ ಮರೀಮಾದಪ್ಪಗೌಡರು ಮುಂದಿಡುವ ಕಾರಣವೇ ಬೇರೆ. "ದಿಸ್ ಈಸ್ ರಬ್ಬಿಶ್, ಒನ್ ಮಂತಿಂದ ಬ್ಯಾಂಕಲ್ಲಿ ಕ್ಯೂ ನಿಂತು ಸಾಕಾಗಿದೆ, ಈಗ ವೀ ಹ್ಯಾವ್ ಟು ಸ್ಟ್ಯಾಂಡ್ ಇನ್ ಥಿಯೇಟರ್ ಆಲ್ಸೋ??!. ಅಲ್ಲಾ, ನಾವು ಸಿನಿಮಾಗಿಂತ ಮುಂಚೆ ಪಾಪ್ಕಾರ್ನ್, ಫ್ರೆಂಚ್ ಫ್ರೈಸ್, ಜಿಂಜರ್ ಬ್ರೆಡ್, ಕೋಕ್ ಎಲ್ಲಾ ಪರ್ಚೇಸ್ ಮಾಡಿ ಪ್ಲೇಟಲ್ಲಿ ತಗೊಂಡುಹೋಗಿರ್ತೀವಿ, ಅದನ್ನ ಆರತಿತಟ್ಟೆ ತರ ಕೈಯಲ್ಲಿ ಹಿಡ್ಕೊಳೋದಾ ಅತ್ವಾ ಎದುರುಗಡೆ ನಿಂತಿರೋರ ತಲೆ ಮೇಲೆ ಇಡೋದಾ ನೀನೇ ಹೇಳು??" ಅಂತ ನನ್ನನ್ನು ಕೇಳಿದರು. ನಾನು ನಂಗೊತ್ತಿಲ್ಲ, ಈ ವಿಚಾರದಲ್ಲಿ ನಾನು ಬಹಿರಂಗ ಹೇಳಿಕೆ ಕೊಡುವುದಿಲ್ಲ, ಇಂತಹ ಘನಗಾಂಭೀರ್ಯ ಸಮಸ್ಯೆ ಪರಿಹರಿಸಲು ಬೇಕಾದ ಪಾಂಡಿತ್ಯವೂ ನನ್ನಲ್ಲಿಲ್ಲ, ನೀವೇ ನೇರವಾಗಿ ವಿಚಾರಿಸಿ ಅಂತ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳ ನಂಬರ್ ಕೊಟ್ಟು ಜಾರಿಕೊಂಡೆ. ಇರಲಿ, ಈಗ ಇವನ್ನೆಲ್ಲಾ ಸ್ವಲ್ಪ ಪಕ್ಕಕ್ಕಿಟ್ಟು ಇನ್ನೊಂದು ದೃಷ್ಟಿಕೋನದಿಂದ ನೋಡಿದರೆ ಬೇರೆಯೇ ಚಿತ್ರಣ ಕಾಣುತ್ತದೆ. ಒಂದು ಸಿನಿಮಾ ನೋಡಲು ಸಮಾಜದ ಎಲ್ಲ ವರ್ಗಗಳ ಜನರು ಬಂದಿರುತ್ತಾರೆ. ಒಮ್ಮೆ ಅಲ್ಲಿ ದೀಪಗಳು ಆರಿದರೆ ನಾವೊಬ್ಬ ಪ್ರೇಕ್ಷಕರು ಮತ್ತು ಪ್ರೇಕ್ಷಕರಷ್ಟೇ. ಚಲನಚಿತ್ರ ನೀರಿನಂತೆ, ಅದಕ್ಕೂ ಜಾತಿ-ಅಂತಸ್ತು-ಮೇಲುಕೀಳೆನ್ನುವ ಬೇಧಭಾವವಿಲ್ಲ. ಅಲ್ಲಿ ಎಲ್ಲರೂ ಒಂದೇ. ಇಡೀ ಕುಟುಂಬ ಅಕ್ಕಪಕ್ಕ ಕೂತಿದ್ದರೂ ಸಿನಿಮಾ ಪ್ರಾರಂಭವಾದಮೇಲೆ ನೀವು ಏಕಾಂಗಿ. ಸುತ್ತಮುತ್ತಲಿನದ್ದೆಲ್ಲಾ ಮಾಯವಾಗಿ ಕೇವಲ ನಿಮ್ಮೊಬ್ಬರ ಮತ್ತು ಸಿನಿಮಾದ ಮಧ್ಯೆ ಒಂದು ವಿಶೇಷ ಬಂಧವೇರ್ಪಡುತ್ತದೆ. ತೆರೆಯ ಮೇಲೆ ಬರುವ ದೃಶ್ಯಗಳಿಗೆ ನಿಮ್ಮೊಳಗಿರುವ ನಿಮ್ಮ ನಿಜವಾದ ಮನಸ್ಸು ಸ್ಪಂದಿಸುತ್ತದೆ. ನೀವು ನಿಮ್ಮ ಭಾವನೆಗಳನ್ನು ತೋರ್ಪಡಿಸಲು ಯಾರಿಗೂ ಭಯಪಡುವ ಅಗತ್ಯವಿಲ್ಲ, ನಾಚಿಕೊಳ್ಳುವ ಅಗತ್ಯವೂ ಇಲ್ಲ. ಯಾಕೆಂದರೆ ನಿಮ್ಮ ಭಾವನೆಗಳ ಅಭಿವ್ಯಕ್ತಿಗೆ ರಕ್ಷಣೆಯಾಗಿ ಅಲ್ಲಿ 'ಕತ್ತಲು' ಆವರಿಸಿರುತ್ತದೆ. ನನ್ನ ಪ್ರಕಾರ ತದೇಕಚಿತ್ತದಿಂದ ಸಿನಿಮಾ ನೋಡುವುದೂ ಒಂದು ಧ್ಯಾನ. ಹೀಗಾಗಿ ಇಂತಹ ಸ್ಥಳದಲ್ಲಿ ಆಗಿನ್ನೂ ಚಲನಚಿತ್ರ ನೋಡಲು ತಯಾರಾಗಿ ಬಂದಿರುವ, ಇನ್ನೂ ತಮ್ಮ ಸೀಟುಗಳಿಗಾಗಿ ತಡಕಾಡುತ್ತಿರುವ, ಸೀಟು ಹಿಡಿದುಕೊಂಡು ಗುಜುಗುಜು ಮಾತನಾಡುತ್ತಾ ಸಿನಿಮಾರಂಭಕ್ಕೆ ಕಾಯುತ್ತಿರುವ ಪ್ರೇಕ್ಷಕರೆದುರು 'ರಾಷ್ಟ್ರಗೀತೆಗೆ ಎದ್ದುನಿಲ್ಲಿ' ಎಂಬ ಸಂದೇಶ ಬಂದಾಗ ಎಲ್ಲವೂ ಒಂದು ನಿಮಿಷ ಸ್ತಬ್ಧವಾಗುತ್ತದೆ. ಪರದೆಯ ಮೇಲೆ ಬೀಸುತ್ತಿರುವ ತ್ರಿವರ್ಣಧ್ವಜದ ಪಲುಕಿಗೆ ಶೋಭೆಯಂತೆ ರಾಷ್ಟ್ರಗೀತೆ ಪ್ರಾರಂಭವಾಗುತ್ತದೆ. ಒಂದೆರಡು ಸಾಲು ಕೇಳುತ್ತಿದ್ದಂತೆ ನೀವು ನಿಧಾನಕ್ಕೆ ಅದರಲ್ಲಿ ಲೀನವಾಗಲು ಶುರುವಿಡುತ್ತೀರಿ. ಕ್ರಮೇಣ ನಿಮಗೆ ನಿಮ್ಮ ಭಾಷೆ, ರಾಜ್ಯ, ಜಾತಿ, ಅಂತಸ್ತುಗಳೆಲ್ಲಾ ಗೌಣವಾಗಿ ನಾನು ಭಾರತೀಯ ಎಂಬ ಅರಿವು ಮೂಡುತ್ತದೆ. ಹಾಗೇ ಹೋಗುತ್ತಾ ಹೋಗುತ್ತಾ ನಾವು ಆರಾಮಾಗಿ ಕಾಲು ಬೀಸಿಕೊಂಡು ರಾತ್ರಿ ಮಲಗಲಿಕ್ಕೆ ಮುಖ್ಯ ಕಾರಣೀಭೂತರಾದ ಸೈನಿಕರು - ಅವರ ತ್ಯಾಗ ಕಣ್ಣೆದುರು ಬರುತ್ತದೆ. ಮೂಲೆಮೂಲೆಗಳಲ್ಲೂ ವಿವಿಧತೆಯನ್ನು ತುಂಬಿಕೊಂಡು ಸಕಲಸೌಂದರ್ಯವನ್ನೂ ಹಾಸಿಹೊದ್ದಿರುವ ನಮ್ಮ ಭಾರತಮಾತೆಯ ಬಗ್ಗೆ ಸಿಕ್ಕಾಪಟ್ಟೆ ಅಭಿಮಾನ ಮೂಡುತ್ತದೆ. ಸ್ವಲ್ಪ ಭಾವುಕಪ್ರಾಣಿಯಾದರೆ 'ಜಯಹೇ' ಬರುವಷ್ಟರ ಹೊತ್ತಿಗೆ ಕಣ್ಣಿಂದ ಒಂದೆರಡು ಹನಿ ಉದುರಲಿಕ್ಕೂ ಸಾಕು. ಅಲ್ಲಿಗೆ ರಾಷ್ಟ್ರಗೀತೆ ಮುಗಿಯುತ್ತದೆ. ನಿಧಾನವಾಗಿ ಸದ್ದಿಲ್ಲದೇ ಎಲ್ಲರೂ ಕೂರುತ್ತಾರೆ. ಎಲ್ಲಾ ಚಪ್ಪನ್ನೂರು ಚಿಂತೆಗಳನ್ನು ಮರೆಸಿ ರಪ್ಪಂತ ಭಾವನೆಗಳ ವಿಶ್ವರೂಪದರ್ಶನ ಮಾಡಿಸುವ ರಾಷ್ಟ್ರಗೀತೆ ನಿಮಗೇ ಗೊತ್ತಿಲ್ಲದಂತೆ ಶುಭ್ರ ಮನಸ್ಸಿನಿಂದ ಚಿತ್ರ ನೋಡಲು ನಿಮ್ಮನ್ನು ಅಣಿಗೊಳಿಸಿರುತ್ತದೆ. ಹಾಗೆಯೇ ಭಾರತೀಯನಾಗಿರುವುದಕ್ಕೆ ಒಂದಿನ್ನೂರೈವತ್ತು ಗ್ರಾಮ್ ಹೆಮ್ಮೆಯನ್ನೂ ಹಾಗೇ ಬದಿಯಲ್ಲೆಲ್ಲೋ ಸೇರಿಸಿರುತ್ತದೆ. ಇಷ್ಟೆಲ್ಲಾ ಲಾಭಗಳಿರುವಾಗ ಚಲನಚಿತ್ರಕ್ಕೆ ಮುಂಚೆ ರಾಷ್ಟ್ರಗೀತೆ ಹಾಕುವುದು ತಪ್ಪೇನಲ್ಲ ಬಿಡಿ. ಅಷ್ಟಕ್ಕೂ ನೀವು ನಿಲ್ಲಬೇಕಾಗಿರುವುದು ಬರೀ ಐವತ್ತೆರಡು ಸೆಕೆಂಡುಗಳು ಮಾತ್ರ. ಅಷ್ಟು ಹೊತ್ತು ನಿಂತರೆ ನಿಮ್ಮ ಎಡಗಾಲಿನ್ ಮೂಳೆಯಲ್ಲೇನೂ ಕ್ರಾಕು ಬರುವುದಿಲ್ಲ ಎಂದು ನಾನು ಗ್ಯಾರಂಟಿ ಕೊಡುತ್ತೇನೆ !!....


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...