ಹನಿಗವನಗಳು

Posted by ಸಂಧ್ಯಾಭಾರತಿ on 05-Dec-2016
* ನಗು *
ನಾ ನಗುವ ಮರೆತಿದ್ದೆ..
ಆ cameraman photo ತೆಗೆವಾಗ smile please..
ಎಂದಾಗ ಮುಸಿಮುಸಿ ಅತ್ತಿದ್ದೆ...

* ಮೌನ *
ಗೆರೆಗಳದೆಷ್ಟನೋ ಎಳೆದೆ ಆದರೆ ತಲುಪಲಾಗಲಿಲ್ಲ ನಿನ್ನ..
ಮಾತುಗಳನೆಷ್ಟೋ ಆಡಿದೆ ಆದರವು ಮುಟ್ಟಿತೆಲ್ಲಿ ನಿನ್ನ..
ಮೌನವಾಗಿ ಹೋದೆ ನಿನ್ನ ಕಳೆದುಕೊಂಡು
ನನಗೆಲ್ಲಿ ಗೊತ್ತಿತ್ತು, ಮೌನ ತಲುಪುವುದು ನಿನ್ನ..

* ಪ್ರಶ್ನೋತ್ತರ *
ಪ್ರಶ್ನೆಗಳಿಗುತ್ತರವೋ, ಉತ್ತರಕೆ ಪ್ರಶ್ನೆಯೋ ಉತ್ತರವಿಲ್ಲ ನನ್ನಲ್ಲಿ ,
ಆದರೆ ಪ್ರಶ್ನೆಗಳಿಗೇನು ಕೊರತೆಯಿಲ್ಲ..
ಕನಸುಗಳ ಪ್ರಶ್ನೆಗಳಿಗೆ,ತಲ್ಲಣಗಳೆ ಉತ್ತರ..
ಮೌನದ ಉತ್ತರಕೆ,ಮತ್ತದೇ ಮಾತಿನ ಕಾತರ ..

* ಮೌನ ಪ್ರೀತಿ *
ಗಾಳಿಯ ಮೌನದಲ್ಲೊಂದು ಪ್ರೀತಿಯ ಪ್ರಸ್ತಾಪ
ಬಿರಿದ ಮೊಗ್ಗುಗಳ ಜೊತೆ ಅರಳಿದ ಪ್ರೀತಿಯ ಸಲ್ಲಾಪ..
ತೂಗಾಡುವ ಕಿವಿಯೋಲೆಗಳ ಸದ್ದಿಗೆ
ಕೆಂಪಾಗುವ ಕೆನ್ನೆಗೆ ಪ್ರೀತಿಯಲ್ಲದೆ ಇನ್ನೇನು ಕಾರಣ
ನಸುನಗುವ ನಾಚಿಕೆಯ ನಡುವೆ ಪ್ರೀತಿಯ ರಿಂಗಣ..
ಮುಷ್ಕರ ಹೂಡಿದ ಮಾತಿನ ಮಧ್ಯೆ ಬರೀ ನಿನ್ನ ಪ್ರೀತಿಯ ಸದ್ದೇ
ಪ್ರೀತಿಯಲಿ ಬಿದ್ದು ಸೋತರೂ ನಾ ಗೆದ್ದೆ..!

* ಸಂತಾಪ *
ಗೆಲುವಿನ ಲೆಕ್ಕ ಹುಟ್ಟಲಿಲ್ಲ
ಬರೀ ಸೋಲುಗಳದೇ ಅಟ್ಟಹಾಸ
ಗೆಲುವಿಗಾಗಿ ಶ್ರಮಪಡಲಿಲ್ಲವೆಂದಲ್ಲ ಆದರೂ ಕಡೆಗೆ ಸೋಲಿನೊಂದಿಗಿನ ಸಂತಾಪ..
ಹೇಳಿದರೆಲ್ಲರೂ ಸೋಲಲ್ಲೇ ಗೆಲುವಿನ ದಾರಿ,
ಛಲ ಬಿಡದೆ ಕಾಪಿಟ್ಟುಕೋ ನಿನ್ನ ಮನ,
... ಅವರಿಗೆ ಗೊತ್ತಿತ್ತೋ ಇಲ್ಲವೋ ಅದು ಗೆಲುವಿನ ಸಮಾಧಿಯ ಮೇಲಿದ್ದ
ಸೋಲಿನ ಮನೆಯ ಮೆಟ್ಟಿಲ ಹಾದಿ..

* ಪ್ರೀತಿ *
ಹೋಗಿ ಬಿಡು ಕಣ್ಣಿಂದ ದೂರ
ಮತ್ತೆ ನಿನ್ನ ಮೇಲೆ ಪ್ರೀತಿ ಹುಟ್ಟುವ ಮೊದಲು..
ಮತ್ತೆ ಪ್ರೀತಿಯ ಸಾಯಿಸುವಾಸೆಯಿಲ್ಲ ನನ್ನ ಕೊಂದುಕೊಂಡು..
.. ನಿನಗೆನ್ನ ಮೇಲೆ ಪ್ರೀತಿ ಹುಟ್ಟುವುದೇ ಇಲ್ಲವಲ್ಲ..
ಹೋಗಿ ಬಿಡಲೇ ನಾನೇ ದೂರ
ಮತ್ತೆ ಪ್ರೀತಿ ಹುಟ್ಟುವ ಮೊದಲು
ಅಥವಾ ನಿಂತು ಕಾಯಲೇ
ನಮ್ಮ ಕಂಗಳು ಮಾತಾಡಲೆಂದು..
ಹೋಗಿ ಬಿಡಲೇ ನಾನೇ ದೂರ
ಮತ್ತೆ ನಿನ್ನ ಪ್ರೀತಿಸುವ ಮೊದಲು
ಅಥವಾ ನಿಂತು ಕಾಯಲೇ
ನೀ ನನ್ನ ಕೈ ಹಿಡಿದು ಪ್ರೀತಿ ನಿವೇದಿಸುವವರೆಗೂ..
ಪ್ರೀತಿಯೇ..,,
ಹೋಗಿ ಹೇಳು ಅವನಿಗೆ ನನ್ನ ಪ್ರೀತಿಯನ್ನು
ನನ್ನ ಅನಂತ ಪಯಣದ ಗುರಿ ಅವನ ಸೇರಲೆಂದು..


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...