ಇಸ್ಸನಿ...!!

ಧೋ ಎಂದು ಸುರಿಯೋ ಮಳೆರಾಯನ ಕೆನ್ನೆಗೆ ನಸುನಾಚಿಕೆಯಿಂದಲೇ ಆಗಾಗ ಕದ್ದುಮುಚ್ಚಿ ಮುತ್ತಿಡುವ ಸವಿಗಾಳಿಯ ಕಚಗುಳಿಯನು ಆಸ್ವಾದಿಸೋ ಈ ಇಸ್ಸನಿ ಅಂದರೆ ಅದೇಕೋ ಮೊದಲಿನಿಂದಲೂ ವಿಶೇಷ ಒಲವು. ಇಸ್ಸನಿಗೆ ಕೈ ಒಡ್ದಿದಾಗೆಲ್ಲ ಅದೇನೋ ಪುಳಕ, ಆಹ್ಲಾದ, ಪ್ರಫುಲ್ಲತೆ...!!! ಅದರಲ್ಲಿ ಮುದನೀಡುವ ಅಮ್ಮನ ಮಡಿಲ ಹಿತ, ಸೋದರಿಯ ಅಪ್ಪುಗೆಯಷ್ಟೆ ನಿರ್ಮಲತೆ, ಕಂದಮ್ಮನ ನಗುವಿನಷ್ಟೆ ಹೊಸತನ, ಪ್ರೇಯಸಿಯ ಪಿಸುಮಾತಿನಷ್ಟೆ ಮಾಧುರ್ಯ. ಅಂತೆಯೇ ಬಳಲಿದ ಜೀವಕೆ ಅದೇನೋ ನವಚೈತನ್ಯ. ಇಂತಹುದೇ ಒಂದು ಸುಂದರ ಹೊಸತನದ ಪರಿಕಲ್ಪನೆಯೇ ಈ ಇಸ್ಸನಿ ಜಾಲತಾಣ. ಕೈತುಂಬ ಕೆಲಸವಿದ್ದರೂ ಕೆಲಸವಿಲ್ಲದೆ ಖಾಲಿಯಿರುವ ತಲೆಗೆ ಏನಾದರೂ ಚುರುಕು ಮುಟ್ಟಿಸಿ ಗರಿಗೆದರಿಸುವ ಆಶಯದ ಜೊತೆಜೊತೆಗೆ ಜನ್ಮತಾಳಿತು ಈ ಕೂಸು. ಅಂದು ಶುರುವಾಯಿತು ನೋಡಿ ಈ ನಮ್ಮ ಕನಸಿನ ಕೂಸಿಗೊಂದು ಚೊಕ್ಕದಾದ ಗೂಡು ಕಟ್ಟೋ ಕೈಂಕರ್ಯ. ಇನ್ನೇನು ಬರುವ ವಸಂತ ಕಾಲದ ತಯಾರಿಯಲಿ ಹೊಟ್ಟೆಗೆ ಹಿಟ್ಟನು ಕೂಡಿಡುವ ಪುಟಾಣಿ ಇರುವೆಗಳ ಆಪ್ಯಾಯಮಾನ ಪ್ರಯತ್ನದಂತೆ ಸುಧೀರ್ಘ ದಿನಗಳ ಅವ್ಯಾಹತ ಶ್ರಮದ ಫಲವೇ ಈ ನಮ್ಮ ಅಲ್ಲಲ್ಲ ನಿಮ್ಮೆಲ್ಲರ ಇಸ್ಸನಿ. ಈ ನಿಮ್ಮ ಇಸ್ಸನಿ ಒಂದು ಕನಸು, ಒಂದು ಭಾವನೆ, ಒಂದು ಪರಿಕಲ್ಪನೆ, ಒಂದು ಸುಂದರ ವೇದಿಕೆ. ನಿಮ್ಮ ಅಂತರಾಳದ ದನಿಗೆ ಕಿವಿಯಾಗಿ ಅದಕೊಂದು ಚಂದದ ರೂಪ ಕೊಡುವುದೇ ಇಸ್ಸನಿಯ ಧ್ಯೇಯ. ಈ ಗೂಡಿನಿಂದ ಕೇಳಿಬರುವ ಕಲರವದಲ್ಲಿ ನಿಮ್ಮ ಅಂತಃಕರಣದ ದನಿಯೂ ಒಂದಾಗಲಿ. ಇಲ್ಲಿ ಯಾವ ನಿರ್ಬಂಧನೆ ಇಲ್ಲ, ಯಾರಪ್ಪಣೆಯೂ ಬೇಕಾಗಿಲ್ಲ. ನೀವು ಮತ್ತು ನಿಮ್ಮ ಆಂತರ್ಯದ ನಡುವಿನ ಒಂದು ಪುಟ್ಟ ಕೊಂಡಿಯಷ್ಟೆ ಈ ಜಾಲತಾಣ. ದನಿಗೆ ಕಿವಿಯಾಗಲು ಅನವರತ ಹಂಬಲಿಸುವ ಈ ಇಸ್ಸನಿ ನಿಮ್ಮ ಪುಟ್ಟ ಕನಸಿಗೊಂದು ನೈಜತೆಯ ಬಣ್ಣ ನೀಡಲಿ. ಈ ಕನಸಿನ ಗೂಡಿಗೆ, ನಿಮ್ಮದೇ ಮನೆಗೆ ನಿಮಗೆ ಸುಸ್ವಾಗತ...!!!

ಅಂಕಣಗಳು

ಕನ್ನಡ ಅಂಕಣಗಳು